ಗರ್ಭಿಣಿಯರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ: ಡಾ. ವೈ. ರಮೇಶ್‍ಬಾಬು

| Published : May 09 2024, 01:03 AM IST / Updated: May 09 2024, 01:04 AM IST

ಗರ್ಭಿಣಿಯರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ: ಡಾ. ವೈ. ರಮೇಶ್‍ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನೆಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ವೈದ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಗರ್ಭಿಣಿಯರಿಗೆ ಸಹಜ ಹೆರಿಗೆ ನೋವು ಹೊರತು ಪಡಿಸಿ, ಯಾವುದೇ ತರಹದ ನೋವು ಕಂಡು ಬಂದರೂ ನಿರ್ಲಕ್ಷ್ಯ ಮಾಡದೆ ಹತ್ತಿರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್‍ಬಾಬು ತಿಳಿಸಿದರು.

ಎಮ್ಮಿಗನೂರು ಗ್ರಾಮದಲ್ಲಿ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಗರ್ಭಿಣಿ ತಾಯಿಯ ಮನೆ ಭೇಟಿ ಕೈಗೊಂಡು ತಾಯಿ ಕಾರ್ಡ್, ತೂಕ, ದೇಹದಲ್ಲಿ ರಕ್ತದ ಪ್ರಮಾಣ ಮುಂತಾದವುಗಳನ್ನು ಪರಿಶೀಲಿಸಿ ಮಾತನಾಡಿದರು.

ಶಿಶು ಮತ್ತು ತಾಯಿ ಮರಣವನ್ನು ತಡೆಗಟ್ಟಲು ಗರ್ಭಿಣಿ ಎಂದು ಗೊತ್ತಾದ ದಿನದಿಂದ ಅಗತ್ಯ ಪರೀಕ್ಷೆಗಳು, ದೇಹದಲ್ಲಿ ರಕ್ತದ ಪ್ರಮಾಣ ಅನುಸಾರ ಕಬ್ಬಿಣಾಂಶ ಮಾತ್ರೆಗಳ ಸೇವನೆ, ತೂಕ, ರಕ್ತದೊತ್ತಡ, ಎಚ್‍ಐವಿ, ಎಚ್‍ಬಿಎಸ್‍ಎಜಿ ಮುಂತಾದ ಅಗತ್ಯ ಪರೀಕ್ಷೆಗೆ ಒಳಗಾಗಬೇಕು ಎಂದು ಸಲಹೆ ನೀಡಿದರು.

ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನೆಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು. ಇವುಗಳ ಜೊತೆಗೆ ಗರ್ಭಾವಸ್ಥೆಯಲ್ಲಿ ಕಂಡುಬರಬಹುದಾದ ತೊಂದರೆಗಳು ಮತ್ತು ಅವುಗಳ ಲಕ್ಷಣಗಳಾಧಾರದ ಮೇಲೆ ತಕ್ಷಣ ವೈದ್ಯರ ಭೇಟಿ ಮಾಡುವಂತೆ ತಿಳಿಸಿದರು.1ರಿಂದ 3 ತಿಂಗಳ ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಗೆ ಗೊತ್ತಿಲ್ಲದೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವ ತೊಂದರೆಯಾಗಿರುತ್ತದೆ. ಗರ್ಭಿಣಿಗೆ ಗರ್ಭನಾಳದಲ್ಲಿ ಅಥವಾ ಗರ್ಭಕೋಶದ ಹೊರಭಾಗದಲ್ಲಿ ಗರ್ಭಕಂಠದ ಹತ್ತಿರ ಗರ್ಭ ನಿಂತಲ್ಲಿ ಅದನ್ನು ಎಕ್ಟೋಪಿಕ್ ಪ್ರೆಗ್ನೆನ್ಸಿ ಎನ್ನಲಾಗುವುದು. ಸಾಮಾನ್ಯವಾಗಿ ಈ ರೀತಿಯ ಗರ್ಭಧಾರಣೆಯಲ್ಲಿ ಕೆಲವೊಮ್ಮೆ ಗರ್ಭಿಣಿಗೆ ತೀವ್ರ ರೀತಿಯ ರಕ್ತಸ್ರಾವ, ಸಹಿಸಲಾಗದ ಅಸಾಧಾರಣ ನೋವು, ತಲೆ ತಿರುಗುವಿಕೆ ಕಂಡುಬರಬಹುದು. ಸಾಮಾನ್ಯವಾಗಿ ಈ ಹಂತದಲ್ಲಿ ಕಾರಣವಿಲ್ಲದೆ ರಕ್ತಸ್ರಾವವಾಗುವುದು, ಇದ್ದಕ್ಕಿದ್ದಂತೆ ಹೊಟ್ಟೆನೋವು ಅಥವಾ ಮೊದಲನೆ ಹೆರಿಗೆ ಸಿಜೆರಿಯನ್ ಆಗಿದ್ದರೆ ನೋವು ಜಾಸ್ತಿ ಕಂಡುಬರುವುದು, ಗರ್ಭ ಕಂಠದ ಮಾರ್ಗ ಸಣ್ಣದಿದ್ದಾಗ, ದುರ್ವಾಸನೆಯುಕ್ತ ಯೋನಿಸ್ರಾವವಾಗುತ್ತಿದ್ದರೆ ನಿರ್ಲಕ್ಷಿಸದೆ ವೈದ್ಯರ ಬಳಿ ತಕ್ಷಣ ತೆರಳಬೇಕು ಎಂದು ತಿಳಿಸಿದರು.

ಕಂಪ್ಲಿ ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಅರುಣ್, ವೈದ್ಯಾಧಿಕಾರಿ ಡಾ. ಫಾರೂಖ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ನರ್ಸಿಂಗ್ ಅಧಿಕಾರಿ ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಬಸವನಗೌಡ, ವಿಘ್ನೇಶ, ಕೃಷ್ಣಮೂರ್ತಿ, ನಂದಾ, ಪೂಜಾ, ಸುಧಾ, ಹನುಮಂತಪ್ಪ, ಶೂಶ್ರೂಷಣಾಧಿಕಾರಿ ಮುತ್ತ್ಯಾಲಮ್ಮ, ಸುಮಿತ್ರಾ, ಆಶಾ ಕಾರ್ಯಕರ್ತೆ ಇಂದಿರಾ ಉಪಸ್ಥಿತರಿದ್ದರು.