7ರಿಂದ 24ನೇ ಸ್ಥಾನಕ್ಕೆ ಕುಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ

| Published : May 10 2024, 01:30 AM IST

ಸಾರಾಂಶ

2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆ ಶೇ. 79.51ರಷ್ಟು ಫಲಿತಾಂಶ ದೊರೆಕಿದ್ದು, ರಾಜ್ಯದಲ್ಲಿ ಕಳೆದ ಬಾರಿ 7ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ 24ನೇ ಸ್ಥಾನಕ್ಕೆ ಕುಸಿದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆ ಶೇ. 79.51ರಷ್ಟು ಫಲಿತಾಂಶ ದೊರೆಕಿದ್ದು, ರಾಜ್ಯದಲ್ಲಿ ಕಳೆದ ಬಾರಿ 7ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ 24ನೇ ಸ್ಥಾನಕ್ಕೆ ಕುಸಿದಿದೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 11655 ವಿದ್ಯಾರ್ಥಿಗಳ ಪೈಕಿ 8344 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 71.59ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ 94.37 ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 7ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿತ್ತು ಆದರೆ ಈ ಬಾರಿ ಫಲಿತಾಂಶದಲ್ಲಿ ಇಳಿಕೆ ಕಂಡುಬಂದಿದ್ದು 7ನೇ ಸ್ಥಾನದಿಂದ 24 ನೇ ಸ್ಥಾನ ಪಡೆಯುವ ಮೂಲಕ ಫಲಿತಾಂಶದಲ್ಲಿ ಕುಸಿತ ಕಂಡಿದೆ.

ಗುಂಡ್ಲುಪೇಟೆ ಆದರ್ಶ ವಿದ್ಯಾಲಯಯದ ರತ್ಮಮ್ಮ‌ ಎಂಬ ವಿದ್ಯಾರ್ಥಿನಿ 625 ಕ್ಕೆ 619 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಟಾಪರ್‌ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಸಿ.ವಿ.ಪ್ರಜನ್ ಮತ್ತು ಎಸ್.ಸಂಜನಾ ಎಂಬವರು 618 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ, ಚಾಮರಾಜನಗರ ಆದರ್ಶ ವಿದ್ಯಾಲಯದ ಆರ್ಯ ಎಂಬಾತ 617 ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಟಾಪರ್‌ ಲಿಸ್ಟ್‌ನಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಮೇಲುಗೈ:

ಚಾಮರಾಜನಗರದ ಟಾಪ್ 10 ವಿದ್ಯಾರ್ಥಿಗಳಲ್ಲಿ 8 ಮಂದಿ ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಗುಂಡ್ಲುಪೇಟೆ ಆದರ್ಶ ವಿದ್ಯಾಲಯಯದ ರತ್ಮಮ್ಮ‌ (619), ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಸಿ.ವಿ.ಪ್ರಜನ್ ಮತ್ತು ಎಸ್.ಸಂಜನಾ (618), ಚಾಮರಾಜನಗರ ಆದರ್ಶ ವಿದ್ಯಾಲಯದ ಆರ್ಯ (617), ಗುಂಡ್ಲುಪೇಟೆಯ ನಿಸರ್ಗ ವಿದ್ಯಾನಿಕೇತನ ಶಾಲೆಯ ಯುಕ್ತಾ (616), ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ನಂದಿನಿ, ಗುಂಡ್ಲುಪೇಟೆಯ ಕ್ರೈಸ್ಟ್ ಸಿಎಂಐ ಶಾಲೆಯ ಅಂಕಿತಾ (615) , ‌ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಉಮ್ಮೇ ಜುಹಾ (614), ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ಅಹಲ್ಯಾ (613), ಕೊಳ್ಳೇಗಾಲ ಆದರ್ಶ ವಿದ್ಯಾಲಯದ ಆಫಿಯಾ (612) ಅಂಕ ಪಡೆಯುವ ಮೂಲಕ ಟಾಪ್ 10 ಸ್ಥಾನದಲ್ಲಿದ್ದು, ಸರ್ಕಾರದ ಆದರ್ಶ ವಿದ್ಯಾಲಯದ 8 ಮಂದಿ ಟಾಪ್ 10 ಅಲ್ಲಿ ಇದ್ದು, ಇಬ್ಬರು ವಿದ್ಯಾರ್ಥಿಗಳು ಮಾತ್ರ ಖಾಸಗಿ ಶಾಲೆಯವರಾಗಿದ್ದಾರೆ.