ಪೆನ್ ಡ್ರೈವ್ ಪ್ರಕರಣ ಸಿಬಿಐಗೆ ವಹಿಸುವಂತೆ ಜೆಡಿಎಸ್ ಧರಣಿ

| Published : May 10 2024, 01:33 AM IST

ಪೆನ್ ಡ್ರೈವ್ ಪ್ರಕರಣ ಸಿಬಿಐಗೆ ವಹಿಸುವಂತೆ ಜೆಡಿಎಸ್ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಅಶ್ಲೀಲ ಸಿಡಿಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಭಾವಚಿತ್ರಗಳು ಮತ್ತು ಪ್ರತಿಕೃತಿಗಳಿಗೆ ಪೊರಕೆ ಸೇವೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪೆನ್ ಡ್ರೈವ್ ಹಂಚಿಕೆ ಹಿಂದಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿದ ಜೆಡಿಎಸ್ ಕಾರ್ಯಕರ್ತರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಕೃತಿ ದಹಿಸಿದರು.

ನಂತರ ಮಾನವ ಸರಪಳಿ ರಚಿಸಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು, ಅಶ್ಲೀಲ ಸಿಡಿಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಭಾವಚಿತ್ರಗಳು ಮತ್ತು ಪ್ರತಿಕೃತಿಗಳಿಗೆ ಪೊರಕೆ ಸೇವೆ ಮಾಡಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಿಡಿ ಹಂಚಿಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಜೆಡಿಎಸ್ ಪಕ್ಷ ಎಂದೂ ಬೆಂಬಲಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ, ಆಶ್ಲೀಲ ಸಿಡಿಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿ ರಾಜ್ಯದ ಮಹಿಳೆಯರ ಮಾನವನ್ನು ದೇಶ- ವಿದೇಶಗಳಲ್ಲಿ ಹರಾಜು ಹಾಕಿದವರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.

ಮಹಿಳೆಯರ ಮಾನ ಹರಾಜು ಹಾಕಿದ್ದೇ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ ವಿಶೇಷ ಯೋಜನೆ ಎಂದು ರಾಜ್ಯ ಸರ್ಕಾರದ ಆಡಳಿತ ನೀತಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎಚ್.ಟಿ.ಮಂಜು, ಹಳೇ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರೇ ಜನರ ಬಳಿ ನನ್ನ ಕೈಗೆ ಪೆನ್ನು, ಪೇಪರ್ ಕೊಡಿ ಎಂದು ಕೇಳುತ್ತಿದ್ದಿರಲ್ಲ. ಮಹಿಳೆಯರ ಮಾನ ಹರಾಜು ಹಾಕುವುದಕ್ಕಾಗಿ ನಿಮಗೆ ಪೆನ್ನು ಪೇಪರ್ ಬೇಕಾ? ಎಂದು ಪ್ರಶ್ನಿಸಿದರು.

ನಿಮ್ಮ ಅನೈತಿಕ ರಾಜಕಾರಣ ಸಮಸ್ತ ಒಕ್ಕಲಿಗ ಸಮುದಾಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ನಿಮ್ಮ ಶಿಖಂಡಿ ರಾಜಕಾರಣಕ್ಕೆ ನನ್ನ ಧಿಕ್ಕಾರವಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಯೋಗ್ಯತೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾಗಮಂಗಲದ ಜನ ಈಗಾಗಲೇ ಇವರನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಕಿಡಿಕಾರಿದರು.

ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಲು ಅಡ್ಡಿಪಡಿಸಿದ ಪೊಲೀಸರ ಬಗ್ಗೆಯೂ ಆಕ್ರೋಶ ಹೊರಹಾಕಿದ ಶಾಸಕರು, ಡಿಕೆಶಿ ಪ್ರತಿಕೃತಿ ದಹಿಸಲು ಹೋದರೆ ಅದನ್ನು ಕಿತ್ತುಕೊಳ್ಳಲು ಹೋಗುತ್ತೀರಿ. ಅದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಕೃತಿ ದಹಿಸುತ್ತಿದ್ದರೆ ಸುಮ್ಮನೆ ನೋಡುತ್ತಾ ನಿಂತುಕೊಳ್ಳುತ್ತೀರಿ. ಪೊಲೀಸರೇ, ದೇವೇಗೌಡರು ನಿಮಗೆ ಮಾಡಿರುವ ದ್ರೋಹವಾದರೂ ಏನು ಎಂದು ಪ್ರಶ್ನೆ ಮಾಡಿದರು.

ದೇಶಕ್ಕೆ ದೇವೇಗೌಡರ ಕೊಡುಗೆಯಿಲ್ಲವೆ? ರಾಜ್ಯ ಸರ್ಕಾರದ ಎಸ್ ಐಟಿ ತನಿಖೆ ಮೇಲೆ ನಮಗೆ ನಂಬಿಕೆಯಿಲ್ಲ. ಕಾಂಗ್ರೆಸ್ ಪಕ್ಷದ ನೀಚ ಮನಸ್ಥಿತಿಯ ರಾಜಕಾರಣಿಗಳಿಗೆ ಧಿಕ್ಕಾರವಿದೆ. ಪೆನ್ ಡ್ರೈವ್ ಹಂಚಿಕೆ ಮಾಡಿ ಮಹಿಳೆಯರ ಮಾನ ಹರಾಜು ಹಾಕಿದವರಿಗೂ ಶಿಕ್ಷೆಯಾಗಬೇಕು. ಅದಕ್ಕಾಗಿ ಮಹಿಳೆಯರ ಮೇಲಿನ ಎಲ್ಲಾ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್ಮುಲ್ ನಿರ್ದೇಶಕ ಡಾಲು ರವಿ, ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಒಕ್ಕಲಿಗರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಆರ್.ಧನಂಜಯ, ಮುಖಂಡರಾದ ಅಗ್ರಹಾರಬಾಚಹಳ್ಳಿ ನಾಗೇಶ್, ಬಿ.ಎಂ.ಕಿರಣ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.