ರಿಲ್ಯಾಕ್ಸ್ ಮೂಡಿಗೆ ಜಾರಿದ ಅಭ್ಯರ್ಥಿಗಳು-ಕಾರ್ಯಕರ್ತರು!

| Published : May 09 2024, 01:03 AM IST

ರಿಲ್ಯಾಕ್ಸ್ ಮೂಡಿಗೆ ಜಾರಿದ ಅಭ್ಯರ್ಥಿಗಳು-ಕಾರ್ಯಕರ್ತರು!
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಮುಗಿದ ಮಾರನೇ ದಿನ ಬಳ್ಳಾರಿ ಜಿಲ್ಲಾ ಸಚಿವರು, ಶಾಸಕರುಗಳು ಹಾಗೂ ಪಕ್ಷದ ಮುಖಂಡರು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು. ಬಿಡುವಿಲ್ಲದೆ ಚುನಾವಣೆಯಲ್ಲಿ ಓಡಾಡಿ ದಣಿದಿದ್ದ ನಾಯಕರು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಳೆದ ಎರಡು ತಿಂಗಳಿನಿಂದ ಬಿಡುವಿಲ್ಲದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಬುಧವಾರ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದರು.

ನಗರದ ಹವಾಂಭಾವಿ ಪ್ರದೇಶದ ತಮ್ಮ ನಿವಾಸದಲ್ಲಿ ಎಂದಿನಂತೆ ಬೆಳಗ್ಗೆಯೇ ಎದ್ದು ಜಾಗಿಂಗ್ ಮುಗಿಸಿದ ಬಿ. ಶ್ರೀರಾಮುಲು, ಬಳಿಕ ಉಪಾಹಾರ ಮುಗಿಸಿ, ತಮ್ಮನ್ನು ಭೇಟಿ ಮಾಡಲು ಬಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಕುಶಲೋಪರಿ ನಡೆಸಿದರು. ಬಳಿಕ ಚುನಾವಣೆ ಮತದಾನ ಪ್ರಕ್ರಿಯೆ ಕುರಿತು ಮುಖಂಡರೊಂದಿಗೆ ಚರ್ಚಿಸಿದರು.

ಏತನ್ಮಧ್ಯೆ ಜಿಲ್ಲೆಯ ನಾನಾ ಕಡೆಗಳಿಂದ ಬರುತ್ತಿದ್ದ ಮೊಬೈಲ್ ಕರೆಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದ ಶ್ರೀರಾಮುಲು, ಚುನಾವಣೆಯಲ್ಲಿ ನೀವು ಗೆಲ್ಲುವುದು ಖಚಿತ ಎಂದು ವಿಶ್ವಾಸ ತುಂಬುತ್ತಿದ್ದ ಅಭಿಮಾನಿಗಳ ಮಾತುಗಳಿಂದ ಸಂತಸಗೊಂಡರು. ಮಧ್ಯಾಹ್ನದ ವರೆಗೆ ಮುಖಂಡರೊಂದಿಗೆ ಮಾತು ಮುಗಿಸಿ, ವಿಶ್ರಾಂತಿಗೆ ಜಾರಿದರು.

ಮದುವೆ ವಾರ್ಷಿಕೋತ್ಸವ ಸಂಭ್ರಮ

ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಅವರು 30ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದರು. ಬೆಳಗ್ಗೆಯೇ ಸ್ನಾನ, ಪೂಜಾದಿಗಳನ್ನು ಮುಗಿಸಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ದಂಪತಿ ಸಮೇತ ತೆರಳಿ ಪೂಜೆ ಸಲ್ಲಿಸಿದರು.

ಬಳಿಕ ಮನೆಯಲ್ಲಿ ಜರುಗಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗೆಳೆಯರು, ಸಂಬಂಧಿಕರು ಹಾಗೂ ಅಭಿಮಾನಿಗಳೊಂದಿಗೆ ಪಾಲ್ಗೊಂಡರು. ಬಳಿಕ ಬಳ್ಳಾರಿಗೆ ಆಗಮಿಸಿದ ತುಕಾರಾಂ, ಪಕ್ಷದ ಪ್ರಮುಖ ಮುಖಂಡರು, ಹಿರಿಯರು ಹಾಗೂ ಸ್ನೇಹಿತರನ್ನು ಭೇಟಿ ಮಾಡಿ, ಮಧ್ಯಾಹ್ನದ ಬಳಿಕ ಸಂಡೂರಿಗೆ ತೆರಳಿದರು.

ಕನ್ನಡಪ್ರಭ ಜೊತೆ ಮಾತನಾಡಿದ ತುಕಾರಾಂ ಅವರು, ಜನರೊಂದಿಗೆ ಸದಾ ಇರುವ ನನಗೆ ಚುನಾವಣೆ ಓಡಾಟ ಹೊಸದಲ್ಲ. ಮದುವೆ ವಾರ್ಷಿಕೋತ್ಸವ ಇದ್ದಾಗ್ಯೂ ಎಂದಿನಂತೆ ಕಚೇರಿಗೆ ಆಗಮಿಸಿ, ಸಾರ್ವಜನಿಕರನ್ನು ಭೇಟಿ ಮಾಡಿದೆ. ಅವರ ಅಹವಾಲುಗಳನ್ನು ಆಲಿಸಿದೆ ಎಂದರು.

ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿ ಎ. ದೇವದಾಸ್ ಅವರು ನಗರದ ಕೃಷ್ಣಮಾಚಾರಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಎಸ್‌ಯುಸಿಐ ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದರು. ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡು ಪಕ್ಷದ ಹೋರಾಟ ಹಾಗೂ ಕಾಂಗ್ರೆಸ್ ಹಾಗೂ ಬಿಜೆಪಿ ಜನವಿರೋಧಿ ನೀತಿಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ. ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷಕ್ಕೆ ಚುನಾವಣೆ ಸಹ ಒಂದು ಹೋರಾಟವಿದ್ದಂತೆ. ಜನರನ್ನು ನೇರವಾಗಿ ತಲುಪಲು ಹಾಗೂ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ತಿಳಿಸಿಕೊಡಲು ಚುನಾವಣೆ ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದರು.

ಬಳ್ಳಾರಿ ಜಿಲ್ಲಾ ಸಚಿವರು, ಶಾಸಕರುಗಳು ಹಾಗೂ ಪಕ್ಷದ ಮುಖಂಡರು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು. ಬಿಡುವಿಲ್ಲದೆ ಚುನಾವಣೆಯಲ್ಲಿ ಓಡಾಡಿ ದಣಿದಿದ್ದ ನಾಯಕರು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆದುಕೊಂಡರು.