ಕಾಡಂಚಲ್ಲಿ ಜೈವಿಕ ಕೃಷಿಗೆ ಸೂಕ್ತ ವಾತಾವರಣವಿದೆ: ಡಾ.ಪಿ ಸುಶೀಲ್

| Published : May 08 2024, 01:10 AM IST

ಕಾಡಂಚಲ್ಲಿ ಜೈವಿಕ ಕೃಷಿಗೆ ಸೂಕ್ತ ವಾತಾವರಣವಿದೆ: ಡಾ.ಪಿ ಸುಶೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಂಚಿನ ಗ್ರಾಮಗಳಲ್ಲಿ ಬಹುವಾರ್ಷಿಕ ಬೆಳೆಗಳು ಮತ್ತು ಅರಣ್ಯ ಆಧಾರಿತ ಕೃಷಿಗೆ ಹೆಚ್ಚಿನ ಆದ್ಯತೆ ಇದ್ದು, ಇಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾಡಲು ಬಹಳ ಸೂಕ್ತ ವಾತಾವರಣವಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ನಿರ್ದೇಶಕ ಡಾ. ಪಿ. ಸುಶೀಲ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಡಂಚಿನ ಗ್ರಾಮಗಳಲ್ಲಿ ಬಹುವಾರ್ಷಿಕ ಬೆಳೆಗಳು ಮತ್ತು ಅರಣ್ಯ ಆಧಾರಿತ ಕೃಷಿಗೆ ಹೆಚ್ಚಿನ ಆದ್ಯತೆ ಇದ್ದು, ಇಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾಡಲು ಬಹಳ ಸೂಕ್ತ ವಾತಾವರಣವಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ನಿರ್ದೇಶಕ ಡಾ. ಪಿ. ಸುಶೀಲ್‌ ತಿಳಿಸಿದರು.

ಚಾಮರಾಜನಗರ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ , ಬೆಂಗಳೂರು ಐಸಿಎಆರ್ ಕೃಷಿ ಕೀಟ ಸಂಪನ್ಮೂಲ ಬ್ಯೂರೋ, ಮತ್ತು ಸ್ಪೆಡ್ಸ್ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಬುಡಕಟ್ಟು ರೈತರಿಗೆ ಬೆಳೆಗಳಲ್ಲಿ ಜೈವಿಕ ವಿಧಾನಗಳಿಂದ ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆಯ ತರಬೇತಿ ಮತ್ತು ಪ್ರಾತ್ಯಕ್ಷಿಕೆಯನ್ನು ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

137 ವಿವಿಧ ಪ್ರಭೇಧಗಳ ಜೈವಿಕ ಪೀಡೆನಾಶಕ ಭಂಡಾರವಿದೆ:

ತಮ್ಮ ಸಂಸ್ಥೆಯಿಂದ ೪೭ ಜೈವಿಕ ಕೀಟ ಹಾಗೂ ರೋಗನಾಶಕಗಳನ್ನು ಅಭಿವೃದ್ಧಿಪಡಿಸಿದ್ದು, ಸುಮಾರು ೧೩೭ ವಿವಿಧ ಪ್ರಬೇಧಗಳ ಜೈವಿಕ ಪೀಡೆನಾಶಕಗಳ ಭಂಡಾರವಿದ್ದು, ಇವುಗಳಲ್ಲಿ ಬಹು ಮುಖ್ಯವಾಗಿ ಸೂಕ್ಷ್ಮಜೀವಿಗಳು, ಪರಾವಲಂಬಿ ಕೀಟಗಳು ಮತ್ತು ಪರಭಕ್ಷಕ ಕೀಟಗಳು ಪ್ರಚಲಿತವಾಗಿವೆ. ಜೈವಿಕ ಕೀಟ ಮತ್ತು ರೋಗನಾಶಗಳ ಚಟುವಟಿಕೆಗಳು ಉತ್ತಮಗೊಂಡು ಯಶಸ್ಸು ಕಂಡುಕೊಳ್ಳಬಹುದೆಂದು ತಿಳಿಸಿದರು.

ಜೈವಿಕ ಕೃಷಿಯಿಂದ ಆರೋಗ್ಯಕ್ಕೆ ಸಹಕಾರಿ:

ಇದಲ್ಲದೇ, ಕಾಡಂಚಿನ ಗ್ರಾಮಗಳಲ್ಲಿನ ರೈತಾಪಿ ವರ್ಗದವರು ಅರಣ್ಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಅವುಗಳನ್ನು ಮಾರುಕಟ್ಟೆಗೆ ಪೂರಕವಾಗುವಂತೆ ವರ್ಗೀಕರಿಸಿ, ಮುದ್ರಿಸಿ ಒದಗಿಸಬೇಕೆಂದು ತಿಳಿಸಿದರು. ಜೈವಿಕ ಆಧಾರಿತ ಸಸ್ಯ ಸಂರಕ್ಷಣೆಯು ಬಹಳ ದೀರ್ಘಕಾಲದ ಪರಿಣಾಮವನ್ನುಂಟು ಮಾಡಿ, ಬೆಳೆ ಪರಿಸರವನ್ನು ಉತ್ತಮಗೊಳಿಸಿ, ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಿ, ಮಾನವನ ಆರೋಗ್ಯವನ್ನು ಸಂರಕ್ಷಿಸಲು ಸಹಕಾರಿಯಾಗಿದೆ.

