ಗಾಂಧೀಜಿ ತತ್ವ, ಆದರ್ಶಗಳು ಅನುಕರಣೀಯ: ಕಾಗೋಡು ಅಭಿಮತ

| Published : Oct 03 2023, 06:06 PM IST

ಗಾಂಧೀಜಿ ತತ್ವ, ಆದರ್ಶಗಳು ಅನುಕರಣೀಯ: ಕಾಗೋಡು ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮ ಕನ್ನಡಪ್ರಭವಾರ್ತೆ ಸಾಗರ ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶ ಅನುಕರಣೀಯವಾದದ್ದು. ಅವರ ತತ್ವ ಸರಳತೆ, ಸತ್ಯ ಮತ್ತು ಅಹಿಂಸೆಯತ್ತ ನಮ್ಮನ್ನು ಶಾಂತಿಯತ್ತ ಕರೆದೊಯ್ಯುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮವನ್ನು ಚರಕ ತಿರುಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರಕಲು ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹೋರಾಟವೇ ಕಾರಣ ಎಂದರು. ಕಾಂಗ್ರೆಸ್ ನೇತೃತ್ವದಲ್ಲಿ ಗಾಂಧೀಜಿಯವರು ಆಂಗ್ಲರ ವಿರುದ್ದ ಅಹಿಂಸಾ ಮಾರ್ಗದ ಮೂಲಕ ಹೋರಾಟ ನಡೆಸಿ ದೇಶವನ್ನು ದಾಸ್ಯದಿಂದ ಮುಕ್ತ ಮಾಡಿದ್ದಾರೆ. ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಕೃತಜ್ಞತೆಯಾಗುತ್ತದೆ ಎಂದು ಹೇಳಿದರು. ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ಗಾಂಧೀಜಿಯವರಿಗೆ ಹಾಗೂ ಮಲೆನಾಡಿಗೆ ಅವಿನಾವಭಾವ ಸಂಬಂಧವಿದೆ. ಶಿವಮೊಗ್ಗದಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದ ಅವರು ಸಾಗರಕ್ಕೆ ೧೯೨೭ರಲ್ಲಿ ಬಂದಿದ್ದರು. ಗಾಂಧೀಜಿಯವರನ್ನು ಸ್ಮರಿಸಿಕೊಳ್ಳುವುದು ಎಂದರೆ ಅವರ ಆದರ್ಶ ಪಾಲಿಸುವುದೇ ಆಗಿರುತ್ತದೆ ಎಂದು ಹೇಳಿದರು. ಗಾಂಧೀಜಿಯವರ ಕುರಿತು ಉಪನ್ಯಾಸ ನೀಡಿದ ಕೊಡಚಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್, ಗಾಂಧಿ ಎಂದಾಕ್ಷಣ ನಮ್ಮ ಕಣ್ಣಿಗೆ ಕಟ್ಟುವ ಚಿತ್ರಗಳೆಂದರೆ ಸರಳತೆ, ಪ್ರಾಮಾಣಿಕತೆ, ಅಹಿಂಸೆ ಮತ್ತು ಸತ್ಯ. ಗಾಂಧೀಜಿಯವರನ್ನು ತಮ್ಮ ಮೂಗಿನ ನೇರಕ್ಕೆ ನೋಡುವವರು ಇದ್ದಾರೆ. ಅವರ ಆದರ್ಶ ಪಾಲನೆ ಮಾಡುವವರು ಇದ್ದಾರೆ. ಇವೆಲ್ಲದರ ನಡುವೆಯೂ ಮಹಾತ್ಮ ಗಾಂಧೀಜಿ ನಮಗೆ ಅನುಕರಣೀಯ ವ್ಯಕ್ತಿಯಾಗಿ ಸದಾ ನಿಲ್ಲುತ್ತಾರೆ ಎಂದು ಹೇಳಿದರು. ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಎಚ್.ಕೆ.ನಾಗಪ್ಪ ಉಪಸ್ಥಿತರಿದ್ದರು. ಕವಿತಾ ಹೆಗಡೆ, ಗೀತಾ ಕೃಷ್ಣಮೂರ್ತಿ ಮತ್ತು ಸರೋಜಮ್ಮ ಭಜನೆ ಮಾಡಿದರು. ಜಿ.ನಾಗೇಶ್ ಸ್ವಾಗತಿಸಿದರು. ಲೋಕೇಶಕುಮಾರ್ ವಂದಿಸಿದರು. ನಾರಾಯಣಮೂರ್ತಿ ಕಾನುಗೋಡು ನಿರೂಪಿಸಿದರು.