ವಿಶೇಷ ರೈಲು ಟ್ರಬಲ್‌: ಪ್ರಯಾಣಿಕರ ಪರದಾಟ

| Published : May 09 2024, 01:03 AM IST

ಸಾರಾಂಶ

ರೈಲಿನಲ್ಲಿದ್ದ M1, M2, M3 ಎಸಿ ಕೋಚ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ನಡುವೆ ಎಸಿ ನಿರ್ವಹಣೆ ಮಾಡಬೇಕಿದ್ದ ತಾಂತ್ರಿಕ ಸಿಬ್ಬಂದಿ ಕೂಡ ಕೈಕೊಟ್ಟಿದ್ದ. ಹೀಗಾಗಿ ರೈಲಿನ ಎಸಿ ಕೋಚ್‌ಗಳಲ್ಲಿ ತಾಂತ್ರಿಕ ಸಮಸ್ಯೆಯಾದರೂ ಬಗೆಹರಿಸಲು ಸಿಬ್ಬಂದಿ ಇಲ್ಲದಂತಾಗಿತ್ತು.

ಕುಂದಗೋಳ:

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ರೈಲು ತಾಂತ್ರಿಕ ಸಿಬ್ಬಂದಿಯ ಸಮಸ್ಯೆಯಿಂದಾಗಿ ಎರಡ್ಮೂರು ಗಂಟೆ ತಡವಾಗಿ ಸಂಚರಿಸಿದೆ. ಎಸಿ ಬೋಗಿಯಲ್ಲಿನ ಎಸಿ ನಿರ್ವಹಣೆ ಮಾಡಬೇಕಿದ್ದ ತಾಂತ್ರಿಕ ಸಿಬ್ಬಂದಿ ಕೈಕೊಟ್ಟಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಕೊನೆಗೆ ಬೇರೆ ಸಿಬ್ಬಂದಿಯನ್ನು ಕರೆಯಿಸಿ ಸರಿಪಡಿಸಿದ ಬಳಿಕ ರೈಲು ಹೊರಟಿತು. ರಜೆ ಮಾಡಿದ್ದ ತಾಂತ್ರಿಕ ಸಿಬ್ಬಂದಿಯ ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಆಗಿದ್ದೇನು?:

ಸಮ್ಮರ್‌ ಸ್ಪೇಷಲ್‌ ರೈಲು ಇದು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಶ್‌ ಇದ್ದ ಕಾರಣ ಈ ರೈಲನ್ನು ಬೆಂಗಳೂರು- ಹುಬ್ಬಳ್ಳಿ (07392) ಹಾಗೂ ಹುಬ್ಬಳ್ಳಿ ಬೆಂಗಳೂರಿಗೆ ಓಡಿಸಲಾಗಿತ್ತು. ಬೆಂಗಳೂರಿನಿಂದ ಮೇ 6ರಂದು ಬಿಟ್ಟಿದ್ದ ರೈಲು ಸುಸೂತ್ರವಾಗಿ ಆಗಮಿಸಿತ್ತು. ಆದರೆ ಹುಬ್ಬಳ್ಳಿಯಿಂದ ರಾತ್ರಿ 8.20ಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, 9.15ಕ್ಕೆ ಹುಬ್ಬಳ್ಳಿ ‌ರೈಲು ನಿಲ್ದಾಣದಿಂದ ಹೊರಟಿತು. ಕುಂದಗೋಳ ರೈಲು ನಿಲ್ದಾಣ ಬರುವ ಪೂರ್ವದಲ್ಲಿಯೇ ಸಮಸ್ಯೆಯಾಗಿ 2 ಬಾರಿ ಮಾರ್ಗಮಧ್ಯದಲ್ಲೇ ನಿಂತಿತ್ತು. ನಂತರ ರಾತ್ರಿ 11.40ಕ್ಕೆ ಕುಂದಗೋಳ ರೈಲು ನಿಲ್ದಾಣಕ್ಕೆ ಆಗಮಿಸಿತು.

