ಪೆನ್‌ಡ್ರೈವ್ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

| Published : May 08 2024, 01:04 AM IST

ಪೆನ್‌ಡ್ರೈವ್ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಹಾಸನ ಪೆನ್‌ಡೈವ್ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ: ಹಾಸನ ಪೆನ್‌ಡೈವ್ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಸ್ಮಾರಕ ಭವನದ ಮುಂದೆ ಜಮಾಯಿಸಿದ ಬಿಜೆಪಿ- ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಪೆನ್‌ಡ್ರೈವ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರಭಾವಿ ಸಚಿವರ ಹಸ್ತಕ್ಷೇಪ ಕುರಿತು ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ, ಡಿಸಿಎಂ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಘೋಷಣೆ ಕೂಗಿ ಖಾಲಿ ಸಿಡಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಗಾಂಧಿಭವನದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ತಲುಪಿ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಹಾಸನ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ. ಆದರೆ, ಎಸ್‌ಐಟಿ ರಾಜ್ಯ ಸರ್ಕಾರದ ಹಿಡಿತದಲ್ಲಿ ಇರುವುದರಿಂದ ಸೂಕ್ತ ತನಿಖೆ ನಡೆಯುವ ವಿಶ್ವಾಸವಿಲ್ಲ. ಆದ ಕಾರಣ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು.

ಪೆನ್‌ಡ್ರೈವ್‌ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡ ಇರುವುದು ಬೆಳಕಿಗೆ ಬಂದಿದೆ. ರಾಜಕೀಯ ದುರುದ್ದೇಶಕ್ಕೆ ಈ ಪ್ರಕರಣ ಬೆಳಕಿಗೆ ಬರುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಮಹಿಳೆಯರ ಮಾನ ಕಳೆದಿದ್ದಾರೆ. ಈ ಪ್ರಕರಣಕ್ಕೆ ಕಾರಣಕರ್ತರಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಹಿಡಿತದಲ್ಲಿ ಎಸ್‌ಐಟಿ:

ಬಿಜೆಪಿ ತಾಲೂಕು ಅಧ್ಯಕ್ಷ ತೂಬಿನಕರೆ ರಾಜು ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಲಿ. ಆದರೆ, ಎಸ್‌ಐಟಿ ರಾಜ್ಯ ಸರ್ಕಾರದ ಹಿಡಿತದಲ್ಲಿದೆ. ಅಲ್ಲಿರುವವರು ರಾಜ್ಯದ ಅಧಿಕಾರಿಗಳೇ ಅಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರಭಾವದಿಂದ ಪ್ರಕರಣದ ತನಿಖೆ ದಾರಿ ತಪ್ಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜಕೀಯ ತೆವಲಿಗಾಗಿ ಡಿ.ಕೆ.ಶಿವಕುಮಾರ್ ಇಂತಹ ಕೆಲಸ ಮಾಡಿದ್ದಾರೆ. ಪ್ರಕರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ. ಮಹಿಳೆಯರು ಮುಖವನ್ನು ಬ್ಲರ್ ಮಾಡದೇ ವಿಡಿಯೋ ಬಿಡುಗಡೆಯಾಗುವಂತೆ ಮಾಡಿದ್ದಾರೆ. ಈ ಪ್ರಕರಣದ ಹಿಂದಿರುವ ಎಲ್.ಆರ್.ಶಿವರಾಮೇಗೌಡರನ್ನು ಈ ಕೂಡಲೇ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕುಕ್ಕೂರುದೊಡ್ಡಿ ಜಯರಾಮು, ಬಿಜೆಪಿ ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರಸಭೆ ಸದಸ್ಯ ಕೋಟೆ ಚಂದ್ರು, ಮುಖಂಡರಾದ ವಿ.ಬಿ.ಚಂದ್ರು, ಮೆಹರೀಶ್, ಬೋರೇಗೌಡ ಇತರರಿದ್ದರು.ಪೊಟೋ೭ಸಿಪಿಟಿ೧: ಚನ್ನಪಟ್ಟಣ ತಾಲೂಕು ಕಚೇರಿ ಮುಂದೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.