ಪ್ರಧಾನ ವಿಜ್ಞಾನಿ ಡಾ.ಶೈಲೇಶ್ ಪ್ರಸ್ತುತ ಕೃಷಿಯಲ್ಲಿ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮಗಳು ಅರಣ್ಯ ನಾಶದಿಂದ ಉಂಟಾಗಿದ್ದು, ಕೃಷಿಯಲ್ಲಿ ಸಾವಯವ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ಬಳಸದಿರುವುದೇ ಇದಕ್ಕೆ ಕಾರಣ ಎಂದು ಹೇಳುತ್ತಾ, ಜೈವಿಕ ಆಧಾರಿತ ನಿರ್ವಹಣಾ ಚಟುವಟಿಕೆಗಳು ಸುಸ್ಥಿರತೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹಿತ.ಜಿ. ಸುವರ್ಣ ಪ್ರಸ್ತುತ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳ ಅಗತ್ಯತೆ ಇದ್ದು, ಈ ಕಾರ್ಯಕ್ರಮಗಳಿಂದ ತಮ್ಮ ಜ್ಞಾನಮಟ್ಟ ಹಾಗು ಕೌಶಲ್ಯ ಅಭಿವೃದ್ಧಿಗೊಳಿಸಿಕೊಂಡು ಮಾರುಕಟ್ಟೆ ಪೂರಕವಾದ ಉತ್ಪಾದನೆ ಮಾಡಿ ಯಶಸ್ವಿಯಾಗಬೇಕೆಂದು ಕರೆ ನೀಡಿದರು. ಇದಕ್ಕೆ ಸಾವಯವ ಕೃಷಿ ಪೂರಕವಾಗಿದ್ದು ಇದರ ಅಳವಡಿಕೆ ಅತ್ಯವಶ್ಯವಾಗಿದೆ ಎಂದು ತಿಳಿಸಿದರು.

ಜೈವಿ ಕೃಷಿಗಳಿಗೆ ಹೆಚ್ಚಿನ ಒತ್ತು ನೀಡಿ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್‌ ಮಾತನಾಡಿ, ಪ್ರಸ್ತುತ ಜಿಲ್ಲೆಯ ಬಹುತೇಕ ಬುಡಕಟ್ಟು ಜನಾಂಗ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿದ್ದು, ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು. ಕಾಡಂಚಿನ ಗ್ರಾಮಸ್ಥರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕಗಳನ್ನು ಬಳಸದೇ ಜೈವಿಕ ಪದ್ಧತಿಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.

ಸ್ಪೆಡ್ಸ್ ಸಂಸ್ಥೆಯ ವೆಂಕಟೇಶ್‌ ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದಲು ಅರಣ್ಯ ಆಧಾರಿತ ಕೃಷಿ ಮತ್ತು ಅರಣ್ಯ ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗದವರ ಪಾಲು ಬಹು ಮುಖ್ಯವಾಗಿದ್ದು, ಉದ್ಯಮಶೀಲತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ಪ್ರಧಾನ ವಿಜ್ಞಾನಿ ಡಾ.ಗುಂಡಪ್ಪ ಮಾತನಾಡಿ, ನೀರಾವರಿ ಆಧಾರಿತ ಕೃಷಿಯಲ್ಲಿ ಹೆಚ್ಚಿನ ರಾಸಾಯನಿಕಗಳ ಬಳಕೆಯಿಂದ ಮನುಷ್ಯರಲ್ಲಿ ಮಾರಕ ರೋಗಗಳು ಕಂಡುಬಂದಿದ್ದು ಜೈವಿಕ ಆಧಾರಿತ ಕೃಷಿಯಿಂದ ದೊರೆಯಬಹುದಾದ ಲಾಭಾಂಶಗಳನ್ನು ಬಳಸಿಕೊಂಡು ಪರಿಸರ ಪೂರಕ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಕೃಷಿ ಚಟುವಟಿಕೆಗಳು ಪರಿಸರ ಪೂರಕವಾಗಿರಲಿ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಯೋಗೇಶ್,ಜಿ.ಎಸ್. ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನ ಗ್ರಾಮಗಳಲ್ಲಿ ಕಂಡುಬರುವ ಬುಡಕಟ್ಟು ಜನಾಂಗದವರು ಸಸ್ಯಸಂಕುಲ ಮತ್ತು ವನ್ಯಜೀವಿಗಳ ನಡುವೆ ಇರುವ ಸಮತೋಲನ ಸರಪಳಿಯ ಒಂದು ಕೊಂಡಿ ಇದ್ದಂತೆ, ಹಾಗಾಗಿ ಕೈಗೊಳ್ಳುವ ಯಾವುದೇ ಕೃಷಿ ಚಟುವಟಿಕೆಗಳು ಪರಿಸರ ಪೂರಕವಾಗಿ ಇರಬೇಕು.

