ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕೆಟಿಎಸ್ ಸ್ಪರ್ಧೆ ನಿಶ್ಚಿತ

| Published : May 10 2024, 01:31 AM IST

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕೆಟಿಎಸ್ ಸ್ಪರ್ಧೆ ನಿಶ್ಚಿತ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ವಲಯದಿಂದಲೂ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ಬೆಂಬಲಿಗರು, ಅಭಿಮಾನಿಗಳೂ ಕೂಡ ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಲೇಬೇಕೆಂದು ಹಠ ಹಿಡಿದಿದ್ದಾರೆ. ಶಿಕ್ಷಕರ ಕ್ಷೇತ್ರವನ್ನು ಮೊದಲಬಾರಿಗೆ ಪ್ರತಿನಿಧಿಸುತ್ತಿದ್ದರೂ ಎಲ್ಲ ಶಿಕ್ಷಕರನ್ನೂ ಈಗಾಗಲೇ ಕೆ.ಟಿ.ಶ್ರೀಕಂಠೇಗೌಡರು ಎರಡೆರಡು ಬಾರಿ ತಲುಪಿದ್ದಾರೆ. ಎರಡು ಬಾರಿ ಮನವಿ ಪತ್ರಗಳನ್ನು ಕಳುಹಿಸಿದ್ದಾರೆ. ಶಿಕ್ಷಕರಿಂದಲೂ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದಕ್ಕೆ ಸರಿಯದಿರಲು ತೀರ್ಮಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಅಥವಾ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಕ್ಕೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ದೃಢ ನಿರ್ಧಾರ ಮಾಡಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದಿಂದ ಎರಡು ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವ ಕೆ.ಟಿ.ಶ್ರೀಕಂಠೇಗೌಡ ಅವರು ಇದೇ ಮೊದಲ ಬಾರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ, ಒಮ್ಮೆ ಕಾಂಗ್ರೆಸ್ ಹಾಗೂ ಎರಡು ಬಾರಿ ಜೆಡಿಎಸ್‌ನಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮರಿತಿಬ್ಬೇಗೌಡ ಅವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಐದನೇ ಬಾರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಅವರಿಗೆ ಈಗ ಕೆ.ಟಿ.ಶ್ರೀಕಂಠೇಗೌಡ ಸವಾಲಾಗಿ ಪರಿಣಮಿಸಿದ್ದಾರೆ.

ಜೆಡಿಎಸ್ ಪಕ್ಷದ ನಿಷ್ಠ ನಾಯಕರಾಗಿರುವ ಕೆ.ಟಿ.ಶ್ರೀಕಂಠೇಗೌಡರು ಜೆಡಿಎಸ್ ಪಕ್ಷದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ಹೇಳುತ್ತಿದ್ದಾರೆಯಾದರೂ ಇನ್ನೂ ಒಮ್ಮತದ ನಿಲುವಿಗೆ ಬಂದಿಲ್ಲ. ಒಮ್ಮೆ ಬಿಜೆಪಿ ಜೊತೆ ಮೈತ್ರಿಯಾಗಿ ಕ್ಷೇತ್ರ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾದರೆ ಅಥವಾ ಕೊನೇ ಘಳಿಗೆಯಲ್ಲಿ ಜೆಡಿಎಸ್ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿರುವ ವಿವೇಕಾನಂದ ಅವರಿಗೆ ಟಿಕೆಟ್ ನೀಡಿದರೆ ಗೊಂದಲಗಳಿಗೆ ಒಳಗಾಗಬಾರದೆಂಬ ಕಾರಣಕ್ಕೆ ಎಲ್ಲಾ ರೀತಿಯಲ್ಲೂ ಸಜ್ಜಾಗಿರುವುದಕ್ಕೆ ಕೆ.ಟಿ.ಶ್ರೀಕಂಠೇಗೌಡರು ನಿರ್ಧರಿಸಿದ್ದಾರೆ.

ಶುಕ್ರವಾರ (ಮೇ ೯)ದಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದೆ. ಜೆಡಿಎಸ್ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಯನ್ನು ಖಚಿತಪಡಿಸುತ್ತಿಲ್ಲ. ಬಿಜೆಪಿಯೊಂದಿಗಿನ ಮೈತ್ರಿ ಮಾತುಕತೆಯೂ ನಡೆದಿಲ್ಲ. ಪಕ್ಷವನ್ನು ನಂಬಿಕೊಂಡರೆ ಒಂದು ರೀತಿಯ ಅತಂತ್ರ ಪರಿಸ್ಥಿತಿಗೆ ಸಿಲುಕಬೇಕಾಗುತ್ತದೆ. ಆದ ಕಾರಣ ಪಕ್ಷೇತರ ಅಭ್ಯರ್ಥಿಯಾಗಾದರೂ ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೆ ಒಲವು ತೋರಿದ್ದಾರೆ.

