ಕನ್ನಡ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಲಿ: ವೀರಕಪುತ್ರ ಶ್ರೀನಿವಾಸ್

| Published : Oct 08 2023, 12:01 AM IST

ಕನ್ನಡ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಲಿ: ವೀರಕಪುತ್ರ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ವೀರಲೋಕ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ದೇಸಿ ಜಗಲಿ ಕಥಾ ಕಮ್ಮಟ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಕನ್ನಡದ ಮೂಲ ನೆಲೆಯಾಗಿರುವ ಕರ್ನಾಟಕದಲ್ಲಿ ಕನ್ನಡ ಪುಸ್ತಕಗಳು ಬೇಡಿಕೆ ಹೆಚ್ಚುವುದರ ಜೊತೆಗೆ ಓದುಗರ ಸಂಖ್ಯೆಯೂ ಅಧಿಕವಾಗಬೇಕು ಎಂದು ಬೆಂಗಳೂರು ವೀರಲೋಕ ಪ್ರಕಾಶನದ ಅಧ್ಯಕ್ಷ ವೀರಕ ಪುತ್ರ ಶ್ರೀನಿವಾಸ್ ಹೇಳಿದ್ದಾರೆ. ಬೆಂಗಳೂರು ವೀರಲೋಕ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ದೇಸಿ ಜಗಲಿ ಕಥಾ ಕಮ್ಮಟವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವೀರಲೋಕ ಪ್ರಕಾಶನ ಕನ್ನಡ ಬರಹಗಾರರ ಪುಸ್ತಕಗಳನ್ನು ಹೊರತರಲು ಮುಂದಾಗುವುದರೊಂದಿಗೆ ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುವಂತೆ ಮಾಡಲು ತೊಡಗಿಸಿಕೊಳ್ಳಲಾಗಿದೆ. ಕನ್ನಡ ಬರಹಗಾರರನ್ನೂ ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಲಾಗಿದೆ. ಈ ದಿಸೆಯಲ್ಲಿ ಬೆಂಗಳೂರಿನಲ್ಲಿ 300 ಕಡೆಗಳಲ್ಲಿ ಪುಸ್ತಕ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಮೊಬೈಲ್ ಮೂಲಕ ಜನರಿಗೆ ವಿವಿಧ ಉತ್ಪನ್ನಗಳ ಮಾಹಿತಿ ನೀಡುವಂತೆ ಕನ್ನಡ ಪುಸ್ತಕಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಥಾ ಕಮ್ಮಟಗಳನ್ನು ಆಯೋಜಿಸಲಾಗುತ್ತಿದ್ದು, ಕೊಡಗಿನಲ್ಲಿ ಆಯೋಜನೆಗೊಂಡಿರುವ ಈ ಕಥಾ ಕಮ್ಮಟ 15ನೇ ಕಾರ್ಯಕ್ರಮವಾಗಿದೆ ಎಂದು ಮಾಹಿತಿ ನೀಡಿದರು. ಲೇಖಕ, ಚಿಂತಕ ಡಾ.ಮೋಹನ್ ಪಾಳೇಗಾರ್ ಮಾತನಾಡಿ, ಪ್ರಸ್ತುತ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಏಕಾಗ್ರತೆ ಎಂಬುದು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಏಕಾಗ್ರತೆಯನ್ನು ಕಲಿಸುವ ನಿಟ್ಟಿನಲ್ಲಿ ಇಂತಹ ಕಮ್ಮಟಗಳು ಸಹಕಾರಿಯಾಗಲಿವೆ ಎಂದರು. ನಿರಂತರವಾಗಿ ಬರೆಯುವುದರಿಂದ ಬರವಣಿಗೆ ಉತ್ತಮಗೊಳ್ಳುತ್ತದೆ. ನಿರಂತರವಾಗಿ ಓದುವುದರಿಂದ ಜ್ಞಾನ ವೃದ್ಧಿ ಸಾಧ್ಯವಾಗುತ್ತದೆ. ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಅದನ್ನು ಎಂದಿಗೂ ಬಿಡಬಾರದು. ಜಾನಪದವನ್ನು ಮರೆತರೆ ಬದುಕು ನಶ್ವರವಾದಂತೆ ಎಂದು ಎಚ್ಚರಿಸಿದರು. ವೀರಲೋಕ ಪ್ರಕಾಶನದ ಕೊಡಗು ಜಿಲ್ಲಾ ಯೋಜನಾ ಸಂಘಟಕ ಬಿ.ಜಿ.ಅನಂತಶಯನ ಪ್ರಾಸ್ತಾವಿಕವಾಗಿ ಮಾತನಾಡಿ, ಮನಸಾರೆ ಪ್ರತಿಯೊಬ್ಬರು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಪಣ ತೊಡಬೇಕೆಂದರು. ಬರಹಗಾರ, ತರಬೇತುದಾರ ಪ್ರಭಾಕರ ಶಿಶಿಲ ಮಾತನಾಡಿ, ಈ ಎಲ್ಲಾ ಸಂಸ್ಥೆಗಳು ಸೇರಿ ಕೊಡಗಿನಲ್ಲಿ ಪುಸ್ತಕ ಭಂಡಾರ ಆರಂಭಿಸುವಂತೆ ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ, ಸಾಹಿತಿಗಳಾದ ಸ್ಮಿತಾ ಅಮೃತರಾಜ್, ಸುನೀತಾ ಲೋಕೇಶ್, ಸಹನಾ ಕಾಂತಬೈಲು, ನೌಶಾದ್ ಮಾತನಾಡಿದರು. ಜಾನಪದ ಪರಿಷತ್ ಕೊಡಗು ಘಟಕ ಉಪಾಧ್ಯಕ್ಷರಾದ ಶೋಭಾ ಸುಬ್ಬಯ್ಯ, ಅಂಬೆಕಲ್ ಕುಶಾಲಪ್ಪ, ರವೀಂದ್ರ ರೈ, ಕಾರ್ಯದರ್ಶಿ ಉಜ್ವಲ್ ರಂಜಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರಭಾಕರ ಶಿಶಿಲ ಹಾಗೂ ಮೋಹನ್ ಪಾಳೇಗಾರ್ ಅವರನ್ನು ಸನ್ಮಾನಿಸಲಾಯಿತು. ಅಜಯ್‌ಸೂದ್ ಪ್ರಾರ್ಥಿಸಿದರು. ಕಥಾ ಕಮ್ಮಟ ಸಹ ಸಂಚಾಲಕಿ ರೇವತಿ ರಮೇಶ್ ನಿರೂಪಿಸಿದರು. ಕಥಾ ಕಮ್ಮಟ ಸಂಚಾಲಕ ಎಸ್.ಎಸ್. ಸಂಪತ್‌ಕುಮಾರ್ ಸ್ವಾಗತಿಸಿದರು. ರವೀಂದ್ರ ರೈ ವಂದಿಸಿದರು. ದೇಸಿ ಜಗಲಿ ಕಥಾ ಕಮ್ಮಟ ಎರಡು ದಿನಗಳ ಕಾಲ ನಡೆಯಲಿದ್ದು, ಬಿ. ಪ್ರಭಾಕರ ಶಿಶಿಲ ತರಬೇತಿ ನೀಡಲಿದ್ದಾರೆ.