ಜೆಎಸ್ಸೆಸ್ ಇನ್ನಷ್ಟು ಸೇವೆ ನೀಡುವಂತಾಗಲಿ-ಪೇಜಾವರಶ್ರೀ

| Published : Oct 08 2023, 12:01 AM IST

ಜೆಎಸ್ಸೆಸ್ ಇನ್ನಷ್ಟು ಸೇವೆ ನೀಡುವಂತಾಗಲಿ-ಪೇಜಾವರಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ವ್ಯಕ್ತಿಯ ಭವಿಷ್ಯವನ್ನು ಆತನ ಜಾತಕದಿಂದ ನಿರ್ಧರಿಸಲಾಗುತ್ತದೆ. ಆದರೆ, ಒಂದು ಸಮಾಜದ ಭವಿಷ್ಯ ಆರೋಗ್ಯವಂತ ಮಕ್ಕಳಿಂದ ನಿರ್ಧರಿಸಲಾಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಯಾವುದೇ ವ್ಯಕ್ತಿಯ ಭವಿಷ್ಯವನ್ನು ಆತನ ಜಾತಕದಿಂದ ನಿರ್ಧರಿಸಲಾಗುತ್ತದೆ. ಆದರೆ, ಒಂದು ಸಮಾಜದ ಭವಿಷ್ಯ ಆರೋಗ್ಯವಂತ ಮಕ್ಕಳಿಂದ ನಿರ್ಧರಿಸಲಾಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

ಇಲ್ಲಿಯ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ (ಜೆಎಸ್ಸೆಸ್‌) ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಯಾವ ಸಮಾಜದ ಮಕ್ಕಳ ಕಣ್ಣುಗಳು ಮಿನುಗುತ್ತವೆಯೇ ಆ ಸಮಾಜದ ಭವಿಷ್ಯ ಉಜ್ವಲವಾಗಿರುತ್ತದೆ. ಅದೇ ಮಕ್ಕಳ ಕಣ್ಣು ಮಂಕಾಗಿದ್ದರೆ ಆ ಸಮಾಜಕ್ಕೆ ಭವಿಷ್ಯವಿಲ್ಲ. ನಮ್ಮ ಮಕ್ಕಳ ಕಣ್ಣುಗಳಲ್ಲಿ ಮಿಂಚಿನ ಓಟ ಕಾಣುತ್ತಿದೆ. ಖುಷಿ ಖುಷಿಯಿಂದ ಇಲ್ಲಿಯ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲಿ. ಜೆಎಸ್ಸೆಸ್‌ ಸಂಸ್ಥೆಯು ಸಮಾಜಕ್ಕೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಹಾರೈಸಿದರು.

ಶುಭಾಶೀರ್ವಚನ ನೀಡಿದ ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದುಕು ಉಜ್ವಲವಾಗಲು ಸಾಧ್ಯ. ಅಂತಹ ಶಿಕ್ಷಣವನ್ನು ಜನತಾ ಶಿಕ್ಷಣ ಸಮಿತಿ ನೀಡುತ್ತಿದೆ. ಕಷ್ಟದ ಸಮಯದಲ್ಲೇ ಸಂಸ್ಥೆಯನ್ನು ಕೈಗೆ ತೆಗೆದುಕೊಂಡು ಹೋರಾಟದ ಮೂಲಕವೇ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ವೀರೇಂದ್ರ ಹೆಗ್ಗಡೆ ಹಾಗೂ ವಜ್ರಕುಮಾರ ಕಾರ್ಯ ಶ್ಲಾಘನೀಯ ಎಂದರು.

ಇತಿಹಾಸ ಪ್ರಜ್ಞೆ ಇರದಿದ್ದರೆ ವರ್ತಮಾನ ಕಟ್ಟಲು ಅಸಾಧ್ಯ. ಹೀಗಾಗಿ ಮಕ್ಕಳು ಇತಿಹಾಸ ನಿರ್ಮಿಸುವಂತಹ ಕಾರ್ಯ ಮಾಡಬೇಕು. ಸೇವೆ, ತ್ಯಾಗದ ಮೂಲಕ ಉತ್ತಮವಾಗಿ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಇನ್ನೂ ಉತ್ತಮ ಸೇವೆ ನೀಡಲಿ ರಾಜ್ಯಮಟ್ಟದಲ್ಲಿ ಬೆಳೆಯಲಿ ಎಂದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಅಹಿಂಸೆ ಹಾಗೂ ಸತ್ಯದ ಮಾರ್ಗದಲ್ಲಿ ಸಾಗುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಜೀವನ ಅನೇಕರಿಗೆ ಅನುಕರಣೀಯ. ಗ್ರಾಮೀಣದಲ್ಲಿ ಮಹಿಳೆಯರಿಗೆ ಸಂಘ ರಚಿಸಿ ಸ್ವಾವಲಂಬಿ ಜೀವನಕ್ಕೆ ನೆರವಾಗಿದ್ದಾರೆ. ಯಾವತ್ತೂ ಅಹಿಂಸೆ, ಸತ್ಯದಲ್ಲಿ ನಡೆದ ಹೆಗ್ಗಡೆಯವರು ನಮಗೆಲ್ಲಾ ಮಾದರಿ ಎಂದರು.

