ಪ್ರತಿ ಲೀಟರ್‌ ಹಾಲಿಗೆ ಹೆಚ್ಚು ಹಣ ನೀಡುತ್ತಿರುವ ಕೋಚಿಮುಲ್

| Published : May 09 2024, 01:03 AM IST / Updated: May 09 2024, 10:47 AM IST

ಪ್ರತಿ ಲೀಟರ್‌ ಹಾಲಿಗೆ ಹೆಚ್ಚು ಹಣ ನೀಡುತ್ತಿರುವ ಕೋಚಿಮುಲ್
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲ ಬರಬಹುದೆಂಬ ನಿರೀಕ್ಷೆಯಿಂದ ಮೊದಲೇ1702 ಎಕರೆಗೆ ಜೋಳದ ಮೇವು ಬೆಳೆಯಲು ಪ್ರತಿ ಎಕರೆಗೆ ಜೋಳ ಹಾಗೂ ಪ್ರೋತ್ಸಾಹಧನ 3 ಸಾವಿರ ರೈತರಿಗೆ ನೀಡಿದ್ದರಿಂದ ರೈತರಿಗೆ ಮೇವಿನ ಬರ ಕಾಡಲಿಲ್ಲ. ಹಾಲು ಉತ್ಪಾದನೆಯೂ ಹೆಚ್ಚಾಗಿದೆ

 ಚಿಂತಾಮಣಿ :  ಅವಿಭಜಿತ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಮೇವು ಮತ್ತು ನೀರಿಗೆ ತೊಂದರೆ ಉಂಟಾಗಿದ್ದರೂ ಕೋಚಿಮುಲ್ ಒಕ್ಕೂಟ ಹಾಲು ಉತ್ಪಾದಕರಿಗೆ ಮೇವು ಒದಗಿಸಲು 3 ಸಾವಿರ ರು. ಪ್ರೋತ್ಸಾಹಧನ ಹಾಗೂ ಉಚಿತವಾಗಿ ಜೋಳ ನೀಡುವ ಮೂಲಕ ಉತ್ಪಾದಕರ ಪರವಾಗಿದೆ, ಮಾಹಿತಿ ಕೊರತೆಯಿಂದ ಕೋಚಿಮೂಲ್‌ನ ಮಾಜಿ ಅಧ್ಯಕ್ಷ ಕೆ.ವಿ. ನಾಗರಾಜ್ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಕೋಚಿಮೂಲ್ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣ ಬಾಬು ತಿರುಗೇಟು ನೀಡಿದ್ದಾರೆ.ನಗರದ ಕೋಚಿಮುಲ್‌ನ ಉಪಶಿಬಿರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ.ವಿ. ನಾಗರಾಜ್ ನೀಡಿರುವ ಹೇಳಿಕೆಯಲ್ಲಿ 7 ತಿಂಗಳನಿಂದ ಹೈನುಗಾರರಿಗೆ ಸರಿಯಾಗಿ ಪ್ರೋತ್ಸಾಹಧನ, ಮೇವು, ರಾಸುಗಳಿಗೆ ನೀರು ಒದಗಿಸುತ್ತಿಲ್ಲವೆಂದು ಆರೋಪಿಸಿರುವುದು ಸತ್ಯಕ್ಕೆ ದೂರ ಎಂದರು. ಲೀಟರ್‌ಗೆ ₹33.40 ದರ

