ನಾಪೋಕ್ಲು ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಗೆ ಹಾನಿ

| Published : May 10 2024, 01:31 AM IST

ಸಾರಾಂಶ

ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಪಟ್ಟಣದಲ್ಲಿ ಹಲವರ ಮನೆಗಳಿಗೆ ನೀರು ನುಗ್ಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಮತ್ತು ಗುರುವಾರ ಮಧ್ಯಾಹ್ನ ನಂತರ ಸುರಿದ ಭಾರಿ ಗಾಳಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಪಟ್ಟಣದಲ್ಲಿ ಹಲವರ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಹಲವರು ಪರಿತಪಿಸಿದ ಘಟನೆ ನಡೆದಿದೆ.

ಗಾಳಿ ಮಳೆಗೆ ಮರದ ರೆಂಬೆಗಳು ಮುರಿದುಬಿದ್ದಿವೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಇಲ್ಲಿಗೆ ಸಮೀಪದ ಚೆರಿಯ ಪರಂಬು ನಿವಾಸಿ ಪಿ.ಎ. ಹುಸೈನಾರ್ ಎಂಬವರ ಮನೆಯ ಮೇಲ್ಚಾವಣಿಗೆ ಅಳವಡಿಸಲಾದ ಹತ್ತಕ್ಕೂ ಹೆಚ್ಚಿನ ಸಿಮೆಂಟ್ ಸೀಟುಗಳು ಬುಧವಾರದ ಗಾಳಿ ಮಳೆಗೆ ಹಾರಿ ಹೋಗಿ ನಷ್ಟ ಸಂಭವಿಸಿದ್ದು ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಇಲ್ಲಿಯ ಪೊಲೀಸ್ ಠಾಣೆಯ ಸಮೀಪ ಮೈದಾನದಲ್ಲಿ ನಿಲ್ಲಿಸಲಾದ ಆಟೋ ರಿಕ್ಷಾ ಒಂದರ ಮೇಲೆ ಮರದ ಕೊಂಬೆ ಮುರಿದು ನಷ್ಟ ಸಂಭವಿಸಿದೆ.

ಭಾಗಮಂಡಲ ಫೀಡರ್ ನಲ್ಲಿ ಒಂದು ಕಂಬಕ್ಕೆ ಹಾನಿಯಾಗಿದ್ದರೆ ಹೊದ್ದೂರು ಘಟಕದ ಮೂರು ಹೆಚ್ ಟಿ ಕಂಬಗಳಿಗೆ ಹಾನಿಯಾಗಿದೆ. ಬಲಮುರಿಯಲ್ಲಿ ಒಂದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಗ್ರಾಮೀಣ ಪ್ರದೇಶಗಳ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ವಿದ್ಯುತ್ ಇಲಾಖೆ ಸಿಬ್ಬಂದಿ ಸತತ ಪ್ರಯತ್ನದಿಂದ ವಿದ್ಯುತ್ ಸಂಪರ್ಕವನ್ನು ಸರಿ ಮಾಡಿದರು.

ಗುರುವಾರದ ಮಳೆಗೆ ನಾಡು ಕಚೇರಿ, ಪೊಲೀಸ್ ವಸತಿ ಗೃಹದ ಸಮೀಪವಿರುವ ಬಿಟೆಮರ ಕೊಂಬೆ ಒಂದು ಮುರಿದು ಬಿದ್ದು ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟು ಮಾಡಿತು.

ಕಳೆದ ಮೂರು ವಾರಗಳಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಸಣ್ಣ ಸಣ್ಣ ಮಳೆಗಳಾಗಿದ್ದು ಸುಡುಬಿಸಿಲು ಸೆಕೆಯನ್ನು ಇನ್ನಷ್ಟು ಅಧಿಕಗೊಳಿಸಿದ್ದು ಇದೀಗ ಬುಧವಾರ , ಗುರುವಾರದ ಮಳೆ ಇಲೆಗೆ ತಂಪೆರೆದು ಜನರು ಸೆಕೆಯಿಂದ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಬೆಳೆಗಾರರು ಕೂಡ ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿದ್ದು ಇದೀಗ ರೈತರ ಮುಖದಲ್ಲಿ ಮಂದಹಾಸ ಬೀರಿದೆ.