ಪ್ರಜ್ವಲ್ ಬಂಧಿಸುವಂತೆ ಪ್ರತಿಭಟನೆ

| Published : May 08 2024, 01:06 AM IST

ಸಾರಾಂಶ

ಎನ್‌ಡಿಎ ಅಭ್ಯರ್ಥಿ, ಸಂಸದ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಎದ್ದೇಳು ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎನ್‌ಡಿಎ ಅಭ್ಯರ್ಥಿ, ಸಂಸದ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಎದ್ದೇಳು ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ಚರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಮಾನವ ಸರಪಳಿ ನಿರ್ಮಿಸಿ, ಆರೋಪಿಯ ನಡೆಯನ್ನು ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ಇದೊಂದು ನಾಗರೀಕ ಸಮಾಜ ತಲೆತಗ್ಗಿಸುವ ಪ್ರಕರಣ, ಈ ಪ್ರಕರಣ ಬಯಲಾದ ತಕ್ಷಣ ಆರೋಪಿಯನ್ನು ಬಂಧಿಸಬೇಕಾಗಿತ್ತು. ಸರ್ಕಾರ ಎಸ್‌ಐಟಿಯನ್ನು ರಚಿಸಿ, ತನಿಖೆಯನ್ನು ಪ್ರಾರಂಭಿಸಿದೆ, ತನಿಖೆ ವಿಳಂಬವಾಗಬಾರದು, ತಕ್ಷಣ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.ಇದೊಂದು ಅಮಾನವೀಯ, ವಿಕೃತಕಾಮಿಯ ಮನಸ್ಥಿತಿಯನ್ನು ಪ್ರದರ್ಶಿಸುವ ಕೃತ್ಯವಾಗಿದೆ, ತನಿಖೆ ವಿಳಂಬವಾಗಿ ಹಲವಾರು ವರ್ಷಗಳ ನಂತರ ಆರೋಪಿಗೆ ಶಿಕ್ಷೆಯಾದರೆ ಅದು ಸಂತ್ರಸ್ಥರಿಗೆ ನ್ಯಾಯ ಸಿಕ್ಕಂತೆ ಆಗುವುದಿಲ್ಲ. ತಕ್ಷಣ ಆರೋಪಿ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.ಸಂತ್ರಸ್ಥರು ಯಾರು ಹೆದರಬೇಕಾಗಿಲ್ಲ, ಇಡೀ ಕರ್ನಾಟಕ ನಿಮ್ಮ ಹಿಂದೆ ಇದೆ, ಮುಂದೆ ಬಂದು, ಆರೋಪಿಗಳ ನೀಚ ಕೃತ್ಯವನ್ನು ಬಹಿರಂಗಪಡಿಸಿ, ತಲೆತಗ್ಗಿಸಬೇಡಿ, ತಲೆತಗ್ಗಿಸಬೇಕಾದವರು ಆರೋಪಿಗಳು, ತಕ್ಷಣ ಆರೋಪಿಗಳ ವಿರುದ್ದ ಚಾರ್ಚ್‌ ಶೀಟ್ ಹಾಕಿ ಪ್ರತಿದಿನ ತನಿಖೆ ಆಗಿ ಶೀಘ್ರವಾಗಿ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಪುಟ್ಟಮ್ಮ ಮಾತನಾಡಿ, ಇಂತಹ ನೀಚ ಮನಸ್ಥಿತಿಯ ವ್ಯಕ್ತಿ ರಾಜಕಾರಣದಲ್ಲಿ ಮಾತ್ರವಲ್ಲ, ಸಮಾಜದಲ್ಲಿರಲೂ ಸಹ ನಾಲಾಯಕ್ಕು, ಈತನಿಗೆ ಟಿಕೇಟ್ ನೀಡಿದ ಬಿಜೆಪಿ ಮತ್ತು ಜೆಡಿಎಸ್‌ಗೆ ಧಿಕ್ಕಾರ ಎಂದರು. ಪ್ರತಿಭಟನೆಯಲ್ಲಿ ವೀರಭದ್ರನಾಯಕ, ಸುಭಾಷ್ ಮಾಡ್ರಹಳ್ಳಿ, ಮುತ್ತಯ್ಯ, ರಾಜೇಶ್ವರಿ, ಸಾಕಮ್ಮ, ರಾಣಿ, ಪುಟ್ಟೇಗೌಡ, ನಾಗರತ್ನ ಇತರರು ಭಾಗವಹಿಸಿದ್ದರು.