ಭಾರೀ ಗಾಳಿ-ಮಳೆ: ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು

| Published : May 08 2024, 01:11 AM IST

ಭಾರೀ ಗಾಳಿ-ಮಳೆ: ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ರಾತ್ರಿ ಸುಮಾರು 8.45ರ ಸಮಯದಲ್ಲಿ ಭಾರೀ ಬಿರುಗಾಳಿಯೊಂದಿಗೆ ಮಳೆ ಆರಂಭವಾಯಿತು. ಮಳೆಯ ಬಿರುಸಿಗಿಂತಲೂ ಗಾಳಿಯ ಆರ್ಭಟ ಜೋರಾಗಿತ್ತು. ಗಾಳಿಯ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಮರಗಳು ಉರುಳಿಬಿದ್ದವು. ಅಶೋಕನ ಗರದ ವಿವೇಕಾನಂದ ರಸ್ತೆ, ಆಸ್ಪತ್ರೆ ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ, ಮಹಿಳಾ ಕಾಲೇಜು ಪಕ್ಕದ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮರದ ಕೊಂಬೆಗಳು ಉರುಳಿಬಿದ್ದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಸೋಮವಾರ ರಾತ್ರಿ ನಗರದಲ್ಲಿ ಭಾರೀ ಬಿರುಗಾಳಿ ಮಳೆಗೆ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಜನರಲ್ ಆಸ್ಪತ್ರೆ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ (28) ಎಂಬಾತನೇ ಮೃತಪಟ್ಟ ವ್ಯಕ್ತಿ. ಈತನ ಇನ್ನಿಬ್ಬರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಕಾರ್ತಿಕ್‌ನ ಹುಟ್ಟುಹಬ್ಬ ಇದ್ದ ಕಾರಣ ಮಾರುತಿ ಕಾರಿನಲ್ಲಿ ತನ್ನಿಬ್ಬರು ಸ್ನೇಹಿತರೊಂದಿಗೆ ಬಟ್ಟೆ ಖರೀದಿಸಿಕೊಂಡು ಹೋಗಲು ನಗರಕ್ಕೆ ಬಂದಿದ್ದರು. ಮಳೆ ಪ್ರಾರಂಭವಾದ ಕಾರಣ ರಸ್ತೆ ಬದಿಯ ಮರದ ಕೆಳಗೆ ಕಾರನ್ನು ನಿಲ್ಲಿಸಿದ್ದರು. ಭಾರೀ ಬಿರುಗಾಳಿ ಮಳೆಗೆ ಮರ ಕಾರಿನ ಮಧ್ಯ ಭಾಗಕ್ಕೆ ಬಿದ್ದಿತ್ತು. ಹಿಂದೆ ಕುಳಿತಿದ್ದ ಕಾರ್ತೀಕ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂದಿನ ಆಸನದಲ್ಲಿ ಕುಳಿತಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಕಾರಿನೊಳಗಿದ್ದ ಕಾರ್ತಿಕ್‌ನ ಶವವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು.

ಉರುಳಿ ಬಿದ್ದ ಮರಳು, ತುಂಡಾದ ವಿದ್ಯುತ್ ತಂತಿಗಳು:

ಸೋಮವಾರ ರಾತ್ರಿ ಸುಮಾರು 8.45ರ ಸಮಯದಲ್ಲಿ ಭಾರೀ ಬಿರುಗಾಳಿಯೊಂದಿಗೆ ಮಳೆ ಆರಂಭವಾಯಿತು. ಮಳೆಯ ಬಿರುಸಿಗಿಂತಲೂ ಗಾಳಿಯ ಆರ್ಭಟ ಜೋರಾಗಿತ್ತು. ಗಾಳಿಯ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಮರಗಳು ಉರುಳಿಬಿದ್ದವು.

ಅಶೋಕನ ಗರದ ವಿವೇಕಾನಂದ ರಸ್ತೆ, ಆಸ್ಪತ್ರೆ ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ, ಮಹಿಳಾ ಕಾಲೇಜು ಪಕ್ಕದ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮರದ ಕೊಂಬೆಗಳು ಉರುಳಿಬಿದ್ದವು. ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ತಂತಿಗಳು, ಕೇಬಲ್‌ಗಳೆಲ್ಲವೂ ತುಂಡಾಗಿದ್ದವು. ಮಳೆ-ಗಾಳಿ ಆರಂಭಕ್ಕೆ ಮುನ್ನವೇ ವಿದ್ಯುತ್‌ ಕಡಿತಗೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸುವುದು ತಪ್ಪಿತ್ತು.

