ದೇಶದಲ್ಲಿ ಸರ್ವಾಧಿಕಾರ ಯಾರೂ ಒಪ್ಪಲ್ಲ: ಪ್ರೊ. ಮನೋರಖ್ಖಿತ ಬಂತೇಜಿ

| Published : May 10 2024, 01:31 AM IST

ದೇಶದಲ್ಲಿ ಸರ್ವಾಧಿಕಾರ ಯಾರೂ ಒಪ್ಪಲ್ಲ: ಪ್ರೊ. ಮನೋರಖ್ಖಿತ ಬಂತೇಜಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿದ್ದು, ಮಾನವ ಹಕ್ಕುಗಳನ್ನು ಭಾರತಕ್ಕೆ ಪರಿಚಯಿಸಿದ ಮಹಾಮಾನವತವಾದಿ. ಸಂವಿಧಾನಬದ್ಧವಾಗಿ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಸಂವಿಧಾನಕ್ಕೆ ಧಕ್ಕೆ ಆಗುವಂತೆ ಯಾರೂ ನಡೆದುಕೊಳ್ಳಬಾರದು.

- ಜನಸಾಮಾನ್ಯರ ವಿರುದ್ಧ ಕೆಲಸ ಮಾಡಿದಾಗ ಅಧಿಕಾರ ಕಳೆದುಕೊಂಡು ಓಡಬೇಕಾಗುತ್ತದೆ

- ಮಹಾರಾಜ ಕಾಲೇಜಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

----

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದಲ್ಲಿ ಸರ್ವಾಧಿಕಾರವನ್ನು ಯಾರೂ ಒಪ್ಪಲ್ಲ ಎಂದು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಪ್ರೊ. ಮನೋರಖ್ಖಿತ ಬಂತೇಜಿ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿಯು ಗುರುವಾರ ಆಯೋಜಿಸಿದ್ದ ವಿಶ್ವಜ್ಞಾನಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರ ವಿರುದ್ಧ ಕೆಲಸ ಮಾಡಿದಾಗ ಅಧಿಕಾರ ಕಳೆದುಕೊಂಡು ಓಡಬೇಕಾಗುತ್ತದೆ ಎಂಬುದನ್ನು ಉದಾಹರಣೆಗಳ ಸಹಿತ ಹೇಳಿದರು.

ಡಾ. ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿದ್ದು, ಮಾನವ ಹಕ್ಕುಗಳನ್ನು ಭಾರತಕ್ಕೆ ಪರಿಚಯಿಸಿದ ಮಹಾಮಾನವತವಾದಿ. ಸಂವಿಧಾನಬದ್ಧವಾಗಿ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಸಂವಿಧಾನಕ್ಕೆ ಧಕ್ಕೆ ಆಗುವಂತೆ ಯಾರೂ ನಡೆದುಕೊಳ್ಳಬಾರದು. ದೇಶದಲ್ಲಿ ಹುಟ್ಟಿದ ಎಲ್ಲಾ ಜಾತಿ, ಧರ್ಮದವರೂ ಸುಖಿ ಆಗಿರಬೇಕು. ತಂದೆ ಮಕ್ಕಳನ್ನು ನೋಡಿಕೊಳ್ಳುವಂತೆ ದೇಶದ ಪ್ರಧಾನಿಯವರು ಪ್ರಜೆಗಳನ್ನು ನೋಡಿಕೊಳ್ಳಬೇಕು ಎಂದರು.

ಡಾ. ಅಂಬೇಡ್ಕರ್ ಅವರ ಜ್ಞಾನದ ಸಂಕೇತ ಆಗಿದ್ದರು. ಎಲ್ಲಿ ದೇವರು, ಜಾತಿ, ಧರ್ಮ ಕೆಲಸ ಮಾಡಿದಾಗ ಅಲ್ಲಿ ಪ್ರಜಾಪ್ರಭುತ್ವ ಕೆಲಸ ಮಾಡಲ್ಲ. ಕೋಮುವಾದ, ಜಾತಿವಾದ ಮುಂದಿಟ್ಟು ಅಧಿಕಾರ ಮಾಡಿದರೇ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತದೆ. ಜಾತಿ ಹೆಸರಿನಲ್ಲಿ ಸಿಗುವ ಸೌಲಭ್ಯ ಬಳಸಿಕೊಂಡು ಸಬಲೀಕರಣವಾಗಬೇಕು. ಸಮಾಜದಲ್ಲಿ ಜಾತೀಯತೆಯನ್ನು ಅಳಿಸಿ ಹಾಕಬೇಕು. ಜಾತೀಯತೆಯನ್ನು ಅಳಿಸಲು ಡಾ. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಅನುಸರಿಸಿದರು ಎಂದು ಅವರು ತಿಳಿಸಿದರು.

ರಾಜಪ್ರಭುತ್ವ ಶೋಷಣೆಯ ಅಸ್ತ್ರವಾಗಿತ್ತು. ಪ್ರಜಾಪ್ರಭುತ್ವ ಪ್ರತಿಯೊಬ್ಬರಿಗೂ ಹಕ್ಕು ಕಲ್ಪಿಸಿದೆ. ಪ್ರತಿಯೊಂದು ರಾಷ್ಟ್ರೀಕರಣವಾದಾಗ ಎಲ್ಲರಿಗೂ ಆಸ್ತಿ, ಅಧಿಕಾರ ಹಂಚಿಕೆ ಆಗುತ್ತದೆ ಎಂದು ಅವರು ಹೇಳಿದರು.

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ನರೇಂದ್ರಕುಮಾರ್, ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್. ಸೋಮಶೇಖರಪ್ಪ, ಆಡಳಿತಾಧಿಕಾರಿ ಪ್ರೊ.ವಿ. ಷಣ್ಮುಗಂ, ಪಠ್ಯೇತರ ಚಟುವಚಿಕೆಗಳ ಸಮಿತಿಯ ಸಂಚಾಲಕ ಪ್ರೊ.ಸಿ.ಈ. ಲೋಕೇಶ್ ಇದ್ದರು.