ಮಡಿಕೇರಿ, ಗೋಣಿಕೊಪ್ಪ ದಸರಾ ಯಶಸ್ಸುಗೊಳಿಸಿ: ಜಿಲ್ಲಾಧಿಕಾರಿ

| Published : Oct 08 2023, 12:01 AM IST

ಮಡಿಕೇರಿ, ಗೋಣಿಕೊಪ್ಪ ದಸರಾ ಯಶಸ್ಸುಗೊಳಿಸಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆಗೆ ಸಂಬಂಧಿಸಿದಂತೆ ಮಡಿಕೇರಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜ ಮಾತನಾಡಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ದಸರಾ ಸಮಿತಿಗಳೊಂದಿಗೆ ಸಹಕರಿಸುವ ಮೂಲಕ ಅತ್ಯಂತ ವ್ಯವಸ್ಥಿತವಾಗಿ, ಯಶಸ್ವಿ ದಸರಾ ಆಚರಣೆ ಮಾಡುವಂತೆ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಅಗತ್ಯ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯ ಭದ್ರತೆಯನ್ನು ಪಿ.ಡಬ್ಲ್ಯೂ.ಡಿ ಇಲಾಖೆ ಅಧಿಕಾರಿಗಳು ಗಮನಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೂಕ್ತ ಸಿದ್ಧತೆ ಮಾಡಬೇಕೆಂದು ಅವರು ಸೂಚಿಸಿದರು. ಕಾರ್ಯಕ್ರಮ ವ್ಯಾಪ್ತಿಯ 100-200 ಮೀಟರ್ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳವನ್ನು ನಿಯೋಜಿಸುವಂತೆ ಸಲಹೆ ನೀಡಿದರು. ದಸರಾ ದಿನಗಳಲ್ಲಿ ನಿರಂತರ ವಿದ್ಯುತ್ ಪೂರೈಸಲು ಸೆಸ್ಕ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ವೇದಿಕೆಯಲ್ಲಿ ಅಲಂಕಾರಿಕ ಹೂ ಕುಂಡ ವ್ಯವಸ್ಥೆಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ವೇದಿಕೆಯ ಬಳಿ ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು. ಆಂಬುಲೆನ್ಸ್ ವಾಹನ ಸಿದ್ಧವಿರಬೇಕು. ಮಡಿಕೇರಿ ಮತ್ತು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆ ವೈದ್ಯರು ಸಿದ್ಧರಿರಬೇಕು ಎಂದು ನಿರ್ದೇಶನ ನೀಡಿದರು. ಮಡಿಕೇರಿ, ಗೋಣಿಕೊಪ್ಪ ನಗರದ ಎಲ್ಲ ಭಾಗಗಳಲ್ಲಿಯೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು. ನಗರಸಭಾ ಅಧ್ಯಕ್ಷೆ ಮತ್ತು ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಸಾಂಸ್ಕೃತಿಕ, ಕ್ರೀಡಾ, ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾವನ್ನು ವ್ಯವಸ್ಥಿತವಾಗಿ ನಡೆಸಲಾಗುವುದು. ಮಡಿಕೇರಿ ನಗರದ ಅನೇಕ ಭಾಗಗಳಲ್ಲಿ ಹೆಚ್ಚಿನ ಸಿ.ಸಿ. ಕ್ಯಾಮೆರಾ ಅಳವಡಿಸಲು ಮನವಿ ಮಾಡಿದರು. * ಸರ್ಕಾರದಿಂದ 75 ಲಕ್ಷ ರು. ಬಜೆಟ್‌ ಈ ಬಾರಿ ಸರ್ಕಾರ ಇದುವರೆಗೆ ದಸರಾಕ್ಕೆ 75 ಲಕ್ಷ ರು. ಬಜೆಟ್‌ ನೀಡಿದೆ. ಇರುವ ಹಣದಲ್ಲಿಯೇ ವ್ಯವಸ್ಥಿತ ದಸರಾವನ್ನು ನಡೆಸಲಾಗುತ್ತದೆ. ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ನಿರೀಕ್ಷೆ ಮಾಡಲಾಗಿದೆ. ದಸರಾ ಪ್ರಯುಕ್ತ ನಗರದಲ್ಲಿ 10 ದಿನಗಳ ಕಾಲವೂ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದರು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುವುದು. ಆದ್ದರಿಂದ ಹೊಸ ಖಾಸಗಿ ಬಸ್ ನಿಲ್ದಾಣದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಅನಿತಾ ಪೂವಯ್ಯ ಕೋರಿದರು. ದಸರಾ ಸಮಿತಿ ಗೌರವ ಅಧ್ಯಕ್ಷ ಜಿ.ಚಿದ್ವಿಲಾಸ್ ಮಾತನಾಡಿ, ಸಹಸ್ರಾರು ಮಂದಿ ಪ್ರವಾಸಿಗರು ಆಗಮಿಸುವುದರಿಂದ ತುರ್ತು ಸಹಾಯವಾಣಿಯನ್ನು ಅಗತ್ಯತೆ ಬಗ್ಗೆ ಮನವರಿಕೆ ಮಾಡಿದರು. ರಾಜಸೀಟ್ ಅನ್ನು ರಾತ್ರಿ ಪೂರ್ತಿ ದಸರಾ ದಿನ ತೆರೆಯುವ ಮೂಲಕ ಪ್ರವಾಸಿ ದಟ್ಟಣೆ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು. ದಶ ಮಂಟಪಗಳ ತೀರ್ಪುಗಾರರಿಗೆ ಮುಂಜಾಗ್ರತ ಕ್ರಮವಾಗಿ ಭದ್ರತಾ ವ್ಯವಸ್ಥೆಯನ್ನು ನೀಡಬೇಕು. ಹಾಗೆಯೇ ತೀರ್ಪುಗಾರರನ್ನು ಕರೆತರಲು ವ್ಯವಸ್ಥಿತವಾಗಿ ಯೋಜನೆ ರೂಪಿಸಬೇಕು. ನಗರದ ಅಲ್ಲಲ್ಲಿ ಮೊಬೈಲ್ ಶೌಚಾಲಯಗಳನ್ನು ನಿರ್ಮಿಸಬೇಕು. ಹಾಗೆಯೇ ತಾತ್ಕಾಲಿಕ ಅಂಗಡಿಗಳನ್ನು ಹಾಕುವ ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡಬಾರದು ಎಂದು ಚಿದ್ವಿಲಾಸ್ ಕೋರಿದರು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಡಿಕೇರಿ ದಸರಾ ಕುರಿತು ಪ್ರಚಾರ ಮಾಡಬೇಕು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾ ಗಡಿಭಾಗದಲ್ಲಿ ಮತ್ತು ಮಡಿಕೇರಿಗೆ ಬರುವ ಮಾರ್ಗದಲ್ಲಿ ಸ್ವಾಗತ ಫಲಕ ಅಳವಡಿಸಬೇಕು ಎಂದು ಚಿದ್ವಿಲಾಸ್ ಸಲಹೆ ನೀಡಿದರು. * 16ರಂದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಅ.16ರಿಂದ 24ರ ವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲು ಸಾಂಸ್ಕೃತಿಕ ಸಮಿತಿ ಸಿದ್ಧವಾಗಿದೆ. ಈಗಾಗಲೇ ಕಲಾವಿದರು ಮತ್ತು ಕಲಾತಂಡಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅ.16ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ. ಅ.19ರಂದು ಜಾನಪದ ದಸರಾ, 20ರಂದು ಮಕ್ಕಳ ದಸರಾ, 22ರಂದು ಮಹಿಳಾ ದಸರಾ ಕೂಡ ಜರುಗಲಿದೆ. ಕೊಡಗು ಮತ್ತು ಹೊರ ಜಿಲ್ಲೆಯ 40ಕ್ಕೂ ಅಧಿಕ ಕಲಾತಂಡಗಳು ಈ ಬಾರಿ ಮಡಿಕೇರಿ ದಸರಾದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ದಸರಾ ಸಮಿತಿ ನೀಡಿದ ಅನುದಾನಕ್ಕೆ ಸರಿಯಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ಶಾಸಕ ಡಾ. ಮಂತರ್ ಗೌಡ ಮುತುವರ್ಜಿಯಲ್ಲಿ ಮಹಿಳಾ ದಸರಕ್ಕೆ ಕರ್ನಾಟಕದ ಹೆಸರಾಂತ ಗಾಯಕರು ಕಾರ್ಯಕ್ರಮ ನೀಡಲು ಆಗಮಿಸುವ ಸಾಧ್ಯತೆ ಇದೆ. ಶಾಸಕರ ಸಲಹೆಯಂತೆ ವಿಜಯದಶಮಿ ದಿನ ಖ್ಯಾತ ಟೆನ್ನಿಸ್ ತಾರೆ ಕೊಡಗಿನ ರೋಹನ್ ಬೋಪಣ್ಣ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಅನಿಲ್ ಮಾಹಿತಿ ನೀಡಿದರು. ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನೀಡಿದ ಸಲಹೆ ಮೇರೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಕಾಫಿ ಮಂಡಳಿಯಿಂದ ಬಿಸಿ ಕಾಫಿ ವಿತರಿಸುವ ಬಗ್ಗೆ ತಾನು ಕಾಫಿ ಮಂಡಳಿ ಕಾರ್ಯದರ್ಶಿ ಡಾ. ಜಗದೀಶ್ ಅವರೊಂದಿಗೆ ಮಾತನಾಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ದಶಮಂಟಪದ ಅನುದಾನ ದಸರಾ ಆರಂಭಕ್ಕೆ ಮುನ್ನವೇ ಸಿಗಬೇಕು ಎಂದು ಜಿಲ್ಲಾಧಿಕಾರಿಗೆ ಕೋರಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ದಸರಾ ಸಮಿತಿ ಪದಾಧಿಕಾರಿ ಎಂ.ಬಿ.ದೇವಯ್ಯ ಮಾತನಾಡಿ, ತ್ವರಿತ ಗತಿಯಲ್ಲಿ ರಸ್ತೆ ಕಾಮಗಾರಿ ನಡೆಯಬೇಕು. ರಸ್ತೆ ಬದಿಯಲ್ಲಿನ ಕಾಡನ್ನು ಆದಷ್ಟು ಬೇಗ ತೆರವುಗೊಳಿಸಬೇಕು ಎಂದರು. ಪ್ರಮುಖರಾದ ಕೆ.ಎಸ್ ರಮೇಶ್, ಅಬ್ದುಲ್ ರಜಾಕ್. ಅರುಣ್ ಶೆಟ್ಟಿ ಎ.ಸಿ.ದೇವಯ್ಯ, ವೇದಿಕೆ ಸಮಿತಿ ಅಧ್ಯಕ್ಷರಾದ ಕನ್ನಂಡ ಕವಿತಾ, ಬೈ.ಶ್ರೀ.ಪ್ರಕಾಶ್ ಮಾತನಾಡಿ ದಸರಾಕ್ಕೆ ಬೇಕಾಗುವಂತಹ ವಸ್ತುಗಳನ್ನು ತರಲು ಅನುಮತಿ ನೀಡಬೇಕು. ಕ್ರೀಡಾ ಸಮಿತಿಗೆ ಮೈದಾನವನ್ನು ಉಚಿತವಾಗಿ ನೀಡಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇದರ ಬಗ್ಗೆ ಗಮನಹರಿಸಬೇಕು ಎಂದು ಕೋರಿದರು. ಮಡಿಕೇರಿ ನಗರದ ಪ್ರತಿಯೊಂದು ಅಂಗಡಿಗಳಲ್ಲಿಯೂ ಕಸದ ಬುಟ್ಟಿಯನ್ನು ಇರಿಸಲು ಸೂಚಿಸಬೇಕು. ದಶಮಂಟಪ ಪರಿಶೀಲನೆಗೆ ಪಿಡಬ್ಲ್ಯೂಡಿ ಇಲಾಖೆಯನ್ನು ನಿಯೋಜಿಸಬೇಕು ಎಂದು ದಸರಾ ಸಮಿತಿ ಪ್ರಮುಖ ಸದಸ್ಯರು ಮನವಿ ಮಾಡಿಕೊಂಡರು. ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ಮಡಿಕೇರಿ ದಸರಾ ಸಮಿತಿ ಕಾರ್ಯಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಗೋಣಿಕೊಪ್ಪ ದಸರಾ ಸಮಿತಿ ಕಾರ್ಯಧ್ಯಕ್ಷರಾದ ಪ್ರಮೋದ್, ಪೊಲೀಸ್ ಅಧಿಕಾರಿ ಮೇದಪ್ಪ, ಮಡಿಕೇರಿ ನಗರಸಭೆ ಪೌರಾಯುಕ್ತರಾದ ವಿಜಯ್ ಸೇರಿದಂತೆ ಪ್ರಮುಖರು ಹಲವು ಸಲಹೆಗಳನ್ನು ನೀಡಿದರು. ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಪ್ರತಿವರ್ಷದಂತೆ ಈ ವರ್ಷವೂ ವ್ಯವಸ್ಥಿತವಾಗಿ ಯಶಸ್ವಿಯಾಗಿ ಆಚರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.