ಚಕ್ರಬಸವಣ್ಣ ಸ್ವಾಮಿ ವಿಗ್ರಹ ಪಕ್ಕಕ್ಕೆ ಸರಿಸಿ ನಿಧಿ ಶೋಧನೆ

| Published : May 10 2024, 01:40 AM IST

ಸಾರಾಂಶ

ಮಾಗಡಿ: ಕೆಂಪೇಗೌಡರು ಕಟ್ಟಿಸಿದ ಸೋಮೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲೆಸಿರುವ ಚಕ್ರಬಸವಣ್ಣ ವಿಗ್ರಹವನ್ನು ಕಿಡಿಗೇಡಿಗಳು ನಿಧಿಯಾಸೆಗಾಗಿ ಪಕ್ಕಕ್ಕೆ ಸರಿಸಿದ್ದಾರೆ.

ಮಾಗಡಿ: ಕೆಂಪೇಗೌಡರು ಕಟ್ಟಿಸಿದ ಸೋಮೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲೆಸಿರುವ ಚಕ್ರಬಸವಣ್ಣ ವಿಗ್ರಹವನ್ನು ಕಿಡಿಗೇಡಿಗಳು ನಿಧಿಯಾಸೆಗಾಗಿ ಪಕ್ಕಕ್ಕೆ ಸರಿಸಿದ್ದಾರೆ.

ಕೆಂಪೇಗೌಡರು 500 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿರುವ ಸೋಮೇಶ್ವರ ಸ್ವಾಮಿ ದೇವಸ್ಥಾನದ ಹಿಂಭಾಗದ ಬಂಡೆ ಮೇಲೆ ಗೋಪುರ ಕಟ್ಟಿಸಿ ನಂದಿ ವಿಗ್ರಹವನ್ನು ಸ್ಥಾಪನೆ ಮಾಡಿದ್ದರು. ಕಿಡಿಗೇಡಿಗಳು ಮಂಗಳವಾರ ರಾತ್ರಿ ಬಸವಣ್ಣ ಸ್ವಾಮಿಯ ತಳಭಾಗವನ್ನು ಹಾರೆಯಿಂದ ಅಗೆದು ಶೋಧನೆ ಮಾಡಿ ವಿಗ್ರಹವನ್ನು ಅರ್ಧ ಅಡಿ ಪಕ್ಕಕ್ಕೆ ಸರಿಸಿ ಹಾಗೆ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಹೊಸಹಳ್ಳಿಯ ಮುಖಂಡರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಹೊಸಹಳ್ಳಿ ಗ್ರಾಮಸ್ಥರು ಪ್ರತಿ ವರ್ಷವೂ ಭರಣಿ ಮಳೆ ಬರುವ ಹಿನ್ನೆಲೆಯಲ್ಲಿ ಬಸವಣ್ಣನಿಗೆ ಆರತಿ ತಳಿಗೆ ವಿಶೇಷ ಪೂಜೆ ಸಲ್ಲಿಸುವುದು ರೂಢಿ. ವಿಶೇಷ ಪೂಜೆ ಸಲ್ಲಿಸಿದ ಮರುದಿನ ಮಳೆಯಾಗುವ ನಂಬಿಕೆ ಇದ್ದು ಸೋಮವಾರ ಕೂಡ ಚಕ್ರ ಬಸವಣ್ಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಬುಧವಾರ ಪಟ್ಟಣದಲ್ಲಿ ಭರ್ಜರಿ ಮಳೆ ಸುರಿದಿತ್ತು. ಸೋಮವಾರ ಸಂಜೆವರೆಗೂ ಗ್ರಾಮಸ್ಥರು ಚಕ್ರಬಸವಣ್ಣ ಸ್ವಾಮಿ ಗೋಪುರದ ಸಮೀಪ ಪೂಜೆ ಮಾಡಿ ಅಲ್ಲಿಯೇ ಇದ್ದರು. ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಬುಧವಾರ ಗೋಪುರದ ಪಕ್ಕದ ಜಮೀನಿನ ಮಾಲೀಕರು ನೋಡಿದ್ದು ಗುರುವಾರ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಭೇಟಿ ನೀಡಿ ಯಾರು ಈ ರೀತಿ ಕೃತ್ಯ ಮಾಡಿದ್ದಾರೆ, ಅವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರಾಚ್ಯ ವಸ್ತು ಇಲಾಖೆಯ ನಿರ್ಲಕ್ಷ್ಯ:

