ಹಿಂದೂ ಧರ್ಮದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ: ಡಾ. ಅಂಜಲಿ

| Published : Apr 27 2024, 01:19 AM IST

ಹಿಂದೂ ಧರ್ಮದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ: ಡಾ. ಅಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣಕ್ಕಾಗಿ ದೇವರನ್ನು ಎಳೆದು ತರಬೇಡಿ ಎಂದು ಬಿಜೆಪಿಯವರಲ್ಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು.

ಹಳಿಯಾಳ: ಹಿಂದೂ ಧರ್ಮದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ, ಗೌರವವಿದೆ. ಬಿಜೆಪಿಯಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ. ಧರ್ಮಕ್ಕೆ ಅಪಾಯ ಇರುವುದು ಬಿಜೆಪಿಗರಿಂದಲೇ ಹೊರತು ಬೇರಾರಿಂದಲ್ಲ ಎಂದು ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಕಿಡಿಕಾರಿದರು.

ಶುಕ್ರವಾರ ತೇರಗಾಂವ ಜಿಪಂ ಕ್ಷೇತ್ರದ ಹವಗಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, ದಯವಿಟ್ಟು ರಾಜಕಾರಣಕ್ಕಾಗಿ ದೇವರನ್ನು ಎಳೆದು ತರಬೇಡಿ ಎಂದು ಬಿಜೆಪಿಯವರಲ್ಲಿ ಮನವಿ ಮಾಡಿದರು.

ಶ್ರೀರಾಮನ ಚಿತ್ರವನ್ನಾಗಲಿ, ಅವರ ಮೂರ್ತಿಯನ್ನಾಗಲಿ ಒಬ್ಬಂಟಿಯಾಗಿ ಕಂಡಿದ್ದು ಅಪರೂಪ. ಶ್ರೀರಾಮ, ಸೀತಾಮಾತಾ, ಲಕ್ಷ್ಮಣ ಮತ್ತು ಹನುಮಂತ ಈ ಪರಿವಾರವನ್ನೇ ನಾವು ನೋಡಿದ್ದೇವೆ. ಹೀಗಿರುವಾಗ ಬಿಜೆಪಿಯವರು ಶ್ರೀರಾಮರನ್ನು ಒಂಟಿಯಾಗಿಸಿದ್ದಾರೆ. ಎಲ್ಲ ಮಂತ್ರಗಳಲ್ಲೂ ಜೈ ಸೀತಾರಾಮ್ ಎಂಬ ಶ್ಲೋಕ ಘೋಷಣೆಯಿದೆ. ಆದರೆ ಬಿಜೆಪಿಯವರು ಜೈ ಶ್ರೀರಾಮ ಘೋಷಣೆಯಷ್ಟೇ ಮಾಡುತ್ತಾರೆ. ಬಿಜೆಪಿಯವರಿಗೆ ಮನೆ ನಡೆಸುವ ಗೃಹಿಣಿ, ಹೆತ್ತ ತಾಯಿ ಹೆಣ್ಣು ಬೇಡವಾದರೆ ಎಂದು ಪ್ರಶ್ನಿಸಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮಹಿಳೆಯರಿಗೆ ಲೋಕಸಭಾ ಟಕೆಟ್ ದೊರೆಯುವುದು ತೀರಾ ಅಪರೂಪ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಆರು ಮಹಿಳೆಯರಿಗೆ ಟಿಕೆಟ್ ನೀಡಿದೆ ಎಂದರು.

ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೇಕರ, ಪುರಸಭಾ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ, ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಮಾಜಿ ಸದಸ್ಯ ಕೈತಾನ ಬಾರಬೋಜ, ಬಿ.ಡಿ. ಚೌಗಲೆ, ಇತರರು ಇದ್ದರು.ರಾಜ್ಯದ ಋಣ ತೀರಿಸಲು ಸಮಾಜ ಸೇವೆಗೆ ಬಂದಿದ್ದೇನೆ: ಡಾ. ಅಂಜಲಿ

ನಾನು ಮುಂಬೈನಲ್ಲಿ ಹುಟ್ಟಿದ್ದರೂ ಕರ್ನಾಟಕ ನನ್ನ ಕರ್ಮಭೂಮಿ. ನಾನು ಕೆಲಸ ಮಾಡುತ್ತಿರುವುದು ಕರ್ನಾಟಕದಲ್ಲಿ. ಕನ್ನಡ ನಾಡಿನ ಅನ್ನ ತಿಂದಿದ್ದೇನೆ. ಆ ಋಣ ತೀರಿಸಲು ಸಮಾಜ ಸೇವೆಗೆ ಬಂದಿದ್ದೇನೆ ಎಂದು ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.ತಾಲೂಕಿನ ಹಂದಲಿ ಗ್ರಾಮದಲ್ಲಿ ಆಯೋಜಿಸಿದ್ದ ಅಂಬಿಕಾನಗರ ಜಿಪಂ ವ್ಯಾಪ್ತಿ ಮಟ್ಟದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ಸಿನವರು ಹೊರಗಿನವರಿಗೆ ಮಣೆ ಹಾಕಿದ್ದಾರೆಂದು ಬಿಜೆಪಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಹುಟ್ಟಿನ ಬಗ್ಗೆ ಬಿಜೆಪಿಯವರು ಚರ್ಚೆ ಮಾಡುತ್ತಿದ್ದಾರೆ. ಹೌದು ನಾನು ಹುಟ್ಟಿದ್ದು ಮುಂಬೈನಲ್ಲಿ. ಬೇಕಿದ್ದರೆ ಜನ್ಮದಾಖಲೆಯನ್ನು ಕೊಡುವೆ. ಇದೇ ಧರ್ಮ, ಜಾತಿ, ಕುಟುಂಬದಲ್ಲಿ ಹುಟ್ಟಬೇಕೆಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ ಎಂದರು.ಸಾವು ಕೂಡ ನಮ್ಮ ಕೈಯಲ್ಲಿಲ್ಲ. ಎಲ್ಲಿ ಸಾಯುತ್ತೇನೆಂದೂ ನಮಗೆ ಗೊತ್ತಿರುವುದಿಲ್ಲ. ಈ ಹುಟ್ಟು- ಸಾವುಗಳ ಮಧ್ಯೆ ಜನರಿಗಾಗಿ ಏನಾದರೂ ಮಾಡಬೇಕೆನ್ನುವುದಷ್ಟೇ ನನಗಿರುವ ಆಪೇಕ್ಷೆಯಾಗಿದೆ ಎಂದರು.