ರಿಲ್ಯಾಕ್ಸ್‌ ಮೂಡಿಗೆ ಜಾರಿದ ಗಡ್ಡದೇವರಮಠ

| Published : May 09 2024, 01:03 AM IST / Updated: May 09 2024, 01:04 AM IST

ಸಾರಾಂಶ

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೃತಪಟ್ಟ ಸಂಬಂಧಿಕರು ಹಾಗೂ ಕಾರ್ಯಕರ್ತರ ಆಪ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಸ್ಥರೊಂದಿಗೆ ಕೆಲ ಕಾಲ ಕಳೆದರು

ಗದಗ: ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರ, ಬಿಡುವಿಲ್ಲದ ಓಡಾಟ, ಸರಣಿ ಪ್ರಚಾರ ಸಭೆಗಳು, ನಾಯಕರೊಂದಿಗೆ ಚರ್ಚೆ, ಕಾರ್ಯಕರ್ತರ ಭೇಟಿ ಹೀಗೆ ಕಳೆದ ಒಂದು ತಿಂಗಳಿಂದ ಒತ್ತಡದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಬುಧವಾರ ಪುಲ್‌ ರಿಲ್ಯಾಕ್ಸ್‌ ಮೂಡನಲ್ಲಿದ್ದರು.

ಮಂಗಳವಾರ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಹಾವೇರಿಯಲ್ಲಿ ಹಿರಿಯ ನಾಯಕರೊಂದಿಗೆ ಸುಧಿರ್ಘ ಚರ್ಚೆ ಮಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವ ಶೇಕಡಾವಾರು ಮತದಾನ, ಕಾರ್ಯಕರ್ತರು, ಸಾರ್ವಜನಿಕರ ಸ್ಪಂದನೆ ಕುರಿತು ಚರ್ಚಿಸಿದರು.

ಬುಧವಾರ ಬೆಳಗ್ಗೆಯಿಂದಲೇ ಕುಟುಂಬಸ್ಥರೊಂದಿಗೆ ಸಮಯ ಕಳೆದ ಅವರು, ದಿನಪತ್ರಿಕೆ ಓದಿ, ಟಿವಿ ಸುದ್ದಿ ಗಮನಿಸಿ, ಉಪಾಹಾರ ಸೇವನೆಯ ನಂತರ ಮನೆಗೆ ಆಗಮಿಸಿ ಕಾರ್ಯಕರ್ತರು ಮತ್ತು ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ನಂತರ ಹಳ್ಳಿಗಳಿಗೆ ತೆರಳಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೃತಪಟ್ಟ ಸಂಬಂಧಿಕರು ಹಾಗೂ ಕಾರ್ಯಕರ್ತರ ಆಪ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಸ್ಥರೊಂದಿಗೆ ಕೆಲ ಕಾಲ ಕಳೆದರು. ನಂತರ ಲಕ್ಷ್ಮೇಶ್ವರದಲ್ಲಿನ ಗೆಳೆಯರನ್ನು ಭೇಟಿ ಮಾಡಿ ಅವರೊಂದಿಗೆ ಕೆಲ ಹೊತ್ತು ಹರಟೆ ಹೊಡೆದು ನಂತರ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

ಹುಬ್ಬಳ್ಳಿಯಲ್ಲಿರುವ ತಮ್ಮ ಗೆಳೆಯರ ಬಳಗದೊಂದಿಗೆ ಸಮಯ ಕಳೆದ ಅವರು, ಟಿಕೆಟ್ ಘೋಷಣೆಯಿಂದ ಹಿಡಿದು, ಮತದಾನವರೆಗೂ ನಡೆದ ಎಲ್ಲ ವಿದ್ಯಮಾನಗಳ ಬಗ್ಗೆ ಚರ್ಚಿಸಿ ನಂತರ ಪರಸ್ಪರ ಕಾಲೆಳೆದುಕೊಂಡು ನಗೆಗಡಲಲ್ಲಿ ತೇಲಿದರು.

ಹುಬ್ಬಳ್ಳಿಯಲ್ಲಿಯೂ ಸಹ ಪಕ್ಷದ ಪ್ರಮುಖರು, ಹಿರಿಯ ನಾಯಕರೊಂದಿಗೆ, ವರಿಷ್ಠರೊಂದಿಗೆ ಮಂಗಳವಾರದ ಮತದಾನ, ಚುನಾವಣೆಯ ಆಗುಹೋಗುಗಳ ಬಗ್ಗೆ ಚರ್ಚಿಸಿದರು.

ಮಧ್ಯಾಹ್ನದ ವೇಳೆಗೆ ಅಲ್ಪ‌ ವಿಶ್ರಾಂತಿ ಪಡೆದು ಮತ್ತೆ ಸಂಜೆಯ ವೇಳೆಗೆ ಹುಬ್ಬಳ್ಳಿಯಲ್ಲಿನ ಗೆಳೆಯರೊಂದಿಗೆ ಚಲನಚಿತ್ರ ವೀಕ್ಷಣೆ ಮಾಡುವ ಮೂಲಕ ಮತ್ತಷ್ಟು ರಿಲ್ಯಾಕ್ಸ್ ಆಗಿ ಮನೆಗೆ ಮರಳಿ ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಚುನಾವಣೆ ಸಂದರ್ಭದಲ್ಲಿನ ಒತ್ತಡ ನಿವಾರಿಸಿಕೊಂಡರು.

ಹಾವೇರಿ-ಗದಗ ಲೋಕಸಭಾ ವ್ಯಾಪ್ತಿಯ ಎಲ್ಲ ಶಾಸಕರು, ಮಾಜಿ ಶಾಸಕರು, ಪಕ್ಷದ ನಾಯಕರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು, ಗ್ರಾಮ ಗ್ರಾಮಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ನಿರಂತರ ಪರಿಶ್ರಮ, ಬಿಸಿಲನ್ನು ಲೆಕ್ಕಿಸದೇ ನಡೆಸಿದ ಪ್ರಚಾರದ ಹಿನ್ನೆಲೆಯಲ್ಲಿ ಹೆಚ್ಚಿನ ಅಂತರದಿಂದ ಸಾಧಿಸಲಿದ್ದೇನೆ. ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲ ಓಡಾಟವಾಗಿತ್ತು ಇವತ್ತು ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿದೆ ಎಂದು ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.