ಸೋಮೇಶ್ವರ ಸ್ವಾಮಿ ದೇವಸ್ಥಾನ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದು, ಇಂತಹ ಘಟನೆಗಳು ನಡೆದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ ವಹಿಸುತ್ತಿದ್ದು ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದೆ ಕಳ್ಳತನ ನಡೆದಿತ್ತು. ದೇವಸ್ಥಾನದ ಮೂಲೆ ಗೋಪುರವನ್ನು ಕಳ್ಳರು ಒಡೆದು ಶಿಥಿಲಗೊಳಿಸಿದ್ದರು. ಆಗಲೂ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಭಿವೃದ್ಧಿ ಪಡಿಸುವ ಕೆಲಸವನ್ನು ಪ್ರಾಚ್ಯ ವಸ್ತು ಇಲಾಖೆ ಮಾಡುತ್ತಿಲ್ಲ. ಇಂತಹ ದುರ್ಘಟನೆಗಳು ನಡೆದಾಗಲೂ ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಐತಿಹಾಸಿಕ ದೇವಸ್ಥಾನಗಳನ್ನು ಕಾಪಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಭಕ್ತರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕೋಟ್‌............

ಕಳ್ಳರು ಚಕ್ರ ಬಸವಣ್ಣ ಸ್ವಾಮಿ ವಿಗ್ರಹ ಭಿನ್ನ ಮಾಡಿಲ್ಲ. ಬಸವಣ್ಣನನ್ನು ಎತ್ತಿ ಪಕ್ಕಕ್ಕಿಟ್ಟಿದ್ದು ಯಾವುದೇ ರೀತಿ ಬಸವಣ್ಣ ವಿಗ್ರಹಕ್ಕೆ ಭಿನ್ನ ಆಗಿಲ್ಲ. ಮತ್ತೆ ಶಾಸ್ತ್ರ ಬದ್ಧವಾಗಿ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಿ ನಿರಂತರ ಪೂಜೆ ಮಾಡುವ ಕೆಲಸ ಮಾಡುತ್ತೇವೆ.

-ರಂಗಣ್ಣ ಗ್ರಾಪಂ ಮಾಜಿ ಅಧ್ಯಕ್ಷರುಪೋಟೋ 9ಮಾಗಡಿ1:

ಮಾಗಡಿಯ ಸೋಮೇಶ್ವರ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲೆಸಿರುವ ಚಕ್ರ ಬಸವಣ್ಣ ಸ್ವಾಮಿ ವಿಗ್ರಹವನ್ನು ನಿಧಿ ಆಸೆಗಾಗಿ ಕಳ್ಳರು ಅರ್ಧ ಅಡಿ ಪಕ್ಕಕ್ಕೆ ಸರಿಸಿರುವುದು.

ಫೋಟೋ 9ಮಾಗಡಿ2:

ಮಾಗಡಿ ಪಟ್ಟಣದ ಚಕ್ರ ಬಸವಣ್ಣಸ್ವಾಮಿ ವಿಗ್ರಹಕ್ಕೆ ಕಳ್ಳರು ನಿಧಿ ಆಸೆಯಿಂದ ಮೂರ್ತಿಯನ್ನು ಪಕ್ಕಕ್ಕೆ ಸರಿಸಿದ್ದು, ಸ್ಥಳಕ್ಕೆ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲಿಸಿದರು.