ಭಾರೀ ಬಿರುಗಾಳಿ ಸಹಿತ ಮಳೆ; ಪಾಲಿ ಹೌಸ್ ಧ್ವಂಸ ಲಕ್ಷಾಂತರ ರು. ನಷ್ಟ

| Published : May 10 2024, 01:30 AM IST

ಭಾರೀ ಬಿರುಗಾಳಿ ಸಹಿತ ಮಳೆ; ಪಾಲಿ ಹೌಸ್ ಧ್ವಂಸ ಲಕ್ಷಾಂತರ ರು. ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಹೌಸ್ ನಲ್ಲಿ ಬೆಳೆಯಲಾಗಿದ್ದ ಫಸಲು ಭರಿತ ದೊಡ್ಡ ಮೆಣಸಿನಕಾಯಿ ಬೆಳೆ ನಷ್ಟ ಉಂಟಾಗಿದೆ. ಇದರಿಂದ ಸುಮಾರು 8 ಲಕ್ಷಕ್ಕೂ ಮೀರಿ ಹಾನಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ನಾಗೇಗೌಡರ ಪಾಲಿ ಹೌಸ್ ಸುತ್ತಮುತ್ತ ಬೆಳೆದು ನಿಂತಿದ್ದ ತೆಂಗಿನ ಮರಗಳ ಫಸಲು ಮಳೆ, ಗಾಳಿ ಹೊಡೆತಕ್ಕೆ ಸಿಲುಕಿ ನೆಲ ಕಚ್ಚಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಆತಗೂರು ಹೋಬಳಿ ತೊರೆಶೆಟ್ಟಿಹಳ್ಳಿಯಲ್ಲಿ ಬುಧವಾರ ರಾತ್ರಿ ಬಿದ್ದ ಭಾರೀ ಬಿರುಗಾಳಿ ಮಳೆಯಿಂದಾಗಿ ಪಾಲಿ ಹೌಸ್ ಧ್ವಂಸಗೊಂಡಿರುವ ಘಟನೆ ನಡೆದಿದೆ.

ಪಾಲಿ ಹೌಸ್ ನಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ರು. ಮೌಲ್ಯದ ಫಸಲು ಭರಿತ ದಪ್ಪಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದೆ. ಗ್ರಾಮದ ಸಿ. ನಾಗೇಗೌಡ ತಮ್ಮ ತೋಟದ ಮನೆಯ ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಪಾಲಿಹೌಸ್ ಮೇಲೆ ಬಿರುಗಾಳಿ ರಭಸಕ್ಕೆ ಮರ ಬಿದ್ದು ಪಾಲಿಥಿನ್ ಶೀಟ್, ಪಿಲ್ಲರ್ ರಾಡು ಸೇರಿ ಅನೇಕ ವಸ್ತುಗಳು ನಾಶವಾಗಿವೆ.

ಪಾಲಿಹೌಸ್ ನಲ್ಲಿ ಬೆಳೆಯಲಾಗಿದ್ದ ಫಸಲು ಭರಿತ ದೊಡ್ಡ ಮೆಣಸಿನಕಾಯಿ ಬೆಳೆ ನಷ್ಟ ಉಂಟಾಗಿದೆ. ಇದರಿಂದ ಸುಮಾರು 8 ಲಕ್ಷಕ್ಕೂ ಮೀರಿ ಹಾನಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ನಾಗೇಗೌಡರ ಪಾಲಿ ಹೌಸ್ ಸುತ್ತಮುತ್ತ ಬೆಳೆದು ನಿಂತಿದ್ದ ತೆಂಗಿನ ಮರಗಳ ಫಸಲು ಮಳೆ, ಗಾಳಿ ಹೊಡೆತಕ್ಕೆ ಸಿಲುಕಿ ನೆಲ ಕಚ್ಚಿದೆ.

ತಾಲೂಕಿನ ಕಬ್ಬಾರೆ ಗ್ರಾಮದಲ್ಲೂ ಸಹ ಬುಧವಾರ ರಾತ್ರಿ ಬಿರುಗಾಳಿ ಮಳೆಯಿಂದಾಗಿ ಫಸಲು ಭರಿತ ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದ್ದು ಸುಮಾರು 3 ಲಕ್ಷ ರು. ಮೀರಿ ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ದೂರು ತಾಲೂಕಿನಲ್ಲಿ ಬಿರುಗಾಳಿ, ಮಳೆಯಿಂದಾಗಿ ರೈತರ ಅನೇಕ ಜಮೀನುಗಳಲ್ಲಿ ಬಾಳೆ ಫಸಲು ಹಾನಿಗೊಂಡ ಬಗ್ಗೆ ವರದಿಯಾಗಿವೆ. ಈ ಸಂಬಂಧ ಬೆಳೆ ಹಾನಿಗೆ ಒಳಗಾದ ರೈತರಿಂದ ಮಾಹಿತಿ ಬಂದ ನಂತರ ಹಾನಿ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಮದ್ದೂರು ತಾಲೂಕಿನಲ್ಲಿ ಬುಧವಾರ ರಾತ್ರಿ ಬಿದ್ದ ಬಿರುಗಾಳಿ ಮಳೆಯಿಂದಾಗಿ ಮದ್ದೂರು - ಕುಣಿಗಲ್ ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಭಾಗದ ರಸ್ತೆ ಬದಿ ಇದ್ದ ಮರಗಳು ಹಾಗೂ ಮರದ ರೆಂಬೆಗಳು ಮುರಿದು ಬಿದ್ದಿದ್ದು, ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗಾಳಿ ಮಳೆಗೆ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು ತುರ್ತಾಗಿ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಪಡಿಸಿದ್ದಾರೆ.