ಸಣ್ಣಪುಟ್ಟ ಅಡೆತಡೆ ಮಧ್ಯೆ ಸುಗಮ ಮತದಾನ

| Published : May 08 2024, 01:10 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಲೋಕಸಭಾ ಚುನಾವಣೆಯಯಲ್ಲಿ ಮತದಾನದ ವೇಳೆ ಹಲವು ಕಡೆಗಳಲ್ಲಿ ಸಣ್ಣಪುಟ್ಟ ನ್ಯೂನತೆಗಳು ಕಂಡುಬಂದವು. ಕೆಲವು ಕಡೆಗಳಲ್ಲಿ ವಿಳಂಬವಾಗಿ ಮತದಾನ ಆರಂಭವಾದರೆ ಹಲವೆಡೆ ಮಷಿನ್‌ಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿತ್ತು. ಎಲ್ಲವನ್ನೂ ಸರಿಪಡಿಸಿದ ಅಧಿಕಾರಿಗಳು ಜಿಲ್ಲಾದ್ಯಂತ ಸುಗಮವಾಗಿ ಮತದಾನ ಆಗುವಂತೆ ನೋಡಿಕೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭಾ ಚುನಾವಣೆಯಯಲ್ಲಿ ಮತದಾನದ ವೇಳೆ ಹಲವು ಕಡೆಗಳಲ್ಲಿ ಸಣ್ಣಪುಟ್ಟ ನ್ಯೂನತೆಗಳು ಕಂಡುಬಂದವು. ಕೆಲವು ಕಡೆಗಳಲ್ಲಿ ವಿಳಂಬವಾಗಿ ಮತದಾನ ಆರಂಭವಾದರೆ ಹಲವೆಡೆ ಮಷಿನ್‌ಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿತ್ತು. ಎಲ್ಲವನ್ನೂ ಸರಿಪಡಿಸಿದ ಅಧಿಕಾರಿಗಳು ಜಿಲ್ಲಾದ್ಯಂತ ಸುಗಮವಾಗಿ ಮತದಾನ ಆಗುವಂತೆ ನೋಡಿಕೊಂಡರು.

ರಂಭಾಪುರದಲ್ಲಿ ಕೆಲಕಾಲ ಮತದಾನ ಸ್ಥಗಿತ:ಕಂಟ್ರೋಲ್ ಯುನಿಟ್ ಬ್ಯಾಟರಿ ಬಂದ್ ಆಗಿದ್ದ ಹಿನ್ನೆಲೆ ತಾಲೂಕಿನ ರಂಭಾಪುರದಲ್ಲಿ ಕೆಲಕಾಲ ಮತದಾನ ಸ್ಥಗಿತವಾಗಿತ್ತು. ಇಲ್ಲಿನ ಬೂತ್ ಸಂಖ್ಯೆ 223ರಲ್ಲಿ ಮತದಾನ ಸ್ಥಗಿತವಾಗಿದ್ದ ಹಿನ್ನೆಲೆ ಮತದಾರರೆಲ್ಲರೂ ಮತಗಟ್ಟೆ ಎದುರು ಕುಳಿತುಕೊಂಡಿದ್ದು ಕಂಡು ಬಂದಿತು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರ್ಯಾಯ ಬ್ಯಾಟರಿ ಅಳವಡಿಕೆ ಮಾಡಿದ ನಂತರ ಮತ್ತೆ ಮತದಾನ ಮುಂದುವರೆಯಿತು.

ಆದರ್ಶನಗರದಲ್ಲಿ ಮತದಾನ ವಿಳಂಬ:

ನಗರದ ಆದರ್ಶನಗರದಲ್ಲಿನ ಮತಗಟ್ಟೆ ಸಂಖ್ಯೆ 4ರಲ್ಲಿ ಇವಿಎಂ ಮಶೀನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸುಮಾರು 25 ನಿಮಿಷ ಮತದಾನ ವಿಳಂಬವಾಗಿ ಆರಂಭವಾಯಿತು.

ಜುಮನಾಳದಲ್ಲಿ ಸಮಸ್ಯೆ:

ತಾಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 296ರಲ್ಲಿ ಇವಿಎಂ ಮಷಿನ್ ಬಂದ್ ಆಗಿದ್ದ ಹಿನ್ನೆಲೆ ಮತದಾನ ಸ್ಥಗಿತವಾಗಿತ್ತು. ಈ ಹಿನ್ನೆಲೆ ಕೆಲಕಾಲ ಮತದಾರರು ಕಾಯುವಂತಾಗಿತ್ತು. ಬಳಿಕ ತಪಾಸಣೆ ನಡೆಸಿದ ಮೇಲಧಿಕಾರಿಗಳು ಮತದಾನ ಆರಂಭಿಸಿದರು.

ಕೂಡಗಿಯಲ್ಲಿ ಮತಯಂತ್ರ ಸ್ಥಗಿತ:

ನಿಡಗುಂದಿ ತಾಲೂಕಿನ ಕೂಡಗಿ ಗ್ರಾಮದ ಮತಗಟ್ಟೆ ಸಂಖ್ಯೆ 104ರಲ್ಲಿ ಸುಮಾರು ಅರ್ಧ ಗಂಟೆ ಮತಯಂತ್ರ ಸ್ಥಗಿತವಾಗಿತ್ತು. ಬಳಿಕ ಅಧಿಕಾರಿಗಳು ಹರಸಾಹಸ ಪಟ್ಟು ಮತಯಂತ್ರ ಸರಿ ಮಾಡಿದರು. ಈ ವೇಳೆ ಮತದಾನಕ್ಕೆ ಬಂದಿದ್ದ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ವೈರಲ್:

ಮತದಾನ ಮಾಡಿದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡು ಕೆಲವರು ಅದನ್ನು ವೈರಲ್ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಕೆಲ ರಾಜಕೀಯ ಮುಖಂಡರ ಬೆಂಬಲಿಗರು ಗುಪ್ತವಾಗಿರಬೇಕಿದ್ದ ಮತದಾನವನ್ನೇ ಬಹಿರಂಗಗೊಳಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ವೇಳೆ ದೃಶ್ಯ ಚಿತ್ರಿಕರಿಸಿಕೊಂಡ ಕೆಲ ಮತದಾರರು ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ್ದಾರೆ.

ಕಣ್ಣೀರಿಟ್ಟ ವೃದ್ಧ:

ಮಕ್ಕಳು, ಸಂಬಂಧಿಕರು ಯಾರು ಸಹ ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಮತದಾನ ಮಾಡಲು ಬಂದಿದ್ದ ವೇಳೆ ವೃದ್ದನೋರ್ವ ಕಣ್ಣೀರಿಟ್ಟಿರುವ ಘಟನೆ ಗೋಳಗುಮ್ಮಟ ಪ್ರದೇಶದ ಬೂತ್ ನಂಬರ್ 168 ರಲ್ಲಿ ನಡೆದಿದೆ. ಇದೇ ಪ್ರದೇಶದ ನಿವಾಸಿ 83 ವರ್ಷದ ವೃದ್ಧ ಯಲ್ಲಪ್ಪ ಎಂಬಾತ ನಾನು ಬದುಕಿದ್ದೇನೆ ಎಂದು ತೋರಿಸೋಕೆ ಮತ ಹಾಕಲು ಬಂದಿದ್ದೇನೆ ಎಂದು ಕಣ್ಣೀರು ಇಟ್ಟಿದ್ದಾನೆ.