ರಾಜ್ಯದ ಹದಿನಾಲ್ಕು ಹಾಲು ಒಕ್ಕೂಟಗಳ ಪೈಕಿ ಫ್ಯಾಟ್ ಮತ್ತು ಎಸ್‌ಎನ್‌ಎಫ್ ಆಧಾರದ ಮೇಲೆ ಒಂದು ಲೀಟರ್‌ಗೆ ೩೩.೪೦ ರು.ಗಳಂತೆ ಹಾಲು ಖರೀದಿಸುತ್ತಿರುವ ಏಕೈಕ ಒಕ್ಕೂಟವೆಂದರೆ ಅದು ಕೋಚಿಮುಲ್‌ ಮಾತ್ರ. ಇದನ್ನು ನಾಗರಾಜ್ ತಿಳಿದುಕೊಳ್ಳಬೇಕು, ಗೊತ್ತಿಲ್ಲದಿದ್ದರೆ ತಿಳಿದುಕೊಂಡು ಮಾತನಾಡುವುದು ಉತ್ತಮವೆಂದು ಸಲಹೆ ನೀಡಿದ್ದಾರೆ. ಬರಗಾಲ ಬರಬಹುದೆಂಬ ನಿರೀಕ್ಷೆಯಿಂದ ಮೊದಲೇ ೧೭೦೨ ಎಕರೆಗೆ ಜೋಳದ ಮೇವು ಬೆಳೆಯಲು ಪ್ರತಿ ಎಕರೆಗೆ ಜೋಳ ಹಾಗೂ ಪ್ರೋತ್ಸಾಹಧನ ೩ ಸಾವಿರ ರೈತರಿಗೆ ನೀಡಿದ್ದರಿಂದ ರೈತರಿಗೆ ಮೇವಿನ ಬರ ಕಾಡಲಿಲ್ಲ. ಕಳೆದ ವರ್ಷ ನಮ್ಮ ಅವಳಿ ಜಿಲ್ಲೆಯಲ್ಲಿ ೭.೫೦ ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದ್ದು, ಈ ಬಾರಿ ಮೇವು ಶೇಖರಣೆಯಿಂದ ೧೦.೫೦ ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದ್ದು, ಜೊತೆಗೆ ಪ್ರೋತ್ಸಾಹಧನ ನೀಡುತ್ತಿದ್ದೇವೆ ಎಂದರು.ಮೀಸಲು ಹಣ ಎಲ್ಲಿ ಹೋಯ್ತು?

ಹಿಂದಿನ ಸರ್ಕಾರ 2023 ನೇ ಸಾಲಿನ ಬಜೆಟ್‌ನಲ್ಲಿ 700  ಕೋಟಿ ರು. ಗಳನ್ನು ಹೈನುಗಾರಿಕೆಗಾಗಿ ಮೀಸಲಿಟ್ಟಿದ್ದು, ಆ ಹಣ ಫಲಾನುಭವಿಗಳಿಗೆ ಸೇರಿಲ್ಲ ಅದು ಎಲ್ಲಿ ಸೋರಿಕೆಯಾಗಿದೆಯೆಂಬುದನ್ನು ಕೆ.ವಿ. ನಾಗರಾಜ್ ತಿಳಿಸಲೆಂದ ಅವರು ಸಮರ್ಪಕ ಮಾಹಿತಿಯನ್ನು ತಿಳಿದುಕೊಳ್ಳದೆ ಕೇವಲ ಪುಕ್ಕಟೆ ಪ್ರಚಾರಕ್ಕಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಕೆ.ವಿ. ನಾಗರಾಜ್ ಘನತೆಗೆ ಗೌರವಕ್ಕೆ ಸಲ್ಲವುದಿಲ್ಲವೆಂದು ವೈ.ಬಿ. ಅಶ್ವತ್ಥನಾರಾಯಣ ಬಾಬು ಕಿಡಿಕಾರಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಹೂವಿನ ಮಾರುಕಟ್ಟೆಗೆ ೧೫ ಎಕರೆ ಜಮೀನು ಗುರುತಿಸಿ ಅಂತಾರಾಷ್ಟ್ರೀಯ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಈಗಿನ ಸಚಿವರು ಮುಂದಾಗಿದ್ದಾರೆ, ಮಾಜಿ ಸಚಿವ ಡಾ.ಕೆ ಸುಧಾಕರ್ ತಮ್ಮ ಅಧಿಕಾರವಧಿಯಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಏನು ಕ್ರಮ ವಹಿಸಿದ್ದರು ಎಂಬುದರ ಬಗ್ಗೆ ಬಹಿರಂಗ ಚರ್ಚಗೆ ಬರುವಂತೆ ಕೆ.ವಿ ನಾಗರಾಜ್‌ಗೆ ಸವಾಲು ಹಾಕಿದರು.