ಕೌಶಲ ಇಲ್ಲದ ಪದವಿ ಪ್ರಮಾಣ ಪತ್ರಕ್ಕೆ ಸೀಮಿತ

| Published : May 10 2024, 01:30 AM IST

ಸಾರಾಂಶ

ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು. ಪರೋಪಕಾರ ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವಜನ ಪ್ರೀತಿಗೆ ಪಾತ್ರವಾದಾಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ. ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇವಲ ಪದವೀಧರರಾದರೆ ಸಾಲದು ಕೌಶಲ್ಯಪೂರಿತ ಪದವೀಧರರಾಗುವ ಅಗತ್ಯವಿದೆ. ದೇಶದಲ್ಲಿ ಕೋಟ್ಯತರ ಪದವೀಧರರಿದ್ದಾರೆ. ಅದರಲ್ಲಿ ಕೆಲವೇ ಲಕ್ಷ ಮಂದಿ ಉತ್ತಮ ಉದ್ಯೋಗದಲ್ಲಿದ್ದಾರೆ. ಏಕೆಂದರೆ ಕೌಶಲ್ಯವಿಲ್ಲದ ಪದವಿ ಕೇವಲ ಪ್ರಮಾಣ ಪತ್ರವಾಗುತ್ತದೆ ಅಷ್ಟೇ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರ ಹೊರವಲಯದ ಎಸ್ ಜೆಸಿಐಟಿ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಎಸ್ ಜೆಸಿಐಟಿ ಎಂಜಿನಿಯರಿಂಗ್ ಕಾಲೇಜು ಏರ್ಪಡಿಸಿದ್ದ ಗ್ರಾಜ್ಯುಯೇಷನ್ ಡೇ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಸಮಾಜಕ್ಕೆ ಹೊರೆಯಾಗದಿರಿ

ಪದವಿ ಮುಗಿಸಿದ ನಂತರ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಮುನ್ನಡೆಯ ಬೇಕೆ ಹೊರತು ಪೋಷಕರಿಗೆ, ಸಮಾಜಕ್ಕೆ ಹೊರೆಯಾಗಬಾರದು. ಪೋಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕನಸಿನಲ್ಲಿ ಕಷ್ಟಪಟ್ಟು ಶಿಕ್ಷ ಣವನ್ನು ಕೊಡಿಸುತ್ತಾರೆ. ಯಾರು ಇದನ್ನು ಅರಿತು ಜವಾಬ್ದಾರಿಯಿಂದ ಮುನ್ನಡೆಯುತ್ತಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಜ್ಞಾನಕ್ಕೆ ಮಿಗಿಲಾದ ವಸ್ತು ಬೇರೊಂದಿಲ್ಲ. ನಿರಂತರ ಅಧ್ಯಯನ ಮತ್ತು ಉತ್ತಮ ಚಿಂತನೆಯಿದ್ದರೆ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯ ಎಂದರು.

ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು. ಪರೋಪಕಾರ ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವಜನ ಪ್ರೀತಿಗೆ ಪಾತ್ರವಾದಾಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ. ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಬೇಕು. ಆಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇದಿಲ್ಲದೆ ಕೇವಲ ಅಧ್ಯಾಪಕರು ಮಾಡುವ ಪಾಠ ಪ್ರವಚನಗಳಿಂದ, ಪೋಷಕರು ತೋರುವ ಪ್ರೀತಿಯಿಂದ ಮಾತ್ರವೇ ಏಳಿಗೆ ಸಾಧ್ಯ ಎಂಬ ಭಾವನೆ ಉಳ್ಳವರು ಏನನ್ನೂ ಸಾಧಿಸುವುದಿಲ್ಲ ಎಂದರು.

ಜೀವನಕ್ಕೆ ಆಲಸ್ಯ ಒಳ್ಳೆಯದಲ್ಲ

ಓದುವ ಸಂದರ್ಭದಲ್ಲಿ ಯಾರು ಸುಖವನ್ನು ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನಕ್ಕೆ ಆಲಸ್ಯ ಒಳ್ಳೆಯದಲ್ಲ. ತನ್ನ ಇರುವಿಕೆಯನ್ನು ಜಗತ್ತಿಗೆ ತೋರಬೇಕಾದರೆ ಪ್ರಾಮಾಣಿಕ ಪ್ರಯತ್ನ ಹಾಕಲೇಬೇಕು. ವಿನಯಶೀಲರಾಗಿ ತನ್ನ ಕಾರ್ಯದಲ್ಲಿ ಮುನ್ನಡೆದರೆ ಮನ್ನಣೆ ಬೆಳಕಾಗಿ ಬೆನ್ನಿಗಿರುತ್ತದೆ ಎಂದು ತಿಳಿ ಹೇಳಿದರು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧ್ಯಕ್ಷ ಡಾ.ಶಾಂತ ಎ.ತಿಮ್ಮಯ್ಯ ಮಾತನಾಡಿ, ನಿರಂತರ ಆವಿಷ್ಕಾರ, ಸಂಶೋಧನೆಗಳಿಂದ ಮಹತ್ತರವಾದ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದರಿಂದ ಎಲ್ಲ ರಂಗಗಳಲ್ಲೂ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಯುವ ಜನಾಂಗ ಬೆಳೆಯಬೇಕು. ಅಸಾಂಪ್ರದಾಯಿಕ ವಿಚಾರಗಳಿಂದ ಉತ್ತಮ ಪ್ರಗತಿಗಳು ಹೆಚ್ಚಾಗಿ ಬರುತ್ತವೆ ಮತ್ತು ಗುರುತಿಸದ ಪ್ರದೇಶಗಳನ್ನು ಅನ್ವೇಷಿಸಲು ಧೈರ್ಯ, ಆದರೆ ವೈಫಲ್ಯಗಳನ್ನು ಯಶಸ್ಸಿನ ಮೆಟ್ಟಿಲುಗಳಾಗಿ ಸ್ವೀಕರಿಸಲು ಕಲಿಯಿರಿ ಎಂದರು. ಜವಾಬ್ದಾರಿ ಅರಿತುಕೊಳ್ಳಿ

ಬಿಜಿಎಸ್‌ ಸಂಸ್ಥೆಗಳ ಆಡಳಿತಾಧಿಕಾರಿ ಎನ್‌.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಬೇಜವಾಬ್ದಾರಿ ಮನೋಭಾವನೆಯನ್ನು ಮೊದಲು ಬಿಡಬೇಕು. ನಿರಂತರ ಅಧ್ಯಯನದ ಜೊತೆಗೆ ಜೀವನದಲ್ಲಿ ಶಿಸ್ತು ಸಂಯಮ, ಛಲ, ಮಾನವೀಯ ಮೌಲ್ಯ ಸೇರಿದಂತೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

ರ್‍ಯಾಂಕ್ ಪಡೆದವರಿಗೆ ಮತ್ತು ಪದವೀಧರರಿಗೆ, ಸ್ನಾತಕೋತ್ತರ ಪದವೀಧರರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಡಾ.ಕೆ.ಪಿ.ಶ್ರೀನಿವಾಸ ಮೂರ್ತಿ, ಕಾಲೇಜು ಪ್ರಾಂಶುಪಾಲ ಡಾ.ಜಿ.ಟಿ.ರಾಜು, ರಿಜಿಸ್ಟ್ರಾರ್ ಜೆ.ಸುರೇಶ್, ಕಾಲೆಜಿನ ಭೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಇದ್ದರು.