ಯಾದಗಿರಿ ಜಿಲ್ಲೆ : ಶೇ. 64.60 ರಷ್ಟು ಮತದಾನ

| Published : May 08 2024, 01:04 AM IST

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ ಶೇ. 64.60 ರಷ್ಟು ಮತದಾನವಾಗಿದ್ದು, ಯಾದಗಿರಿ ಮತಕ್ಷೇತ್ರದಲ್ಲಿ ಶೇ.61.21, ಸುರಪುರದಲ್ಲಿ ಶೇ.73.76, ಶಹಾಪುರದಲ್ಲಿ ಶೇ.61.11 ಹಾಗೂ ಗುರುಮಠಕಲ್‌ ಕ್ಷೇತ್ರದಲ್ಲಿ ಶೇ.61.13 ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಾವರ್ತ್ರಿಕ ಲೋಕಸಭೆ ಚುನಾವಣೆ ಹಾಗೂ ಸುರಪುರ ವಿಧಾನಸಭೆ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ. 64.60 ರಷ್ಟು ಮತದಾನವಾಗಿತ್ತು. ಕಳೆದ ಬಾರಿಗಿಂತ (2019ರಲ್ಲಿ ಶೇ. 58.06 ರಷ್ಟು) ಈ ಬಾರಿ (2024ರಲ್ಲಿ) ಶೇ.6.54 ರಷ್ಟು ಮತದಾನ ಹೆಚ್ಚಿದೆ.

ನಿಗದಿಯಂತೆ, ಜಿಲ್ಲೆಯ 1134 ಮತಗಟ್ಟೆಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಯಾದಗಿರಿ ಮತಕ್ಷೇತ್ರದ ಖಾನಾಪುರ ಗ್ರಾಮದ ಮತಗಟ್ಟೆ ಸಂಖ್ಯೆ 158ರಲ್ಲಿ ಹಾಗೂ ಶಹಾಪುರ ಮತಕ್ಷೇತ್ರದ ದರ್ಶನಾಪುರ ಗ್ರಾಮದ ಮತಗಟ್ಟೆ ಸಂಖ್ಯೆ 79 ರಲ್ಲಿ ಆರಂಭದಲ್ಲೇ ಮತಯಂತ್ರದಲ್ಲಿ ದೋಷ ಕಂಡಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತಾದರೂ, ನಂತರದಲ್ಲಿ ಬೇರೆ ಮತಯಂತ್ರಗಳ ಅಳವಡಿಸಿ ಮತದಾನ ಆರಂಭಿಸಲಾಯಿತು.

ಸುರಪುರ ಮತಕ್ಷೇತ್ರದ ಕಕ್ಕೇರಾ ಹೋಬಳಿ ಮಲ್ಲಿಕಾರ್ಜುನ ದೊಡ್ಡಿಯಲ್ಲಿ ಓರ್ವರು ಮೃತಪಟ್ಟಿದ್ದರಿಂದ ಬೆಳಗ್ಗೆ ಸುಮಾರು ಒಂದು ಗಂಟೆ ಕಾಲ ಮತದಾನ ಸ್ಥಗಿತಗೊಂಡಿತ್ತು. ತಹಸೀಲ್ದಾರ್ ನಾಗಮ್ಮ ಅವರು ಜನರ ಮನವೊಲೈಸಿದ ಬಳಿಕ ಮತದಾನಕ್ಕೆ ಗ್ರಾಮಸ್ಥರು ಮುಂದಾದರು.

ಬೆಳಗ್ಗೆಯಿಂದಲೇ ಮತದಾನ ಚುರುಕು:

ಬಿಸಿಲ ಬೇಗೆ ತಾಗದಿರಲಿ ಅನ್ನುವ ಕಾರಣಕ್ಕೆ ಬೆಳಗ್ಗೆ 7 ಗಂಟೆಯಿಂದಲೇ ಜನರು ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿದ್ದುದು ಕಂಡು ಬಂತು. ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಅಂದರೆ ಬೆಳಗ್ಗೆ 9 ಗಂಟೆವರೆಗಿನ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ. 8.31ರಷ್ಟು ಮತದಾನವಾಗಿತ್ತು. 10,33,586 ಮತದಾರರಲ್ಲಿ 85,909 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಈ ಅವಧಿಯಲ್ಲಿ ಜಿಲ್ಲೆಯ ಸುರಪುರದಲ್ಲಿ (ಶೋರಾಪುರ) ಶೇ.9.75, ಶಹಾಪುರದಲ್ಲಿ ಶೇ8.84, ಯಾದಗಿರಿಯಲ್ಲಿ ಶೇ.7.30 ಹಾಗೂ ಗುರುಮಠಕಲ್‌ ಕ್ಷೇತ್ರದಲ್ಲಿ ಶೇ.7.18 ರಷ್ಟು ಮತದಾನವಾಗಿತ್ತು.

