12ರಂದು ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವ: ಡಾ.ಬಸವನಗೌಡ

| Published : May 10 2024, 01:34 AM IST

ಸಾರಾಂಶ

ದೇಸೀಯ ಬೀಜ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವವನ್ನು ನಗರದ ಐಸಿಎಆರ್‌- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೇ 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಐಕಾಂತಿಕಾ ಸಂಸ್ಥೆಯ ರಾಘ‍ವ, ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ ಹೇಳಿದ್ದಾರೆ.

- ದೇಸಿ ಬೀಜ ವೈವಿಧ್ಯತೆ ಜನಜಾಗೃತಿ ಉದ್ದೇಶ । ಬೀಜಮಾತೆಯರಾದ ಮೈಸೂರು ಪದ್ಮಾವತಮ್ಮ, ಕೋಲಾರ ಪಾಪಮ್ಮ ಅವರಿಂದ ಚಾಲನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದೇಸೀಯ ಬೀಜ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವವನ್ನು ನಗರದ ಐಸಿಎಆರ್‌- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೇ 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಐಕಾಂತಿಕಾ ಸಂಸ್ಥೆಯ ರಾಘ‍ವ, ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಪಾಪಮ್ಮ, ಪ್ರಧಾನಮಂತ್ರಿಗಳಿಂದ ಸನ್ಮಾನಿತ ಮೈಸೂರಿನ ಬೀಜಮಾತೆ ಪದ್ಮಾವತಮ್ಮ ''''''''ಪಾರಂಪರಿಕ ಬೀಜೋತ್ಸವ'''''''' ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆವರೆಗೆ ಬೀಜೋತ್ಸವ ನಡೆಯಲಿದೆ ಎಂದರು.

ಬೀಜ ಎಂಬುದು ಬಿತ್ತನೆ ವಸ್ತುವಲ್ಲ, ಅದು ಕೃಷಿಯ ಜೀವನಾಡಿಯಾಗಿದೆ. ಅಕ್ಕಡಿ, ಮಿಶ್ರಬೆಳೆ, ನವಧಾನ್ಯದಂತಹ ಹಲವಾರು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿಡಲಾಗಿದೆ. ಒಕ್ಕಲು ಮಕ್ಕಳ ಜೀವಾಳವಾದ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದೆ. ಪ್ರಸ್ತುತ ಎದುರಾದ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರಾದಾಯಿಕ ತಳಿಗಳಿಗೆ ನಾವೆಲ್ಲ ಆದ್ಯತೆ ನೀಡಬೇಕಿದೆ. ದೇಸೀಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು, ಗ್ರಾಹಕರಿಗೆ ಅರಿವು ಮೂಡಿಸಲು ಐಸಿಎಆರ್‌- ತರಳಬಾಳು ಕೃಷಿವಿಜ್ಞಾನ ಕೇಂದ್ರ, ಐಕಾಂತಿಕಾ ಸಂಸ್ಥೆ, ಸಹಜ ಸಮೃದ್ಧ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯಿಸುವ ಉದ್ದೇಶವಿದೆ. ಕರ್ನಾಟಕದ ಬೀಜ ಸಂರಕ್ಷಕರನ್ನೆಲ್ಲಾ ಒಂದೇ ವೇದಿಕೆಯಡಿ ತಂದು, ಕರ್ನಾಟಕ ಬೀಜ ಸಂರಕ್ಷಕರ ಬಳಗ ಹುಟ್ಟು ಹಾಕುವ ಕನಸು ಹೊಂದಿದ್ದೇವೆ. ಕರ್ನಾಟಕವು ಬೀಜ ವೈವಿಧ್ಯದ ತಾಣವಾಗಿದೆ. ರತ್ನಚೂಡಿ, ರಾಜಮುಡಿ, ಆಲೂರು ಸಣ್ಣ, ಗಂಧಸಾಲೆಯಂತಹ ದೇಸಿ ಬತ್ತ, ಕರಿಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲೆನಂತಹ ನೂರಾರು ಸಿರಿಧಾನ್ಯಗಳು, ಮಟ್ಟುಗಳ್ಳ, ಈರಂಗೆರೆ ಬದನೆ ಬೀಜಗಳ ತಾಣ ಇದಾಗಿದೆ ಎಂದು ವಿವರಿಸಿದರು.