ಜೇನು ಸಾಕಾಣಿಕೆ, ಕಿರು ಹಣ್ಣುಗಳ ಬೇಸಾಯ ಹಾಗೂ ಇತರೆ ಕಿರು ಅರಣ್ಯ ಉತ್ಪನ್ನಗಳನ್ನು ನೀಡುವ ಸಸ್ಯಗಳ ಬೇಸಾಯಕ್ಕೆ ಹೆಚ್ಚು ಒತ್ತು ನೀಡಿ ಆರೋಗ್ಯದಾಯಕ ಉತ್ಪನ್ನಗಳನ್ನು ಪಡೆದುಕೊಂಡು, ತಾವೂ ಅವುಗಳನ್ನು ಬಳಸಿ ಹೆಚ್ಚಿನದನ್ನು ಮಾರುಕಟ್ಟೆಗೆ ಪೂರೈಸಿ ಆದಾಯ ಗಳಿಸಿಕೊಳ್ಳಬೇಕೆಂದು ತಿಳಿಸಿದರು. ತಮ್ಮಲ್ಲಿ ಕಂಡು ಬರುವ ವಿಶೇಷವಾದ ಯಾವುದೇ ಬೆಳೆಯ ನಾಟಿ ತಳಿಗಳ ಬೀಜಗಳನ್ನು ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಇಲಾಖೆಯ ಮೂಲಕ ನೋಂದಾಯಿಸಿಕೊಂಡು ಅದನ್ನು ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.

ಈ ನಿಟ್ಟಿನಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಪ್ರಾಯೋಜಿತ ಯೋಜನೆಯ ಮೂಲಕ ಒದಗಿಸುವ ಉತ್ತಮ ಹಣ್ಣಿನ ಸಸಿಗಳು, ಜೈವಿಕ ಕೀಟ ಹಾಗು ರೋಗ ನಾಶಕಗಳು ಮತ್ತು ಧಾನ್ಯಗಳ ಬೀಜಗಳನ್ನು ಸದ್ಬಳಕೆ ಮಾಡಿಕೊಂಡು, ಅದರಿಂದ ಉಂಟಾಗುವ ಪೂರಕ ಬದಲಾವಣೆಗಳ ಮಾಹಿತಿಯನ್ನು ಒದಗಿಸಬೇಕೆಂದು ತಿಳಿಸಿದರು.

ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ. ಬಿ.ಪಂಪನಗೌಡ, ಜೈವಿಕ ಕೀಟ ಹಾಗೂ ರೋಗನಾಶಕಗಳ ಪ್ರಾಮುಖ್ಯತೆ ಮತ್ತು ಕೃಷಿಯಲ್ಲಿ ಅವುಗಳ ಬಳಕೆಯ ಬಗ್ಗೆ ವಿವರಣೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಸ್ತುತಪಡಿಸಿದರು. ಯೋಜನೆಯಡಿ ಬುರುದರಹುಂಡಿ, ಕಣಿಯನಪುರ ಮತ್ತು ಚೆಲುವರಾಯನಪುರದ ಆಯ್ದ ಬುಡಕಟ್ಟು ರೈತರಿಗೆ ಸಂದಿಗ್ಧ ಪರಿಕರಗಳಾದ ಹಣ್ಣಿನ ಸಸಿಗಳು, ಬೇವು ಆಧಾರಿತ ಕೀಟನಾಶಕಗಳು ಮತ್ತು ಸೂಕ್ಷ್ಮಜೀವಿ ಆಧಾರಿತ ಸಸ್ಯ ಕೀಟ ಹಾಗು ರೋಗನಾಶಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಜೀವಾಣು ಮತ್ತು ಸಸ್ಯಾಧಾರಿತ ಸಸ್ಯ ಕೀಟ ಹಾಗು ರೋಗನಾಶಕಗಳ ಒಂದು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ.ಪ್ರೇಮ್‌ಕಿಶೋರ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ತಿಳಿಸಿದರು.