ಬೆಳಗ್ಗೆ 11 ಗಂಟೆವರೆಗೆ ಮತದಾನದ ಪ್ರಮಾಣದಲ್ಲಿ ಹೆಚ್ಚಳ ಕಾಣತೊಡಗಿತ್ತು. ಜಿಲ್ಲೆಯಲ್ಲಿ ಶೇ.22.17ರಷ್ಟು ಮತದಾನ ನಡೆದಿತ್ತು. ಒಟ್ಟು 10,33,586 ಮತದಾರರಲ್ಲಿ 2,29,145 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಸುರಪುರದಲ್ಲಿ ಶೇ.24.39, ಶಹಾಪುರದಲ್ಲಿ ಶೇ.22.02, ಯಾದಗಿರಿಯಲ್ಲಿ ಶೇ.20.67 ಹಾಗೂ ಗುರುಮಠಕಲ್‌ 21.32 ಮತದಾನವಾಗಿತ್ತು.

ಮಧ್ಯಾಹ್ನ 1 ಗಂಟೆವರೆಗೆ ಮತದಾನದ ಪ್ರಮಾಣ ಶೇ.38.28 ರಷ್ಟು ಮತದಾನವಾಗಿತ್ತು. ಮಹಿಳೆಯರು, ವಯೋವೃದ್ಧರು, ವಿಕಲಚೇತನರು ಬಿಸಿಲ ಲೆಕ್ಕಿಸದೇ ಮತಗಟ್ಟೆಗೆ ಬಂದಿದ್ದರು. ಜಿಲ್ಲೆಯಲ್ಲಿನ ಒಟ್ಟು 10,33,586 ಮತದಾರರ ಪೈಕಿ 3,95,707 ಮತದಾರರು ಮತ ಚಲಾಯಿಸಿದ್ದರು. ಸುರಪುರದಲ್ಲಿ ಶೇ.40.14, ಶಹಾಪುರದಲ್ಲಿ ಶೇ.38.25, ಯಾದಗಿರಿಯಲ್ಲಿ ಶೇ.36.59 ಹಾಗೂ ಗುರುಮಠಕಲ್‌ನಲ್ಲಿ 37.92 ರಷ್ಟು ಮತದಾನವಾಗಿತ್ತು.

ಮಧ್ಯಾಹ್ನ 3 ಗಂಟೆವರೆಗೆ ಮತದಾನ ಪ್ರಮಾಣದಲ್ಲಿ ಕೊಂಚ ಕಡಮೆ ಅನ್ನಿಸಿತ್ತಾದರೂ, ಜಿಲ್ಲೆಯಲ್ಲಿ ಶೇ.49.51 ರಷ್ಟು ಮತದಾನವಾಗಿತ್ತು. ಒಟ್ಟು 10,33,586 ಮತದಾರರ ಪೈಕಿ 5,11,720 ಮತದಾರರು ಹಕ್ಕು ಚಲಾಯಿಸಿದ್ದರು. ಸುರಪುರದಲ್ಲಿ ಶೇ. 54.13, ಶಹಾಪುರದಲ್ಲಿ ಶೇ.48.71, ಯಾದಗಿರಿಯಲ್ಲಿ ಶೇ.46.98 ಹಾಗೂ ಗುರುಮಠಕಲ್‌ನಲ್ಲಿ ಶೇ.49.51 ರಷ್ಟು ಮತದಾನವಾಗಿತ್ತು.

ಸಂಜೆ 5 ಗಂಟೆವರೆಗೆ ಮತದಾನದಲ್ಲಿ ಹೆಚ್ಚಳ ಕಂಡಿತ್ತು. ಜಿಲ್ಲೆಯಲ್ಲಿ ಶೇ.59.64 ರಷ್ಟು ಮತದಾನವಾಗಿತ್ತು. ಒಟ್ಟು 10,33,586 ಮತದಾರರಲ್ಲಿ 6,16,435 ಮತದಾರರು ಮತ ಚಲಾಯಿಸಿದ್ದರು. ಸುರಪುರದಲ್ಲಿ ಶೇ.66.41, ಶಹಾಪುರದಲ್ಲಿ ಶೇ. 57.68, ಯಾದಗಿರಿಯಲ್ಲಿ ಶೇ.56.31 ಹಾಗೂ ಗುರುಮಠಕಲ್‌ನಲ್ಲಿ ಶೇ.57.27 ರಷ್ಟು ಮತದಾನವಾಗಿತ್ತು.

ಇನ್ನು, ಸಂಜೆ 6ರವರೆಗೆ ನಡೆದ ಮತದಾನ ಕುರಿತ ಜಿಲ್ಲಾಡಳಿತ ನೀಡಿದ ವರದಿಯಂತೆ, ಯಾದಗಿರಿ ಜಿಲ್ಲೆಯಲ್ಲಿ ಶೇ. 64.60 ರಷ್ಟು ಮತದಾನವಾಗಿದ್ದು, ಯಾದಗಿರಿ ಮತಕ್ಷೇತ್ರದಲ್ಲಿ ಶೇ.61.21, ಸುರಪುರದಲ್ಲಿ ಶೇ.73.76, ಶಹಾಪುರದಲ್ಲಿ ಶೇ.61.11 ಹಾಗೂ ಗುರುಮಠಕಲ್‌ ಕ್ಷೇತ್ರದಲ್ಲಿ ಶೇ.61.13 ಮತದಾನವಾಗಿದೆ.