ಪೆನ್‌ಡ್ರೈವ್‌ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ

| Published : May 09 2024, 01:03 AM IST

ಪೆನ್‌ಡ್ರೈವ್‌ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಪ್ಪಲಿ ಹಾರ ಹಾಕಿದ್ದ ಡಿಕೆಶಿ ಪ್ರತಿಕೃತಿಯನ್ನು ಕಸಿದುಕೊಂಡ ಪೊಲೀಸ್ ಅಧಿಕಾರಿಗಳ ಕ್ರಮ ಖಂಡಿಸಿ ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವದ ಪ್ರತಿಭಟನಾಕಾರರು ಡಿಕೆಶಿ ಪ್ರತಿಕೃತಿ ವಾಪಸ್ ಕೊಡುವಂತೆ ಆಗ್ರಹಿಸಿ ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕೆಲ ಕಾಲ ಪ್ರತಿಭಟನೆ ನಡೆಸಿದರಲ್ಲದೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ನಾಗಮಂಗಲ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವದ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪ್ರತಿಕೃತಿಗೆ ಚಪ್ಪಲಿ ಹಾಕಿ ಧಿಕ್ಕಾರದ ಘೋಷಣೆಯೊಂದಿಗೆ ಟಿ.ಮರಿಯಪ್ಪ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಚಪ್ಪಲಿ ಹಾರ ಹಾಕಿದ್ದ ಡಿಕೆಶಿ ಪ್ರತಿಕೃತಿಯನ್ನು ಕಸಿದುಕೊಂಡ ಪೊಲೀಸ್ ಅಧಿಕಾರಿಗಳ ಕ್ರಮ ಖಂಡಿಸಿ ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವದ ಪ್ರತಿಭಟನಾಕಾರರು ಡಿಕೆಶಿ ಪ್ರತಿಕೃತಿ ವಾಪಸ್ ಕೊಡುವಂತೆ ಆಗ್ರಹಿಸಿ ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕೆಲ ಕಾಲ ಪ್ರತಿಭಟನೆ ನಡೆಸಿದರಲ್ಲದೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಠಾಣೆ ಎದುರು ನಡೆಸುತ್ತಿರುವ ಧರಣಿ ಕೈಬಿಡುವಂತೆ ಪೊಲೀಸ್ ಅಧಿಕಾರಿಗಳು ಮಾಜಿ ಶಾಸಕ ಸುರೇಶ್‌ಗೌಡರ ಮನವೋಲಿಸಲು ಪ್ರಯತ್ನಿಸಿದರಾದರೂ ಡಿಕೆಶಿ ಪ್ರತಿಕೃತಿ ವಾಪಸ್ ಕೊಡದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಸುರೇಶ್‌ಗೌಡ ಪಟ್ಟು ಹಿಡಿದರು. ಪರಿಸ್ಥಿತಿಯನ್ನು ಅರಿತ ಅಡಿಷನಲ್ ಎಸ್ಪಿ ತಿಮ್ಮಯ್ಯ ಮತ್ತು ಡಿವೈಎಸ್‌ಪಿ ಡಾ.ಎ.ಆರ್.ಸುಮಿತ್ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಡಿಕೆಶಿ ಪ್ರತಿಕೃತಿಯನ್ನು ಪ್ರತಿಭಟನಾಕಾರರಿಗೆ ಹಿಂದಿರುಗಿಸುತ್ತಿದ್ದಂತೆ ಡಿಕೆಶಿ ಮತ್ತು ಎಲ್.ಆರ್. ಶಿವರಾಮೇಗೌಡರ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆದು ಮೆರವಣಿಗೆ ಮುಂದುವರಿಸಿದರು.

ನಂತರ ನೂರಾರು ಮಂದಿ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಡಿ.ಕೆ.ಶಿವಕುಮಾರ್ ಮತ್ತು ಎಲ್.ಆರ್.ಶಿವರಾಮೇಗೌಡ ಪ್ರತಿಕೃತಿಗಳಿಗೆ ಪೆಟ್ರೋಲ್ ಸುರಿದು ಪಟಾಕಿ ಸುತ್ತಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಪ್ರತಿಕೃತಿ ದಹಿಸಲು ಪೆಟ್ರೋಲ್ ಬಳಸಿದ್ದರಿಂದ ಬೆಂಕಿ ಹಚ್ಚುತ್ತಿದ್ದಂತೆ ಪಟಾಕಿ ಸಿಡಿದು ಬೆಂಕಿಯ ಜ್ವಾಲೆ ಒಮ್ಮೆಲೆ ಹೆಚ್ಚಾಗತೊಡಗಿತು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿಗಳನ್ನು ರಸ್ತೆ ಪಕ್ಕಕ್ಕೆ ತಳ್ಳಿ ನೀರು ಹಾಕಿ ಹೆಚ್ಚಿನ ಅನಾಹುತ ತಪ್ಪಿಸಿದರು. ಪ್ರತಿಭಟನೆಯಿಂದಾಗಿ ಅರ್ಧಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಅಡ್ಡಿ ಯುಂಟಾಗಿತ್ತು.

ಮಾಜಿ ಶಾಸಕ ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮನ್‌ಮುಲ್ ನಿರ್ದೇಶಕ ಕೋಟಿ ರವಿ, ಜಿಪಂ ಮಾಜಿ ಸದಸ್ಯ ಚಂದ್ರೇಗೌಡ, ಮುಖಂಡರಾದ ನಿತೀಶ್, ಪ್ರವೀಣ್‌ಕುಮಾರ್, ಗಿರೀಶ್ ಅಧಿಪತಿ, ಕೋಳಿರಾಮು, ಮುಳಕಟ್ಟೆ ಶಿವರಾಮಯ್ಯ, ಕೆ.ಎಂ.ನಾಗರಾಜು, ದೇವರಾಜು ಸೇರಿ ನೂರಾರು ಮಂದಿ ಇದ್ದರು.