ರೈಲಿನಲ್ಲಿದ್ದ M1, M2, M3 ಎಸಿ ಕೋಚ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ನಡುವೆ ಎಸಿ ನಿರ್ವಹಣೆ ಮಾಡಬೇಕಿದ್ದ ತಾಂತ್ರಿಕ ಸಿಬ್ಬಂದಿ ಕೂಡ ಕೈಕೊಟ್ಟಿದ್ದ. ಹೀಗಾಗಿ ರೈಲಿನ ಎಸಿ ಕೋಚ್‌ಗಳಲ್ಲಿ ತಾಂತ್ರಿಕ ಸಮಸ್ಯೆಯಾದರೂ ಬಗೆಹರಿಸಲು ಸಿಬ್ಬಂದಿ ಇಲ್ಲದಂತಾಗಿತ್ತು. ಇದರಿಂದಾಗಿ ಬೋಗಿಯಲ್ಲಿನ ಎಲ್ಲ ಲೈಟ್‌ಗಳು ಬಂದ್ ಆಗಿದ್ದವು. ವೃದ್ಧರು, ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಯಿತು. ಪ್ರಯಾಣಿಕರು ಮೊಬೈಲ್‌ ಟಾರ್ಚ್‌ ಹಿಡಿದು ಕುಳಿತುಕೊಳ್ಳುವಂತಾಯಿತು.

ಕೆಲ ಪ್ರಯಾಣಿಕರು ಕುಂದಗೋಳದಲ್ಲೇ ಇಳಿದು ಬಸ್‌ಗಳ ಮೂಲಕ ಬೆಂಗಳೂರಿಗೆ ತೆರಳಿದರೆ, ಕೆಲವರು ಖಾಸಗಿ ವಾಹನ ಮಾಡಿಕೊಂಡು ಬೆಂಗಳೂರು ತಲುಪಿದರು. ಇನ್ನುಳಿದ ಪ್ರಯಾಣಿಕರು ತಾಂತ್ರಿಕ ಸಿಬ್ಬಂದಿಯ ದಾರಿ ಕಾಯುತ್ತಾ ರೈಲಿನಲ್ಲೇ ಕುಳಿತರು. ಬಳಿಕ ರೈಲ್ವೆ ಇಲಾಖೆಯೂ ಕೈಕೊಟ್ಟ ಸಿಬ್ಬಂದಿಯನ್ನು ಬಿಟ್ಟು, ಬೇರೆ ತಾಂತ್ರಿಕ ಸಿಬ್ಬಂದಿಯನ್ನು ಕರೆಯಿಸಿ ಎಸಿ ಕೋಚ್‌ನಲ್ಲಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಿತು. ಬಳಿಕವಷ್ಟೇ ರೈಲು ತನ್ನ ಗಮ್ಯ ಸ್ಥಳದತ್ತ ಮತ್ತೆ ಪ್ರಯಾಣ ಮುಂದುವರಿಸಿತು. ಇಷ್ಟೆಲ್ಲ ಆಗಬೇಕಾದರೆ ಸರಿಸುಮಾರು 2-3 ಗಂಟೆ ವಿಳಂಬವಾಯಿತು. ಪ್ರಯಾಣಿಕರು ಪರದಾಡುವಂತಾಯಿತು. ಹೀಗಾಗಿ ಬೆಂಗಳೂರನ್ನು ಸರಿಸುಮಾರು 2 ಗಂಟೆಗೂ ಹೆಚ್ಚು ಕಾಲ ತಡವಾಗಿ ರೈಲು ತಲುಪಿದೆ.

ಇಲಾಖೆ ವಿಚಾರಣೆ:

ಈ ನಡುವೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೇ ಕೆಲಸಕ್ಕೆ ಗೈರಾಗಿದ್ದ ತಾಂತ್ರಿಕ ಸಿಬ್ಬಂದಿಯ ಮೇಲೆ ಇದೀಗ ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.ಹುಬ್ಬಳ್ಳಿ-ಬೆಂಗಳೂರು ಸಮ್ಮರ್‌ ಸ್ಪೆಷಲ್‌ ರೈಲಿನ ಎಸಿ ಕೋಚ್‌ನಲ್ಲಿ ತಾಂತ್ರಿಕ ಸಮಸ್ಯೆಯಾಗಿತ್ತು. ಆದರೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಬೇರೆ ಸಿಬ್ಬಂದಿ ಕರೆಯಿಸಿ ಸಮಸ್ಯೆ ಬಗೆಹರಿಸಿ ರೈಲು ಸಂಚಾರ ಮುಂದುವರಿಸಲಾಯಿತು. ಹೀಗಾಗಿ ರೈಲು ಸಂಚಾರ ವಿಳಂಬವಾಗಿದೆ. ಸಿಬ್ಬಂದಿ ಮೇಲೆ ಇದೀಗ ಇಲಾಖೆ ವಿಚಾರಣೆ ನಡೆಯುತ್ತಿದೆ ಎಂದು ನೈಋತ್ಯ ರೈಲ್ವೆ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದರು.