ಮನೆಯಿಂದಲೇ ಮತದಾನ: 252 ಮಂದಿಯಿಂದ ಹಕ್ಕು ಚಲಾವಣೆ

| Published : Apr 27 2024, 01:00 AM IST

ಸಾರಾಂಶ

ಮಸ್ಕಿ ಕ್ಷೇತ್ರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮನೆಯಿಂದಲೇ ವೃದ್ಧರು ಹಾಗೂ ಅಂಗವಿಕರು ಮತದಾನ ನಡೆಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಮೇ 7ರಂದು ನಡೆಯಲಿರುವ ಎರಡನೇ ಹಂತದ ಕೊಪ್ಪಳ ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದಿಂದ ವೃದ್ಧರಿಗೆ, ಅಂಗವಿಕಲರಿಗೆ ಮನೆಯಿಂದಲೇ ಮತದಾನದ ಸೌಲಭ್ಯವನ್ನು ಒದಗಿಸಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 252 ಜನರು ಮತದಾನ ಮಾಡಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಿಂದ ಗುರುವಾರ ಬೆಳಗ್ಗೆ 8 ಗಂಟೆಗೆ ಆಯಾ ಮಾರ್ಗಗಳಿಗೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ರೂಟ್‌ಗಳ ಮನೆ-ಮನೆಗೆ ತರೆಳಿ ಮತದಾನ ಮಾಡಿಸಿದರು. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಏ.26ರವರೆಗೆ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದ ಮತದಾನ ಮಾಡಿದರು.

ಮತದಾನ ಪ್ರಮಾಣ: ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85ಕ್ಕೂ ಅಧಿಕ ವಯಸ್ಸಿನ ವೃದ್ಧರು 175 ಜನ ಹಾಗೂ 87 ಜನ ಅಂಗವಿಕಲ ಸೇರಿದಂತೆ ಒಟ್ಟು 262 ಜನ ಮತದಾರರು ಇದ್ದರು. ಮನೆಯಿಂದಲೇ ಒಟ್ಟು 252 ಮತದಾರರು ಮತಚಲಾಯಿದ್ದಾರೆ. ಶೇ.96ರಷ್ಟು ಮತದಾನವಾಗಿ ದಾಖಲೆ ನಿರ್ಮಿಸಿದಂತಾಗಿದೆ.

ರಣಬಿಸಿಲಿಗೆ ಅಧಿಕಾರಿಗಳು ಹೈರಾಣು: ಏ.25ರಂದು ನಡೆದ ಮನೆ ಮತದಾನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಲ್ಲಿನ ತಹಸೀಲ್ ಕಚೇರಿಯಲ್ಲಿ ಬೆಳಗ್ಗೆ ಉಪಾಹಾರ ಸೇವಿಸಿ ನಂತರ ಬೆಳಗ್ಗೆ 8 ಗಂಟೆಯಿಂದಲೇ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು ಮಸ್ಕಿ ಕ್ಷೇತ್ರದಲ್ಲಿ ಶೇ.96ರಷ್ಟು ಮತದಾರರು ಮತವನ್ನು ಮನೆಯಿಂದಲೇ ಚಲಾಯಿಸಿದ್ದಾರೆ ಎಂದು ಮಸ್ಕಿ ಎಆರ್‌ಒ ಜಗದೀಶ ಗಂಗಣ್ಣನವರ್ ತಿಳಿಸಿದರು.