ಬುದ್ಧ, ಬಸವ, ಅಂಬೇಡ್ಕರ್‌ರನ್ನು ಅರ್ಥೈಸಿಕೊಳ್ಳಲು ಭಾರತೀಯರು ವಿಫಲ

| Published : May 10 2024, 01:31 AM IST

ಬುದ್ಧ, ಬಸವ, ಅಂಬೇಡ್ಕರ್‌ರನ್ನು ಅರ್ಥೈಸಿಕೊಳ್ಳಲು ಭಾರತೀಯರು ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದ ಬಸವಾದಿ ಶರಣರು ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿ 900 ವರ್ಷಗಳು ಗತಿಸಿದರೂ ಸಮಾಜ ಇಂದಿಗೂ ಜಾತಿ ಪದ್ಧತಿ, ಮೂಢನಂಬಿಕೆಯಿಂದ ಕೂಡಿದೆ ಎಂದು ಹಿರಿಯ ಜನಪರ ಹೋರಾಟಗಾರ ಮರಿಯಪ್ಪ ಹಳ್ಳಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

12ನೇ ಶತಮಾನದ ಬಸವಾದಿ ಶರಣರು ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿ 900 ವರ್ಷಗಳು ಗತಿಸಿದರೂ ಸಮಾಜ ಇಂದಿಗೂ ಜಾತಿ ಪದ್ಧತಿ, ಮೂಢನಂಬಿಕೆಯಿಂದ ಕೂಡಿದೆ ಎಂದು ಹಿರಿಯ ಜನಪರ ಹೋರಾಟಗಾರ ಮರಿಯಪ್ಪ ಹಳ್ಳಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬಸವ ಉತ್ಸವ-2024ದಲ್ಲಿ ವಚನ ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇವಲ ಶರಣರ ಜಯಂತಿ ಆಚರಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿದುಕೊಂಡರೆ ಅದು ತಪ್ಪು, ಬಸವಾದಿ ಶರಣರ ತತ್ವ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ಅಂದಾಗ ಮಾತ್ರ ಮಹಾತ್ಮರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ. ದಲಿತರು, ಹಿಂದುಳಿದ ವರ್ಗದವರೇ ಬಸವಣ್ಣನವರ ನಿಜವಾದ ಅನುಯಾಯಿಗಳು ಎಂದು ಪ್ರತಿಪಾದಿಸಿದ ಅವರು, ಬುದ್ಧ, ಬಸವ, ಅಂಬೇಡ್ಕರ್‌ರನ್ನು ಭಾರತೀಯರು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿಶ್ವಗುರು ಬಸವಣ್ಣ ನವರು ಬಹು ದೊಡ್ಡ ಸಮಾಜ ಜ್ಞಾನಿಯಾಗಿದ್ದು, ಅಂದಿನ ಕಾಲದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಕೆಳವರ್ಗದವರನ್ನು ಕಾಯಕಜೀವಿಗಳನ್ನು ಮುನ್ನೆಲೆಗೆ ಕರೆತಂದು ಎಲ್ಲ ದುಡಿವ ವರ್ಗದವರನ್ನು ಅನುಭವ ಮಂಟಪದ ವೇದಿಕೆಯಲ್ಲಿ ಕುಳ್ಳಿರಿಸಿ ಆತ್ಮಮಂಥನಕ್ಕೆ ಹಚ್ಚಿದರು ಎಂದು ಹೇಳಿದ ಅವರು, ವೈಚಾರಿಕ ನೆಲೆಗಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.

ಶರಣಾನುಯಾಯಿ ಬಸವರಾಜ ಮೊರಬದ, ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ ವಿಶ್ವನಾಥ ತೊಟ್ನಳ್ಳಿ ವೇದಿಕೆ ಮೇಲಿದ್ದರು.

ವಚನ ವೈಭವದಲ್ಲಿ ಅವಂತಿಕಾ ಬಿ ಘಂಟೆ, ಶ್ರಾವಣಿ ರಾಠೋಡ, ಬಾಬುರಾವ ಪಾಟೀಲ ಚಿತ್ತಕೋಟಾ, ಎಂ.ಎನ್. ಸುಗಂಧಿ ರಾಜಾಪೂರ ಅವರು ವಚನ ಸಂಗೀತ ನಡೆಸಿಕೊಟ್ಟು ಪ್ರೇಕ್ಷಕರ ಗಮನ ಸೆಳೆದರು.

ವಿಧವಾ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸೀರೆ, ಬಟ್ಟೆಗಳನ್ನು ಕೊಡುವ ಮೂಲಕ ಈ ಕಾರ್ಯಕ್ರಮ ಶರಣರ ವೈಚಾರಿಕೆ ಪ್ರಜ್ಞೆಗೆ ಸಾಕ್ಷಿಯಾಯಿತು.

ಜಿಲ್ಲೆಯ ವಿವಿಧ ಕ್ಷೇತ್ರದ ಪ್ರಮುಖರಾದ ವಿದ್ಯಾಸಾಗರ ದೇಶಮುಖ, ಡಾ ಚೆನ್ನಣ್ಣ ಬಾಳಿ ರಾವೂರ, ವಿಜಯಲಕ್ಷ್ಮೀ ನೆಪೆರಿ, ಮಹಾಲಿಂಗಪ್ಪಗೌಡ ಬಂಡೆಪ್ಪಗೌಡರ್, ಪ್ರಭುಲಿಂಗಯ್ಯ ಹಿರೇಮಠ ಕೊಂಡಗುಳಿ, ಶಂಕರ ಹಿಪ್ಪರಗಿ, ಶರಣಬಸಪ್ಪ ಪಾಟೀಲ ಉದನೂರ, ನವಾಜ್‌ ಖಾನ್, ಡಾ. ನೀಲಲೋಹಿತ ಹಿರೇಮಠ ಗಂವ್ಹಾರ, ನಂದಿಕುಮಾರ ಪಾಟೀಲ ಪೋಲಕಪಳ್ಳಿ, ನಾಗಪ್ಪ ಆರ್ ಕೋಟಗಾರ, ಜಗನ್ನಾಥ ಸೂರ್ಯವಂಶಿ ಅವರನ್ನು ಬಸವ ಗೌರವ ಪುರಸ್ಕಾರವನ್ನು ನೀಡಿ ಸತ್ಕರಿಸಲಾಯಿತು.