ಜೆಡಿಎಸ್‌ನ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ ವಿವೇಕಾನಂದ ಅವರೂ ಸಹ ತಮಗೇ ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಎಲ್ಲೋ ಒಂದು ಕಡೆ ಜೆಡಿಎಸ್ ವರಿಷ್ಠರು ಕೆಟಿಎಸ್‌ಗಿಂತ ವಿವೇಕಾನಂದರಿಗೆ ಮಣೆ ಹಾಕುವರೆಂಬ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಕೆ.ಟಿ.ಶ್ರೀಕಂಠೇಗೌಡರು ಪಕ್ಷೇತರ ಅಭ್ಯರ್ಥಿಯಾಗಾದರೂ ತಾವು ಕಣದಲ್ಲಿ ಉಳಿಯುವ ಕುರಿತು ಪಕ್ಷದ ವರಿಷ್ಠರಿಗೆ ಮೊದಲೇ ತಿಳಿಸಿ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ಎರಡು ಬಾರಿ ದಕ್ಷಿಣ ಪದವೀಧರ ಕ್ಷೇತ್ರವನ್ನು ಕೆ.ಟಿ.ಶ್ರೀಕಂಠೇಗೌಡರು ಪ್ರತಿನಿಧಿಸಿದರೂ ಶಿಕ್ಷಕರೊಂದಿಗೆ ಅತೀ ಹೆಚ್ಚಿನ ಒಡನಾಟವನ್ನು ಹೊಂದಿದ್ದಾರೆ. ಸ್ವತಃ ಶಿಕ್ಷಕರಾಗಿ ಸಹ ಶಿಕ್ಷಕರು, ಮುಖ್ಯಶಿಕ್ಷಕರು, ಪ್ರಾಂಶುಪಾಲರು, ಸರ್ಕಾರಿ, ಖಾಸಗಿ, ಅನುದಾನಿತ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಸಮಗ್ರ ಅರಿವನ್ನು ಹೊಂದಿದ್ದಾರೆ. ಸಮರ್ಥವಾಗಿ ಧ್ವನಿ ಎತ್ತುವ ನಾಯಕರೆನಿಸಿದ್ದಾರೆ. ಇಂತಹವರನ್ನು ವಿಧಾನಪರಿಷತ್‌ಗೆ ಕಳುಹಿಸುವುದು ಅವಶ್ಯ ಎಂಬುದು ಬೆಂಬಲಿಗರ ಮಾತಾಗಿದೆ.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೂ ಕೂಡ ವಿಧಾನಪರಿಷತ್‌ಗೆ ಕೆ.ಟಿ.ಶ್ರೀಕಂಠೇಗೌಡರು ಒಂದು ಆಸ್ತಿ ಇದ್ದಂತೆ. ಉತ್ತಮ ವಾಕ್ಚಾತುರ್ಯ, ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಿ ಎಲ್ಲರ ಗಮನಸೆಳೆಯುವ ಮೂಲಕ ಉತ್ತಮ ಶಾಸಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಅವರು ಮೇಲ್ಮನೆಯಲ್ಲಿರಬೇಕೆಂಬ ಅಭಿಮತವಿದೆ.

ಈಗಾಗಲೇ ಪ್ರೌಢಶಾಲೆ, ಪದವಿಪೂರ್ವ, ಪದಪವಿ, ಇಂಜಿನಿಯರಿಂಗ್, ಮೆಡಿಕಲ್, ಬಿಎಡ್, ಡಿಎಡ್ ಕಾಲೇಜು ಶಿಕ್ಷಕರ ನಿರಂತರ ಸಂಪರ್ಕದಲ್ಲಿದ್ದು ಎರಡೆರಡು ಬಾರಿ ಮುಖತಃ ಭೇಟಿಯಾಗಿ ಬಂದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಬದ್ಧತೆ, ಜಾಣ್ಮೆ ಕೆ.ಟಿ.ಶ್ರೀಕಂಠೇಗೌಡರಲ್ಲಿದೆ. ಜೆಡಿಎಸ್ ಪಕ್ಷದ ಬಹುತೇಕ ಸ್ಥಳೀಯ ನಾಯಕರೊಂದಿಗೆ ವಿಶ್ವಾಸ, ಆತ್ಮೀಯ ಒಡನಾಟವನ್ನು ಹೊಂದಿರುವ ಶ್ರೀಕಂಠೇಗೌಡರು ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಯಲೇಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕೆ ಅವರ ಬೆಂಬಲಿಗರೆಲ್ಲರೂ ಬೆಂಬಲವಾಗಿ ನಿಂತಿದ್ದು, ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಕದನ ರೋಚಕತೆಯಿಂದ ಕೂಡುವ ವಾತಾವರಣ ಸೃಷ್ಟಿಯಾಗುತ್ತಿದೆ.