ಬಸ್ಸಿನಲ್ಲಿದ್ದ ಪ್ರಯಾಣಿಕರ ಪರದಾಟ:

ಗಾಳಿ-ಮಳೆ ಬೀಳುವ ಸಮಯದಲ್ಲಿ ವಿವೇಕಾನಂದ ರಸ್ತೆಯಲ್ಲಿ ಮರದ ಕೊಂಬೆಗಳು ಉರುಳಿ ವಿದ್ಯುತ್‌ ತಂತಿಗಳು ನೆಲಕಚ್ಚಿದ್ದವು. ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸಿದ ಬಸ್ ಚಾಲಕ ಮುಂಜಾಗ್ರತೆಯಾಗಿ ಬಸ್ ನಿಲ್ಲಿಸಿ ಹಿಂದಕ್ಕೆ ಬಂದನು. ಇದರೊಂದಿಗೆ ವಿದ್ಯುತ್ ಸಹ ಸ್ಥಗಿತಗೊಂಡಿತ್ತು. ಮಂಡ್ಯದಿಂದ ಬನ್ನೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದು, ಬಿರುಗಾಳಿ ಮಳೆಗೆ ಮರ ಬಿದ್ದ ಕಾರಣ ಮುಂದಕ್ಕೆ ಹೋಗಲಾಗಲಿಲ್ಲ. ಹಿಂದೆಯೂ ಒಂದು ಮರ ಬಿದ್ದಿದ್ದರಿಂದ ಹಿಂದೆಯೂ ಚಲಿಸಲಾಗದೆ ಮಧ್ಯದಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಯಿತು. ಮತ್ತೊಂದು ಬಸ್ಸಿಗೂ ಇದೇ ರೀತಿಯ ತೊಂದರೆ ಎದುರಾಗಿತ್ತು.

ವಾಹನಗಳು ಜಖಂ:

ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ವಿವೇಕಾನಂದ ರಸ್ತೆಯಲ್ಲಿ ಮನೆಯ ಮುಂಭಾಗದ ಮರವೊಂದು ಗಾಳಿಗೆ ಮನೆ ಒಳಭಾಗಕ್ಕಾದಂತೆ ಉರುಳಿಬಿದ್ದಿದ್ದು, ವಿದ್ಯುತ್‌ ತಂತಿಗಳೆಲ್ಲವೂ ಮನೆಗೆ ತಗುಲಿಕೊಂಡಿದ್ದರಿಂದ ಮನೆಯಲ್ಲಿದ್ದವರು ಭಯಭೀತರಾಗಿದ್ದರು. ಕೆಲವೆಡೆ ಮರದ ಕೊಂಬೆಗಳು ಮುರಿದುಬಿದ್ದು ದ್ವಿಚಕ್ರವಾಹನಗಳು, ಕಾರಿನ ಗಾಜುಗಳು ಜಖಂಗೊಂಡಿರುವ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ.

ಘಟನೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ದೂರದೂರುಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಗಿತ್ತು. ಉಳಿದಂತೆ ನಗರದ ಬಹುತೇಕ ಕಡೆಗಳಲ್ಲಿ ಮರಗಳು ಬಿದ್ದಿವೆ, ತಂತಿಗಳು ನೇತಾಡುತ್ತಿವೆ. ಜನತೆ ಒಮ್ಮೆಲೆ ಬೆಚ್ಚಿಬಿದ್ದಿದ್ದಾರೆ.

ವಿದ್ಯುತ್‌ ಕಡಿತ; ಮರಗಳ ತೆರವು

ಮಂಗಳವಾರ ಬೆಳಗ್ಗೆಯಿಂದಲೇ ಗಾಳಿ-ಮಳೆಗೆ ಉರುಳಿಬಿದ್ದಿದ್ದ ಮರ-ಮರದ ಕೊಂಬೆಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸವನ್ನು ಸೆಸ್ಕ್‌ ಅಧಿಕಾರಿಗಳು ಆರಂಭಿಸಿದ್ದರು. ನಗರದ ಬಹುತೇಕ ಕಡೆ ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯುತ್‌ ಕಡಿತಗೊಳಿಸಲಾಗಿತ್ತು. ತುಂಡಾಗಿಬಿದ್ದಿದ್ದ ವಿದ್ಯುತ್‌ ತಂತಿಗಳನ್ನು ತೆರವುಗೊಳಿಸಿ ಜನರ ಆತಂಕ ದೂರ ಮಾಡಿದರು.