ಪ್ರಸ್ತುತ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣದಷ್ಟೇ ನೈತಿಕತೆಯೂ ಮುಖ್ಯ. ಹೀಗಾಗಿ, ಮಕ್ಕಳು ತಮ್ಮ ಅಧ್ಯಯನದಲ್ಲಿ ನೈತಿಕತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು. ದೇಶದ ಭವಿಷ್ಯ ಮಕ್ಕಳಾಗಿದ್ದು ನಾಡು ಕಟ್ಟಲು ಜಾಗೃತೆಯ ಹೆಜ್ಜೆ ಇಡಿ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ, ಜೆಎಸ್ಸೆಸ್‌ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕರೆದು ಧಾರವಾಡದ ಜೆಎಸ್ಸೆಸ್‌ ಸಂಸ್ಥೆಯನ್ನು ನನ್ನ ಕೈಗಿತ್ತರು. ಡಾ. ನ. ವಜ್ರಕುಮಾರ ಅವರೇ ಈ ಸಂಸ್ಥೆಗೆ ಸೂಕ್ತರೆಂದು ಅವರ ಕೈಗೆ ನೀಡಿದೆ. 50ನೇ ವರ್ಷಾಚರಣೆ ಮಾಡಲು ತುಂಬ ಉತ್ಸುಕರಾಗಿದ್ದ ಅವರೀಗ ಇಲ್ಲ. ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಅವರ ಸಮರ್ಪಣಾ ಮನೋಭಾವವೇ ಕಾರಣ. ಅರವ ಪ್ರೀತಿ, ಸ್ನೇಹದಿಂದ, ಸಿಬ್ಬಂದಿ ಪರಿಶ್ರಮದಿಂದ ಸಂಸ್ಥೆಯ ಉತ್ತುಂಗಕ್ಕೆ ಬೆಳೆದಿದೆ ಎಂದರು.

ಹೇಮಾವತಿ ಹೆಗ್ಗಡೆ ಮಗಳಿಗೊಂದು ಪತ್ರ ಕೃತಿ ಬಿಡುಗಡೆ ಮಾಡಿದರು. ಸುವರ್ಣಸಿರಿ ಸ್ಮರಣ ಸಂಚಿಕೆಯನ್ನು ಜೆಎಸ್ಸೆಸ್‌ ಉಪ ಕಾರ್ಯಾಧ್ಯಕ್ಷ ಡಾ. ಎಂ.ಎನ್. ತಾವರಗೇರಿ, ಜೆಎಸ್‌ಎಸ್ ಅಂತರಂಗ ಕೃತಿಯನ್ನು ಶ್ರದ್ಧಮ್ಮ ಹೆಗ್ಗಡೆ ಬಿಡುಗಡೆ ಮಾಡಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಾಜಿ ಸಂಸದ ಐ.ಜಿ. ಸನದಿ, ಆಡಳಿತ ಮಂಡಳಿ ಸದಸ್ಯರಾದ ಕೇಶವ ದೇಸಾಯಿ, ಕಮಲನಯನ ಮೆಹತಾ, ಹಳೇ ವಿದ್ಯಾರ್ಥಿ ಆನಂದ ತಾಳಿಕೋಟಿ, ಸುಮನ ವಜ್ರಕುಮಾರ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಮಹಾವೀರ ಉಪಾಧ್ಯೆ, ಸೂರಜ್ ಜೈನ ಇದ್ದರು. ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತಪ್ರಸಾದ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.

ಎಸ್‌ಡಿಎಂ ಹಾಗೂ ಜೆಎಸ್ಸೆಸ್‌ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಸ್ತು, ವ್ಯವಸ್ಥೆ, ಸ್ವಚ್ಛತೆ ಹಾಗೂ ಚಾರಿತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಂಸ್ಥೆಗಳ ಶಿಕ್ಷಕರ, ಸಿಬ್ಬಂದಿ ಸೇವೆ, ಜನರ ಪ್ರಿತಿಯಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಶೈಕ್ಷಣಿಕ ಗುಣಮಟ್ಟ, ಶಿಸ್ತು ಕಾಪಾಡಿಕೊಳ್ಳುತ್ತೇವೆ ಎಂದು ಧರ್ಮಾಧಿಕಾರಿ ಡಾ. ಡಿ . ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.