ಲೌಕಿಕ ಜೀವನಕ್ಕೆ ಭಗವಂತನ ಅನುಗ್ರಹ ಅವಶ್ಯಕ: ಯಚ್ಚರ ಶ್ರೀಗಳು

| Published : Apr 27 2024, 01:16 AM IST

ಸಾರಾಂಶ

ಮನುಷ್ಯನ ಜೀವನದಲ್ಲಿ ಆಸೆ ಇರಬೇಕು ನಿಜ ಆದರೆ ಜೀವನವೇ ಆಸೆ ಆಗಬಾರದು

ನರಗುಂದ: ಮನುಷ್ಯನ ಲೌಕಿಕ ಜೀವನಕ್ಕೆ ಭಗವಂತನ ಅನುಗ್ರಹ ಅವಶ್ಯಕತೆ ಎಂದು ಶಿರೋಳ ಗ್ರಾಮದ ಜಗದ್ಗುರು ಶ್ರೀಯಚ್ಚರಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಶ್ರೀಜಗದ್ಗುರು ಯಚ್ಚರಮಹಾಸ್ವಾಮಿಗಳ ಗವಿಮಠದಲ್ಲಿ ನಡೆದ 6ನೇ ಮಾಸಿಕ ಶಿವಾನುಭಗೋಷ್ಠಿ ಕಾರ್ಯಕ್ರಮ ಮಾತನಾಡಿ, ಮನುಷ್ಯನ ಆಸೆಗೆ ಎಂದಿಗೂ ಮಿತಿಯಿಲ್ಲ, ಎಲ್ಲವೂ ತನಗೆ ಎಂಬ ಸ್ವಾರ್ಥದ ಬದುಕಿನಲ್ಲಿ ಮನುಷ್ಯ ಎಲ್ಲ ಕೊಟ್ಟ ಭಗವಂತನನ್ನು ಮರೆಯುತ್ತಿದ್ದಾನೆ. ಮನುಷ್ಯನ ಜೀವನದಲ್ಲಿ ಆಸೆ ಇರಬೇಕು ನಿಜ ಆದರೆ ಜೀವನವೇ ಆಸೆ ಆಗಬಾರದು. ಒಂದಿಷ್ಟು ಬದುಕಿನಲ್ಲಿ ಲೌಕಿಕ ಜತೆಗೆ ಪಾರಮಾರ್ಥ ಸಾಧಿಸುವ ಗುರಿ ಹೊಂದಬೇಕು ಎಂದರು.

ಚಿಕ್ಕಶೆಲ್ಲಿಕೇರಿಯ ಶ್ರೀ ಶಿವಜ್ಞಾನ ಪ್ರಕಾಶ ಗುರುಕುಲದ ಅಡವೀಶ ಶಾಸ್ತ್ರಿಗಳು ಮಾತನಾಡಿ, ಈ ಜಗತ್ತಿನಲ್ಲಿ ಭಗವಂತನ ಅನುಗ್ರಹವಿಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಲೌಕಿಕ ಜೀವನದಲ್ಲಿ ಮನುಷ್ಯನ ಸ್ವಾರ್ಥದ ಜೀವನದ ಜತೆ ಪಾರಮಾರ್ಥ ಸಾಧಿಸುವ ಪ್ರಯತ್ನ ಮನುಷ್ಯ ಮಾಡಬೇಕು ಅಂದಾಗ ಮಾತ್ರ ಈ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು.

ಹೊಳೆ ಆಲೂರಿನ ಗಣ್ಯ ವ್ಯಾಪಾರಸ್ಥ ಸಂಗಪ್ಪ ಅಂಗಡಿ ಮಾತನಾಡಿ, ಶಿರೋಳ ಶ್ರೀ ಯಚ್ಛರೇಶ್ವರ ಗವಿಮಠವು ಜನರ ಮನಸ್ಸುಗಳನ್ನ ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತ ಬರುತ್ತಿದೆ. ಶ್ರೀಗಳು ಚಿಕ್ಕವರಾದರು ಮಾಡುತ್ತಿರುವ ಕಾರ್ಯ ಬಹಳಷ್ಟು ದೊಡ್ಡದು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಎಚ್.ವಿ. ಬ್ಯಾಡಗಿ, ಉಪನ್ಯಾಸಕ ಎಸ್.ವಿ.ಕುಪ್ಪಸ್ತ, ಸುನೀಲ್ ಕಳಸದ, ಶ್ರೀಕಾಂತ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.