ಮದುವೆ ಆಹ್ವಾನ ಪತ್ರದಲ್ಲಿ ‘ಮೋದಿಯನ್ನು ಪ್ರಧಾನಿ ಮಾಡುವುದೇ ನೀಡುವ ಉಡುಗೊರೆ’

| Published : Apr 28 2024, 01:21 AM IST / Updated: Apr 28 2024, 01:22 AM IST

ಮದುವೆ ಆಹ್ವಾನ ಪತ್ರದಲ್ಲಿ ‘ಮೋದಿಯನ್ನು ಪ್ರಧಾನಿ ಮಾಡುವುದೇ ನೀಡುವ ಉಡುಗೊರೆ’
Share this Article
  • FB
  • TW
  • Linkdin
  • Email

ಸಾರಾಂಶ

ಏ.೧೮ರಂದು ವಿವಾಹ ನೆರವೇರಿದ್ದು, ಏ.26ರಂದು ಮತದಾನವೂ ಮುಗಿದ ಬಳಿಕ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ ‘ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧುವರರಿಗೆ ನೀಡುವ ಉಡುಗೊರೆ. ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು’ ಎಂದು ಮುದ್ರಿಸಿದ್ದ ವರನ ವಿರುದ್ಧ ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಡಬ ತಾಲೂಕು ಆಲಂತಾಯ ಗ್ರಾಮದ ಶಿವಾರು ದಿವಂಗತ ಶಿವಪ್ಪ ಗೌಡರ ಮಗ ಶಿವಪ್ರಸಾದ್ ಯಾನೆ ರವಿ ಅವರ ವಿವಾಹವು ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಕೊಳಂಬೆ ಗ್ರಾಮದ ಯುವತಿಯೊಂದಿಗೆ ಏ.೧೮ರಂದು ಗೋಳಿತೊಟ್ಟು ಸಿದ್ಧಿವಿನಾಯಕ ಕಲಾ ಮಂದಿರದಲ್ಲಿ ಜರಗಿತ್ತು.

ವಿವಾಹ ಆಮಂತ್ರಣ ಪತ್ರವನ್ನು ಮಾರ್ಚ್೧ ರಂದು ಮುದ್ರಿಸಲಾಗಿದ್ದು, ಅದರಲ್ಲಿ ‘ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದೇ ನೀವು ನಮಗೆ ನೀಡುವ ಉಡುಗೊರೆ’ ಎಂದು ಶಿವಪ್ರಸಾದ್ ಉಲ್ಲೇಖಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ಏ.೧೪ರಂದು ವರನ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ, ತಾನು ಮಾರ್ಚ್ ೧ ರಂದೇ ೮೦೦ ಆಮಂತ್ರಣ ಪತ್ರವನ್ನು ಮುದ್ರಿಸಿದ್ದು, ಅದರಲ್ಲಿ ಹತ್ತು ಆಮಂತ್ರಣ ಪತ್ರ ಹೊರತುಪಡಿಸಿ ಎಲ್ಲವನ್ನೂ ಹಂಚಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನಾ ಆಮಂತ್ರಣ ಪತ್ರವನ್ನು ಮುದ್ರಿಸಿ, ವಿತರಿಸಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದಿಲ್ಲ. ಪ್ರಧಾನಿ ಮೋದಿಯ ಮೇಲಿನ ಪ್ರೀತಿ ಹಾಗೂ ರಾಷ್ಟ್ರದ ಮೇಲಿನ ಕಾಳಜಿಯಿಂದ ಇದನ್ನು ಉಲೇಖಿಸಲಾಗಿದೆಯೇ ವಿನಾ ಕಾನೂನನ್ನು ಉಲ್ಲಂಘಿಸುವ ಉದ್ದೇಶ ಇಲ್ಲ. ಇದನ್ನು ಅಪರಾಧವೆಂದು ಪರಿಗಣಿಸಬಾರದು ಹಾಗೂ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳಬಾರದೆಂದು ಲಿಖಿತ ಹೇಳಿಕೆಯನ್ನುನೀಡಿದ್ದರು.

ಏ.೧೮ರಂದು ವಿವಾಹ ನೆರವೇರಿದ್ದು, ಏ.26ರಂದು ಮತದಾನವೂ ಮುಗಿದ ಬಳಿಕ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರದಂದು ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದ ಸಂಸ್ಥೆಯ ಮಾಲಕರನ್ನು ಕರೆಯಿಸಿ ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು.

ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗುವಂಥ ಯಾವ ಅಪರಾಧವನ್ನು ಮಾಡಿದ್ದೇನೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ನನ್ನ ದೇಶದ ಹಿತವನ್ನು ಬಯಸುವುದು, ನನ್ನ ದೇಶಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕತ್ವ ದೊರಕಬೇಕೆನ್ನುವುದು ನನ್ನ ಪಾಲಿಗೆ ಅಪರಾಧ ಕೃತ್ಯವಲ್ಲ. ಯಾರ ಒತ್ತಡಕ್ಕಾಗಿ ಈ ರೀತಿಯ ದೂರು ದಾಖಲಾಗಿದೆಯೋ ಗೊತ್ತಾಗುತ್ತಿಲ್ಲ. ಈ ಬಗ್ಗೆ ನಮಗೆ ತಪ್ಪಿತಸ್ಥ ಭಾವನೆಯೇ ಇಲ್ಲ. ನನ್ನ ವೈವಾಹಿಕ ಜೀವನಕ್ಕೆ ಈ ರೀತಿಯ ಉಡುಗೊರೆ ಕೊಟ್ಟವರು ದೇವರ ಪ್ರೀತಿಗೆ ಪಾತ್ರರಾಗಲಿ ಎನ್ನುವುದಷ್ಟೇ ನನ್ನ ಹಾರೈಕೆ

- ಶಿವಪ್ರಸಾದ್‌