ನೀರನ್ನು ಮಿತವಾಗಿ ಬಳಸಿ

| Published : May 09 2024, 01:17 AM IST

ಸಾರಾಂಶ

ಸುಡು ಬಿಸಿಲಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಸುಡು ಬಿಸಿಲಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ. ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಜಲಮೂಲಗಳು ಬಹುತೇಕ ಬತ್ತಿಹೋಗಿದೆ.

ನಗರದ ರೊಷನರ ಕೆರೆ, ಕನ್ನಂಡಬಾಣೆ, ಪಂಪ್ ಕೆರೆಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗುವ ಹಂತ ತಲುಪಿದೆ. ಮತ್ತೊಂದೆಡೆ ನಗರಕ್ಕೆ ನೀರು ಪೂರೈಸುವ ಪ್ರಮುಖವಾದ ಕೆರೆ ಕೂಟು ಹೊಳೆ ಕೂಡ ಬತ್ತಲಾರಂಭಿಸಿದೆ. ಅನಿವಾರ್ಯವಾಗಿ ಕುಂಡಾಮೇಸ್ತ್ರಿ ಚೆಕ್ ಡ್ಯಾಂನಿಂದ ನೀರನ್ನು ಲಿಫ್ಟ್ ಮಾಡಿ ಕೂಟು ಹೊಳೆಗೆ ತುಂಬಿಸಿ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಹೀಗಾಗಿ ಮಡಿಕೇರಿ ನಗರಸಭೆ ಕಮಿಷನರ್ ವಿಜಯ ಅವರು ನಗರದ ಜನರು ದಯವಿಟ್ಟು ನೀರನ್ನು ಮಿತವಾಗಿ ಬಳಸಿ. ಅನಗತ್ಯವಾಗಿ ಯಾವುದ್ಯಾವುದೋ ಕೆಲಸಗಳಿಗೆ ನೀರನ್ನು ಬಳಸಬೇಡಿ ಎಂದಿದ್ದಾರೆ. ಈಗಾಗಲೇ ಜನರಿಗೆ ಈ ಸೂಚನೆ ನೀಡಲಾಗಿದ್ದು ಜನರು ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಪ್ರತೀ ವರ್ಷದಂತೆ ಬೇಸಿಗೆ ಮಳೆ ಸುರಿದರೆ ನೀರಿನ ಕೊರತೆ ನೀಗಲಿದೆ. ಇಲ್ಲದಿದ್ದರೆ ನೀರಿನ ಸಮಸ್ಯೆ ಎದುರಾಗಲಿದ್ದು ಅದನ್ನು ಹೇಗೆ ನಿಭಾಯಿಸಬೇಕೆಂದು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಬಾರಿಯ ಬೇಸಿಗೆಗೆ ಜನರು ನಲುಗಿ ಹೋಗಿದ್ದಾರೆ. ಕರಾವಳಿ, ಮಲೆನಾಡು ಎನ್ನದೇ ಎಲ್ಲಾ ಜಿಲ್ಲೆಗಳಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗು ಜಿಲ್ಲೆಯಲ್ಲಿಯೂ ಈಗ ಕುಡಿಯುವ ನೀರಿನ ಕೊರತೆ ಕಂಡುಬಂದಿದೆ.

ಆದರೆ ಈಗ ನೀರಿನ ಬವಣೆ ಇರುವುದರಿಂದ ಮುಂದೆ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ನೀರು ಶೇಖರಣೆ ಆಗುವವರೆಗೆ ಮಡಿಕೇರಿ ನಗರದ ಎಲ್ಲಾ 23 ವಾರ್ಡ್‍ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟವಾಗಲಿದೆ. ಇದನ್ನು ಸರಿದೂಗಿಸಲು ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು.

ಜನರು ಈ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡು ನೀರನ್ನು ಮಿತವಾಗಿ ಬಳಸಿ. ಅನುಪಯುಕ್ತವಾಗಿ ಬಳಸದೆ (ಕಾರು, ಸ್ಕೂಟರ್ ಇತ್ಯಾದಿ ವಾಹನಗಳನ್ನು ಕುಡಿಯುವ ನೀರಿನಿಂದ ಶುಚಿಗೊಳಿಸದೇ ಅಲ್ಲದೆ ಮನೆಯ ಹೂ ತೋಟ ಮತ್ತು ಹೂ ಕುಂಡಗಳಿಗೆ ಉಪಯೋಗಿಸದೇ) ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.

ಒಂದು ವೇಳೆ ಇದನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ಅನುಪಯುಕ್ತವಾಗಿ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಮತ್ತೆ ಮರುಕಳಿಸಿದ್ದಲ್ಲಿ 1964ರ ಪೌರಸಭೆಗಳ ಅಧಿನಿಯಮದಂತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.

ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಆಗುವ ಕೂಟುಹೊಳೆಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಶೇಖರಣೆ ಇಲ್ಲದೆ ಪ್ರಸ್ತುತ ಬತ್ತಿ ಹೋಗಿದೆ. ಆದ್ದರಿಂದ ಕುಂಡಾಮೇಸ್ತ್ರಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ ಬಂದು ಹೆಚ್ಚಿನ ನೀರು ಶೇಖರಣೆ ಆಗುವವರೆಗೆ ಮಡಿಕೇರಿ ನಗರದ ಎಲ್ಲಾ 23 ವಾರ್ಡ್‍ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟವಾಗಲಿದೆ. ಇದನ್ನು ಸರಿದೂಗಿಸಲು ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಜನರು ಈ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡು ನೀರನ್ನು ಮಿತವಾಗಿ ಬಳಸಬೇಕು ಎಂದು ಮಡಿಕೇರಿ ಪೌರಾಯುಕ್ತ ವಿಜಯ್ ಹೇಳಿದರು.