ಬ್ಯಾಡಗಿ ಮೆಣಸಿನಕಾಯಿ, ತಂಬೂರಿ ಸೋರೆ, ಮಂತು ಕುಂಬಳ, ಕಾಶಿ ಟೊಮೆಟೋದಂತಹ ತರಕಾರಿ, ಕೆಂಪು ಹಲಸು, ದೇವನಹಳ್ಳಿ ಚಕ್ಕೋತ, ಏಲಕ್ಕಿ, ರಸಬಾಳೆಯಂತಹ ಹಣ್ಣಿನ ತಳಿಗಳು ಕನ್ನಡ ನಾಡಿನ ಬೀಜ ವೈವಿಧ್ಯದ ಎಣಿಕೆಗೆ ದಕ್ಕದಷ್ಟು, ಬಗೆದಷ್ಟು ಅಗಾಧವಾಗಿದೆ. ವಾಣಿಜ್ಯ ಬೆಳೆಗಳ ಹಾವಳಿಯಿಂದಾಗಿ ಇಂತಹ ಅಪರೂಪದ ಬೀಜ ವೈವಿಧ್ಯ ಕಣ್ಮರೆಯಾಗುತ್ತಿದೆ. ಅಂತಹ ತಳಿಗಳನ್ನೂ ಪರಿಚಯಿಸುವ, ವಿಸ್ತರಿಸುವ ಆಲೋಚನೆ, ತಾರಸಿ ತೋಟದ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಇದು ಎಂದು ಅವರು ತಿಳಿಸಿದರು.

ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ ಮೆಣಸು, ಹಾಲುಬ್ಬಲು, ಜೇನುಗೂಡು ರಾಗಿ, ಮರ ಸಜ್ಜೆಯಂತಹ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ. ಪೋಷಕಾಂಶಗಳ ಆಗರವಾದ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ, ಮಳೆ ವೈಪರೀತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಮಾಹಿತಿ ನೀಡಿದರು.

ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನ ಪ್ರದರ್ಶನಕ್ಕೆ ಬರಲಿದೆ. ನೈಸರ್ಗಿಕವಾಗಿ ಬೆಳೆದ ಮಾವು ಮಾರಾಟವಾಗಲಿದೆ. ಬೀಜ ಉತ್ಸವದ ಅಂಗವಾಗಿ ಪರಿಸರ ಪ್ರಿಯರಿಗಾಗಿ ''''''''ನಮ್ಮ ತೋಟದಿಂದ ನಮ್ಮ ಊಟ'''''''' ಕಾರ್ಯಕ್ರಮವಿದೆ. ಕೈತೋಟ ಆಸಕ್ತರನ್ನು ಒಗ್ಗೂಡಿಸಿ, ''''''''ಪೌಷ್ಟಿಕ ಕೈತೋಟ ಒಕ್ಕೂಟ'''''''' ರಚನೆ ಆಗಲಿದೆ. ತೆನೆ ತೋರಣ, ಕೃಷಿ ಆಚರಣೆ ಪ್ರದರ್ಶನ, ರೈತ ವಿಜ್ಞಾನಿಗಳ ಅನುಭವ ಹಂಚಿಕೆ ಇರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಬೀಜ ಸಂರಕ್ಷಕರು ಪರಸ್ಪರ ಕಲೆತು. ಚರ್ಚಿಸಿ ರಾಜ್ಯ ಮಟ್ಟದ ಬೀಜ ಸಂರಕ್ಷಕರ ಒಕ್ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಹೆಚ್ವಿನ ಮಾಹಿತಿಗೆ ಮೊ: 97431-40939, 88672-02370 ಇಲ್ಲಿಗೆ ಸಂಪರ್ಕಿಸಲು ಮನವಿ ಮಾಡಿದರು.

ಸಹಜ ಕೃಷಿಕರಾದ ಹನುಮಂತಪ್ಪ, ಸುಜಿತಕುಮಾರ ನಿಟ್ಟೂರು, ಅಭಿಷೇಕ್, ಸುಪ್ರಿಯಾ ಇತರರು ಇದ್ದರು.

- - -

ಬಾಕ್ಸ್‌ ವಿವಿಧ ದೇಸಿ ತಳಿಗಳ ಪ್ರದರ್ಶನ ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ. 1 ಸಾವಿರಕ್ಕೂ ಅಧಿಕ ದೇಸಿ ಧಾನ್ಯ, ಧಾನ್ಯ, ತರಕಾರು, ಕಾಳು, ಗೆಡ್ಡೆ ಗೆಣಸು, ಸೊಪ್ಪು, ಹಣ್ಣಿನ ತಳಿಗಳು ಪ್ರದರ್ಶನಕ್ಕೆ ಬರಲಿವೆ. ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜ ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ''''''''ಸಿದ್ಧ ಹಲಸು'''''''', ಇತರೆ ಹಣ್ಣಿನ ಗಿಡ ಮಾರಾಟಕ್ಕಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಸಾವಯವ ಮಳಿಗೆ, ರೈತ ಉತ್ಪಾದಕರ ಗುಂಪು ಬೇಳೆ ಕಾಳುಗಳು, ಹಣ್ಣುಗಳ ಮಾರಾಟ ಏರ್ಪಡಿಸಲಾಗಿದೆ.

- - - -9ಕೆಡಿವಿಜಿ1:

ದಾವಣಗೆರೆಯಲ್ಲಿ ಐಕಾಂತಿಕಾ ಸಂಸ್ಥೆಯ ರಾಘವ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಡಾ. ಎಂ.ಜಿ. ಬಸವನಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.