ಎಚ್.ಡಿ ರೇವಣ್ಣ ಕೈದಿ ನಂಬರ್‌ 4567!

| Published : May 09 2024, 01:17 AM IST / Updated: May 09 2024, 05:56 AM IST

ಸಾರಾಂಶ

ತಮ್ಮ ಪುತ್ರ ಹಾಗೂ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಶೋಷಿತ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್‌.ಡಿ.ರೇವಣ್ಣ ಬುಧವಾರ ಕಣ್ಣೀರಿಡುತ್ತಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

 ಬೆಂಗಳೂರು :  ತಮ್ಮ ಪುತ್ರ ಹಾಗೂ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಶೋಷಿತ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್‌.ಡಿ.ರೇವಣ್ಣ ಬುಧವಾರ ಕಣ್ಣೀರಿಡುತ್ತಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆ 4567ಯನ್ನು ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ರೇವಣ್ಣ ಅವರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಹಾಜರುಪಡಿಸಿದರು. ಆಗ ನ್ಯಾಯಾಲಯವು, ರೇವಣ್ಣ ಅವರನ್ನು ಏಳು ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿತು. ಅದರ ಬೆನ್ನಲ್ಲೇ ರೇವಣ್ಣ ಅವರು ಕಣ್ಣೀರಿಡುತ್ತಲೇ ನ್ಯಾಯಾಲಯದ ಆವರಣದಿಂದ ಹೊರ ನಡೆದರು.

ರೇವಣ್ಣಗೆ ತೀವ್ರ ನಿರಾಸೆ:  ಈ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ರೇವಣ್ಣ ಅವರಿಗೆ ಜಾಮೀನು ಅರ್ಜಿ ವಿಚಾರಣೆ ಸಹ ಮುಂದೂಡಿಕೆಯಾಗಿದ್ದು ತೀವ್ರ ಬೇಸರ ತರಿಸಿತು. ಅಷ್ಟರಲ್ಲಿ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿತು. ಇದರಿಂದ ವ್ಯಾಕುಲಗೊಂಡ ಅವರು ಕಣ್ಣೀರಿಡುತ್ತಲೇ ಎಸ್‌ಐಟಿ ಅಧಿಕಾರಿಗಳ ಕಾರನ್ನೇರಿ ಜೈಲಿಗೆ ತೆರಳಿದರು.

ಜೈಲಿಗೆ ಬಂದ ರೇವಣ್ಣ ಅವರನ್ನು ವೈದ್ಯಕೀಯ ತಪಾಸಣೆ ಬಳಿಕ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ಕಾರಾಗೃಹದ ಅಧಿಕಾರಿಗಳು ಇರಿಸಿದ್ದಾರೆ. ಆ ವೇಳೆ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಸಹ ಅಧಿಕಾರಿಗಳು ಕೊಟ್ಟಿದ್ದಾರೆ.

ಅಪಹರಣ ಪ್ರಕರಣ:ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಮಹಿಳೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಆರೋಪಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತುತ್ತಾಗಿದ್ದಾರೆ. ಇನ್ನು ಸಂಸದರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಸಾರ್ವಜನಿಕವಾಗಿ ಹರಡಿ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಈ ಬೆಳವಣಿಗೆ ಬಳಿಕ ಕೆ.ಆರ್‌.ನಗರ ತಾಲೂಕಿನ ಶೋಷಿತ ಮಹಿಳೆಯನ್ನು ಮಾಜಿ ಸಚಿವ ರೇವಣ್ಣ ಅಪಹರಿಸಿದ್ದ ಆರೋಪ ಕೇಳಿ ಬಂದಿತು. ಈ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಯಿತು. ಕೊನೆಗೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿರುವ ರೇವಣ್ಣ ಆಪ್ತ ಸಹಾಯಕ ರಾಜಗೋಪಾಲ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಅಪಹೃತ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದರು.

ಬಳಿಕ ಮಾಜಿ ಸಚಿವರನ್ನು ಎಸ್ಐಟಿ ಬಂಧಿಸಿತ್ತು. ಕಳೆದ ಶನಿವಾರ ಬಂಧನಕ್ಕೊಳಗಾದ ರೇವಣ್ಣ ಅವರನ್ನು ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಎಸ್‌ಐಟಿ ಅಧಿಕಾರಿಗಳು ತನಿಖೆ ಸಲುವಾಗಿ ವಶಕ್ಕೆ ಪಡೆದಿದ್ದರು. ಈ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ರೇವಣ್ಣ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಗ ನ್ಯಾಯಾಲಯವು, ಮೇ 14ರ ವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿತು. ಮುಸ್ಸಂಜೆ ಹೊತ್ತಿಗೆ ಜೈಲಿಗೆ ಆಗಮಿಸಿದ ರೇವಣ್ಣ ಅವರಿಗೆ ಮತ್ತೊಮ್ಮೆ ಆರೋಗ್ಯ ತಪಾಸಣೆಗೊಳಪಡಿಸಿದ ಕಾರಾಗೃಹದ ಅಧಿಕಾರಿಗಳು, ಮಾಜಿ ಸಚಿವರ ಸುರಕ್ಷತೆ ಸಲುವಾಗಿ ಅವರಿಗೆ ವಿಶೇಷ ಭದ್ರತಾ ವಿಭಾಗದ ಸೆಲ್‌ ಅನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.