ಪಾವಗಡ ತಾಲೂಕಿನಲ್ಲಿ ಶೇ. 65ರಷ್ಟು ಮತದಾನ

| Published : Apr 27 2024, 01:18 AM IST

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ತಾಲೂಕಿನ 240 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಶೇ.65ರಷ್ಟು ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ತಾಲೂಕಿನ 240 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಶೇ.65ರಷ್ಟು ಮತದಾನವಾಗಿದೆ.

ತಾಲೂಕಿನ ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಯಶಸ್ವಿಯಾಗಿ ಮತದಾನ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಬಿರುಸಿನಿಂದ ಮತದಾನ ನಡೆದಿತ್ತು. ಆದರೆ ಈ ಬಾರಿ ತಾಲೂಕಿನಾದ್ಯಂತ ಮಂದಗತಿಯ ಮತದಾನವಾಗಿದೆ.

ಬೆಂಗಳೂರು ಹಾಗೂ ಇತರೆ ನಗರ ಪ್ರದೇಶಗಳಲ್ಲಿ ವಾಸವಿದ್ದ ಮತದಾರರು ಬಹುತೇಕ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಚುನಾವಣೆಯ ಕಾವು ಕಡಿಮೆ ಪ್ರಮಾಣದಲ್ಲಿದ್ದು, ಸಂಜೆ 6 ಗಂಟೆ ವೇಳೆಗೆ ತಾಲೂಕಿನಾದ್ಯಂತ ಶೇ 65ರಷ್ಟು ಮತದಾನವಾಯಿತು.

ಶೇ.100ರಷ್ಟು ಮತದಾನವಾಗಬೇಕೆಂಬ ಸರ್ಕಾರದ ಆದೇಶದನ್ವಯ ತಾಲೂಕು ಆಡಳಿತ ಹಾಗೂ ತಾಪಂಯಿಂದ ಕಡ್ಡಾಯ ಮತದಾನ ಕುರಿತು ಕಳೆದ 10 ದಿನಗಳಿಂದ ಎತ್ತಿನಗಾಡಿ ಇತರೆ ಜನಜಾಗೃತಿ ಜಾಥಾ ಮೂಲಕ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಆದರೆ ನಿರೀಕ್ಷೆಯಂತೆ ಮತದಾನವಾಗದ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಬೇಸರ ವ್ಯಕ್ತವಾಗಿದೆ.

ಬಿಜೆಪಿ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ ಹಾಗೂ ಪತ್ನಿ ಲಕ್ಷ್ಮೀದೇವಿ, ಡಾ.ವೆಂಕಟರಾಮಯ್ಯ, ಡಾ.ಜಿ.ವಿ.ಶಶಿಕಿರಣ್‌, ಜೆಡಿಎಸ್‌ ಹಿರಿಯ ಮುಖಂಡರಾದ ರಾಜಶೇಖರಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ, ತಾ,ಬಿಜೆಪಿ ಅಧ್ಯಕ್ಷ ರಂಗಣ್ಣ, ಜಿಲ್ಲಾ ಬಿಜೆಪಿ ಘಟಕದ ಪಾವಗಡ ರವಿ, ತಾ, ಜೆಡಿಎಸ್‌ ಕಾರ್ಯಾಧ್ಯಕ್ಷ ಸಾರವಾಟಪುರ ಗೋವಿಂದಬಾಬು, ರೈತ ಸಂಘದ ಅಧ್ಯಕ್ಷ ವಿ.ನಾಗಭೂಷಣರೆಡ್ಡಿ, ತಾಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಮತದಾನ ಮಾಡಿದರು.