ಪತ್ರಕರ್ತನಿಗೆ ಓದುವ ಹವ್ಯಾಸ ಬಹಳ ಮುಖ್ಯ: ಮೈಸೂರು ಮಾನಸ ಗಂಗೋತ್ರಿಯ ಪ್ರೊ.ಎಂ.ಎಸ್. ಸ್ವಪ್ನ

| Published : May 10 2024, 01:32 AM IST

ಪತ್ರಕರ್ತನಿಗೆ ಓದುವ ಹವ್ಯಾಸ ಬಹಳ ಮುಖ್ಯ: ಮೈಸೂರು ಮಾನಸ ಗಂಗೋತ್ರಿಯ ಪ್ರೊ.ಎಂ.ಎಸ್. ಸ್ವಪ್ನ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಳ್ಳುವವರಿಗೆ ಬರವಣಿಗೆ ಬಹಳ ಮುಖ್ಯ. ಅದಕ್ಕಾಗಿ ಹೆಚ್ಚು ಓದಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಪ್ರೊ.ಎಂ.ಎಸ್. ಸ್ವಪ್ನ ಅಭಿಪ್ರಾಯಪಟ್ಟರು. ಹಾಸನದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ಕಾರ್ಯಾಗಾರ । ಮಾಧ್ಯಮ, ಸರ್ಕಾರಿ ಉದ್ಯೋಗ ಮಾಹಿತಿ

ಕನ್ನಡಪ್ರಭ ವಾರ್ತೆ ಹಾಸನ

ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಳ್ಳುವವರಿಗೆ ಬರವಣಿಗೆ ಬಹಳ ಮುಖ್ಯ. ಅದಕ್ಕಾಗಿ ಹೆಚ್ಚು ಓದಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್. ಸ್ವಪ್ನ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಮಾಧ್ಯಮಲೋಕದ ಉದ್ಯೋಗಕ್ಕೆ ಪೂರ್ವಭಾವಿ ತಯಾರಿಗಳು ಹಾಗೂ ಸರ್ಕಾರಿ ಉದ್ಯೋಗಕ್ಕೆ ಪೂರ್ವಭಾವಿ ತಯಾರಿ ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ಇತಿಹಾಸ, ಸಾಹಿತ್ಯ, ವಿಜ್ಞಾನ ಸೇರಿದಂತೆ ಎಲ್ಲಾ ವಿಭಾಗಗಳು ಜ್ಞಾನವನ್ನ ಪಡೆದುಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದರೆ ಜ್ಞಾನವು ಹೆಚ್ಚಾಗುತ್ತದೆ. ಪತ್ರಿಕೋದ್ಯಮ ಅದರದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಯನ್ನು ಕಡ್ಡಾಯವಾಗಿ ಓದಬೇಕು. ಇಂದು ಸಾಮಾಜಿಕ ತಾಣಗಳನ್ನು ಬಳಸುವುದರಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡುತ್ತಿದ್ದಾರೆ. ನಿಮ್ಮ ಆಯ್ಕೆಯ ಕ್ಷೇತ್ರ ಯಾವುದು ಎಂಬುದನ್ನು ನೀವು ನಿರ್ಧರಿಸಿಕೊಳ್ಳಬೇಕು. ಇಂದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಗಾಧವಾದ ಅವಕಾಶಗಳಿವೆ ಅದನ್ನು ಬಳಸಿಕೊಳ್ಳಬೇಕು. ಜನರಲ್ಲಿ ಬದಲಾವಣೆ ತರುವಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ತರವಾಗಿದೆ. ನಾವು ಕೆಲಸದ ಮೂಲಕ ಮಾತನಾಡಬೇಕು’ ಎಂದು ಕಿವಿಮಾತು ಹೇಳಿದರು.

ಹಾಸನ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ.ಬಿ.ಚನ್ನಕೇಶವ, ‘ನಾವು ಕೆಲವೊಮ್ಮೆ ಗುರಿಗಿಂತ ಹೆಚ್ಚಾಗಿ ಆಕರ್ಷಣೆಯ ಕಡೆಗೆ ವಾಲುವುದೇ ಹೆಚ್ಚು. ಸಾಮಾನ್ಯವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವವರೆಲ್ಲರಿಗೂ ಬಡತನದ ಹಿನ್ನೆಲೆ ಇದ್ದೇ ಇರುತ್ತದೆ. ಜ್ಞಾನದಿಂದ ಎಲ್ಲವನ್ನು ಪಡೆಯಬಹುದು. ಸಾಧನೆ ಎಂದರೆ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುವುದೇ ಆಗಿದೆ. ಸ್ಮರ್ಧಾತ್ಮಕ ಪರೀಕ್ಷೆ ಬರೆಯುವ ವ್ಯಕ್ತಿಗೆ ಶ್ರಮ ಹೆಚ್ಚಿರಬೇಕು. ದಿನಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಬೆಂಗಳೂರು ಪ್ರೆಸ್‌ ಇನ್‌ಫರ್‍ಮೆಷನ್ ಬ್ಯೂರೋ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟೀವ್ ದಿಲೀಪ್‌ಕುಮಾರ್ ಎಂ.ಪಿ. ಮಾತನಾಡಿ, ಪತ್ರಿಕೋದ್ಯಮ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಬೇಕಾಗುವುದು ಕೌಶಲ್ಯ ಮತ್ತು ತಾಂತ್ರಿಕ ಜ್ಞಾನ. ಅದನ್ನು ಸರಿಯಾದ ರೀತಿಯಲ್ಲಿ ಕರಗತಗೊಳಿಸಿಕೊಂಡರೆ ಸರಿಯಾದ ನೆಲೆ ಪತ್ರಿಕೋದ್ಯಮದಲ್ಲಿ ದೊರೆಯುತ್ತದೆ ಎಂದು ಹೇಳಿದರು..

ಪ್ರಾಂಶುಪಾಲ ಡಾ.ಎಂ.ಬಿ. ಇರ್ಷಾದ್ ಮಾತನಾಡಿ, ಸಮಾಜದ ಪರಿವರ್ತನೆಗೆ ಲೇಖನಿಯೊಂದೇ ಸಾಕು. ಕೆಲವೊಮ್ಮೆ ಪತ್ರಿಕೋದ್ಯಮ ರಾಷ್ಟ್ರ-ರಾಷ್ಟ್ರಗಳ ಚಿತ್ರಣವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸತ್ಯವನ್ನೇ ಬರೆಯುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಇಒಜೆ ವಿಭಾಗದ ವಿದ್ಯಾರ್ಥಿ ಯಶ್ವಂತ್ ಸಿದ್ಧಪಡಿಸಿದ ಲ್ಯಾಬ್ ಜರ್ನಲ್ ಅನ್ನು ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ಬಿಡುಗಡೆಗೊಳಿಸಿದರು. ವಿಭಾಗದ ವತಿಯಿಂದ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.

ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಉಪನ್ಯಾಸಕರಾದ ಡಾ.ಭವ್ಯ ಎಚ್.ಸಿ., ಶೃತಿ ಹಾಜರಿದ್ದರು. ಮನನ ಪ್ರಾರ್ಥನೆ ಮಾಡಿದರು. ಹರ್ಷಿತಾ ಸ್ವಾಗತಿಸಿದರು. ಐಶ್ವರ್ಯ ನಿರೂಪಣೆ ಮಾಡಿದರು, ಮೇಘನಾ ವಂದಿಸಿದರು. ಹೇಮಾ, ಐಶ್ವರ್ಯ ಮತ್ತು ಯಮುನಾ ಪರಿಚಯಿಸಿದರು.