ಚಾಮರಾಜನಗರ : ರೈತರಿಗೆ ಕಾಟ ಕೊಡುತ್ತಿದ್ದ 40 ವರ್ಷದ ಸಲಗ ಸೆರೆ

| Published : May 09 2024, 01:01 AM IST / Updated: May 09 2024, 10:56 AM IST

ಚಾಮರಾಜನಗರ : ರೈತರಿಗೆ ಕಾಟ ಕೊಡುತ್ತಿದ್ದ 40 ವರ್ಷದ ಸಲಗ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ತಾಲೂಕಿನ ಹಂಗಳ, ಕಲೀಗೌಡನಹಳ್ಳಿ ಮತ್ತು ದೇವರಹಳ್ಳಿ ವ್ಯಾಪ್ತಿಯಲ್ಲಿ ರೈತರಿಗೆ ಕಾಟ ಕೊಡುತ್ತಿದ್ದ ಸಲಗವನ್ನು ಕೊನೆಗೂ ಬಂಡೀಪುರ ಅರಣ್ಯ ಇಲಾಖೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಸೆರೆ ಹಿಡಿದಿದ್ದಾರೆ.

 ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ತಾಲೂಕಿನ ಹಂಗಳ, ಕಲೀಗೌಡನಹಳ್ಳಿ ಮತ್ತು ದೇವರಹಳ್ಳಿ ವ್ಯಾಪ್ತಿಯಲ್ಲಿ ರೈತರಿಗೆ ಕಾಟ ಕೊಡುತ್ತಿದ್ದ ಸಲಗವನ್ನು ಕೊನೆಗೂ ಬಂಡೀಪುರ ಅರಣ್ಯ ಇಲಾಖೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಸೆರೆ ಹಿಡಿದಿದ್ದಾರೆ.

ಹಂಗಳ ಭಾಗದಲ್ಲಿ ಕಳೆದ ಆರು ತಿಂಗಳಿನಿಂದಲೂ ರೈತರ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ಹಾಳು ಮಾಡುತ್ತಿದ್ದ ಹಾಗೂ ರೈತರಿಗೆ ಆತಂಕ ತಂದಿದ್ದ ೪೦ ವರ್ಷ ಸಲಗವನ್ನು ಬಂಡೀಪುರ ಅರಣ್ಯ ಇಲಾಖೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಬುಧವಾರ ಸೆರೆ ಹಿಡಿದಿದ್ದಾರೆ. ಸಲಗ ಸೆರೆ ಹಿಡಿದ ವಿಷಯ ಅರಿತ ಹಂಗಳ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಏ.28 ರಿಂದಲೂ ಅರಣ್ಯ ಇಲಾಖೆಯು ರೈತರಿಗೆ ಆತಂಕ ತಂದ ಆನೆ ಸೆರೆ ಹಿಡಿಯಲು ಸತತವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ದಾಂಧಲೆ ಮಾಡುತ್ತಿದ್ದ ಆನೆ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಗಿನ ಕಾರ್ಯಾಚರಣೆ ಸಮಯದಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯದ ಸೋಮನಾಥಪುರ ಸ್ಯಾಂಡಲ್‌ ರಿಸರ್ವ್ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ೭ ಗಂಟೆಯ ಸಮಯದಲ್ಲಿ ಸೆರೆ ಹಿಡಿಯಲಾಗಿದೆ.

ಸಾಕಾನೆ ನೆರವು: ದುಬಾರೆ ಸಾಕಾನೆ ಶಿಬಿರದ ಕುಮ್ಕಿ ಆನೆಗಳಾದ ಈಶ್ವರ, ಕಂಜನ್,ಶ್ರೀರಾಮ, ಲಕ್ಷ್ಮಣ, ಬಂಡೀಪುರ ರಾಂಪುರ ಆನೆ ಶಿಬಿರದ ರೋಹಿತ್ ಸಹಕಾರದಲ್ಲಿ ಅರಣ್ಯ ಸಿಬ್ಬಂದಿ ಶ್ರಮದೊಂದಿಗೆ ಪುಂಡಾನೆ ಸೆರೆಯಾಗಿದೆ.

ಅನುಮತಿ ನೀಡಿದ್ರು:

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕಳೆದ ಮಾ.೩೦ ರಂದು ರೈತರಿಗೆ ಉಪಟಳ ನೀಡುತ್ತಿದ್ದ ಆನೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅನುಮತಿ ನೀಡಿದ್ದರು ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗು ನಿರ್ದೇಶಕ ಪ್ರಭಾಕರನ್ ಎಸ್ ಮಾಹಿತಿ ನೀಡಿದ್ದಾರೆ. ಸೆರೆ ಹಿಡಿದ ಕಾಡಾನೆ ೪೦ ವರ್ಷ ವಯಸ್ಸಿನ ಗಂಡಾನೆಯಾಗಿದ್ದು, ಆರೋಗ್ಯಕರವಾಗಿದೆ ಮತ್ತು ಸೆರೆ ಹಿಡಿದ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜನ ಸಮುದಾಯ ಪ್ರದೇಶಕ್ಕೆ ಹತ್ತಿರ ವಿಲ್ಲದ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗು ನಿರ್ದೇಶಕ ಪ್ರಭಾಕರನ್‌ ಎಸ್‌ ಮಾರ್ಗದರ್ಶನದಲ್ಲಿ ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ನವೀನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಚ್.ಎಂ, ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್, ಗಜೇಂದ್ರ, ವಿಜಯ್, ಕಾರ್ತಿಕ್, ಗೋಪಾಲಕೃಷ್ಣ, ಗಸ್ತು ಅಧಿಕಾರಿಗಳಾದ ಆನಂದ, ಬರಕತ್ ಅಲಿ, ಹಜೀಂ ಪಟೇಲ್, ಮುಖ್ಯ ಪಶು ವೈದ್ಯರಾದ ಡಾ.ಮುಜೀಬ್‌ ರೆಹಮಾನ್, ಡಾ.ಮೀರ್ಜಾ ವಾಸೀಂ ಹಾಗೂ ಅಕ್ರಂ ಪಾಷಾ, ದಲಾಯತ್, ರಂಜನ್ ಸೇರಿ ದುಬಾರೆ ಸಾಕಾನೆ ಶಿಬಿರ, ಗೋಪಾಲಸ್ವಾಮಿ ಬೆಟ್ಟ, ಕುಂದುಕೆರೆ ವಲಯದ ವನ್ಯ ಪ್ರಾಣಿ ಹತ್ಯೆ ತಡೆ ಶಿಬಿರದ ಸಿಬ್ಬಂದಿಯಿದ್ದರು.

ಕ್ರೈನ್‌ ನಲ್ಲಿ ಲಾರಿಗೇರಿಸಿದ್ರು!:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಬಂಧಿಯಾದ ಕಾಡಾನೆಯನ್ನು ಕ್ರೈನ್‌ ಮೂಲಕ ಲಾರಿಗೆ ಏರಿಸಿದರು. ಬಳಿಕ ಲಾರಿಯಲ್ಲಿ ಸೆರೆಯಾದ ಕಾಡಾನೆಯನ್ನು ಹೆಡಿಯಾಲ ಉಪ ವಿಭಾಗದ ಗುಂಡ್ರೇ ವಲಯದ ಕಬಿನಿ ಹಿನ್ನೀರ ಬಳಿ ಬಿಡಲು ಕರೆದುಕೊಂಡು ಹೋಗಲಾಯಿತು.