ಗಮನಹರಿಸದ ದಳಪತಿಗಳು; ಶ್ರೀಕಂಠೇಗೌಡರಿಗೆ ಹೆಚ್ಚಿದ ಒತ್ತಡ:

ಜೆಡಿಎಸ್ ವರಿಷ್ಠರು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗಿಂತಲೂ ಪೆನ್‌ಡ್ರೈವ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ರೇವಣ್ಣ ಬಂಧನ, ಪ್ರಜ್ವಲ್ ಆಗಮಿಸದಿರುವುದರ ಬಗ್ಗೆ ಹೆಚ್ಚು ಗಮನಹರಿಸುತ್ತಾ ಪಕ್ಷ ಯಾವ ರೀತಿ ಈ ಪ್ರಕರಣದಲ್ಲಿ ಹೆಜ್ಜೆ ಇಡಬೇಕೆಂಬ ಬಗ್ಗೆ ಚರ್ಚಿಸುತ್ತಿದ್ದಾರೆ. ಮೈತ್ರಿ ವಿಷಯವಾಗಿ ಚರ್ಚೆ ನಡೆಸುವುದಕ್ಕೆ ಬಿಜೆಪಿ ಇನ್ನೂ ಒಲವು ತೋರಿಲ್ಲ. ಹೀಗಾಗಿ ಕೆ.ಟಿ.ಶ್ರೀಕಂಠೇಗೌಡರು ಜೆಡಿಎಸ್ ಅಥವಾ ಮೈತ್ರಿ ಅಭ್ಯರ್ಥಿಯಾಗುವ ಬಗ್ಗೆ ಇನ್ನೂ ಖಚಿತತೆ ಸಿಗದಿರುವುದರಿಂದ ಬೆಂಬಲಿಗರ ಸಭೆ ಕರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ.ಶಿಕ್ಷಕರ ವಲಯದಿಂದಲೂ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ಬೆಂಬಲಿಗರು, ಅಭಿಮಾನಿಗಳೂ ಕೂಡ ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಲೇಬೇಕೆಂದು ಹಠ ಹಿಡಿದಿದ್ದಾರೆ. ಶಿಕ್ಷಕರ ಕ್ಷೇತ್ರವನ್ನು ಮೊದಲಬಾರಿಗೆ ಪ್ರತಿನಿಧಿಸುತ್ತಿದ್ದರೂ ಎಲ್ಲ ಶಿಕ್ಷಕರನ್ನೂ ಈಗಾಗಲೇ ಕೆ.ಟಿ.ಶ್ರೀಕಂಠೇಗೌಡರು ಎರಡೆರಡು ಬಾರಿ ತಲುಪಿದ್ದಾರೆ. ಎರಡು ಬಾರಿ ಮನವಿ ಪತ್ರಗಳನ್ನು ಕಳುಹಿಸಿದ್ದಾರೆ. ಶಿಕ್ಷಕರಿಂದಲೂ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದಕ್ಕೆ ಸರಿಯದಿರಲು ತೀರ್ಮಾನಿಸಿದ್ದಾರೆ.

‘ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನನ್ನ ಹೆಸರನ್ನು ಸೂಚಿಸಿ ಅಂತಿಮಗೊಳಿಸಲಾಗಿದೆ. ಮೊದಲ ಸುತ್ತಿನಲ್ಲಿ ಬಿಜೆಪಿ ಜೊತೆ ನಡೆದ ಮಾತುಕತೆಯಲ್ಲಿ ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿದೆ. ನಾಳೆ ಅಂತಿಮ ಹಂತದ ಮಾತುಕತೆ ನಡೆಯಲಿದೆ. ಮೇ ೧೬ರಂದು ಉಮೇದುವಾರಿಕೆ ಸಲ್ಲಿಸುವುದಕ್ಕೆ ನಿರ್ಧರಿಸಿದ್ದೇನೆ.’

- ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಟಿಕೆಟ್ ಆಕಾಂಕ್ಷಿ, ದಕ್ಷಿಣ ಶಿಕ್ಷಕರ ಕ್ಷೇತ್ರ