ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಮೊದಲ ಅಧಿವೇಶನ

| Published : Apr 27 2024, 01:18 AM IST

ಸಾರಾಂಶ

ಶಾಸನಶಾಸ್ತ್ರದ ಉಗಮ, ವಿಕಾಸ ಮತ್ತು ಅಧ್ಯಯನದ ಮಹತ್ವದ ಬಗ್ಗೆ ತಿಳಿಸುವ ಉದ್ದೇಶದಿಂದಲೇ ಈ ಅಧಿವೇಶನ ನಡೆಸಲಾಗುತ್ತಿದೆ

ಧಾರವಾಡ:

ಕರ್ನಾಟಕ ಶಾಸನ ಸಾಹಿತ್ಯ ಪರಿಷತ್, ಜನತಾ ಶಿಕ್ಷಣ ಸಮಿತಿ, ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಜಂಟಿಯಾಗಿ ಏ. 29 ಹಾಗೂ 30ರಂದು ಜೆಎಸ್ಸೆಸ್‌ ಹೆಗ್ಗಡೆ ಸಭಾಂಗಣದಲ್ಲಿ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಮೊದಲ ಅಧಿವೇಶನ ಆಯೋಜಿಸಿವೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪರಿಷತ್‌ ಅಧ್ಯಕ್ಷೆ ಹನುಮಾಕ್ಷಿ ಗೋಗಿ, ಜನರಲ್ಲಿ ಭಯ-ಭಕ್ತಿ ನಶಿಸುತ್ತಿರುವ ಕಾರಣ ಶಾಸನಶಾಸ್ತ್ರ ಅಧ್ಯಯನ ಕೂಡ ಅವನತಿಯ ಹಾದಿ ಹಿಡಿದಿದೆ. ಇಂದಿನ ವಿದ್ಯಾರ್ಥಿ ಸಮೂಹವು ಶಾಸನಶಾಸ್ತ್ರ ಉಗಮ, ವಿಕಾಸ ಮತ್ತು ಮಹತ್ವದ ಬಗ್ಗೆ ಅರಿಯುವುದು ಅಗತ್ಯವಿದೆ. ಶಾಸನಶಾಸ್ತ್ರದ ಉಗಮ, ವಿಕಾಸ ಮತ್ತು ಅಧ್ಯಯನದ ಮಹತ್ವದ ಬಗ್ಗೆ ತಿಳಿಸುವ ಉದ್ದೇಶದಿಂದಲೇ ಈ ಅಧಿವೇಶನ ನಡೆಸಲಾಗುತ್ತಿದೆ ಎಂದರು.

ಹಂಪಿ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧಿವೇಶನದ ಸರ್ವಾಧ್ಯಕ್ಷತೆ ವಹಿಸಲಿದ್ದು, ಅಧಿವೇಶನವನ್ನು ವಿದ್ವಾಂಸ ಡಾ. ಬಿ.ವಿ. ಶಿರೂರ ಏ. 29ರ ಬೆಳಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ. ತಜ್ಞ ಪ್ರೊ. ಲಕ್ಷ್ಮಣ ತೆಲಗಾವಿ ಗೌರವಾಧ್ಯಕ್ಷತೆ ವಹಿಸಲಿದ್ದಾರೆ. ಛಾಯಾಚಿತ್ರ ಪ್ರದರ್ಶನ ಜೆಎಸ್ಸೆಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಚಿತ್ರಕಲಾ ಪ್ರದರ್ಶನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕಿ ಡಾ. ರೇಷ್ಮಾ ಸಾವಂತ್ ಉದ್ಘಾಟಿಸುವರು. ಕಾಳಗಿ ಇತಿಹಾಸ-ಸಂಸ್ಕೃತಿ, ಮುದನೂರು-ಯಡ್ರಾಮಿ ಶಾಸನ, ದೃಶ್ಯಕಲಾ ಸಂಚಯ, ವಚನಕಾರ ಹಂಡೆ ಚಂದಿಮರಸನ ಶಾಸನ, ಹಂಡೆ ಅರಸರ ಸಾಂಸ್ಕೃತಿ ಚರಿತ್ರೆ ಕೃತಿಗಳನ್ನು ಪುರಾತತ್ವ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ. ಆರ್. ಶೇಜೇಶ್ವರ, ಇತಿಹಾಸ ಅನುಸಂಧಾನ ಪರಿಷತ್ ಪ್ರಾದೇಶಿಕ ಕಚೇರಿ ಉಪನಿರ್ದೇಶಕ ಡಾ. ಎಸ್.ಕೆ. ಅರುಣಿ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಗಣ್ಯರಿಗೆ ಪ್ರಶಸ್ತಿ ಪ್ರದಾನ:

₹ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡ 2023ನೇ ಸಾಲಿನ ಡಾ. ಎಂ.ಎಂ. ಕಲಬುರ್ಗಿ ಶಾಸನ ಸಾಹಿತ್ಯ ಪ್ರಶಸ್ತಿಯನ್ನು ಏ. 29ರಂದು ಮಧ್ಯಾಹ್ನ 2ಕ್ಕೆ ವಿದ್ವಾಂಸ ಡಾ. ಬಿ.ವಿ. ಶಿರೂರ ಅವರಿಗೆ, ₹ 5 ಸಾವಿರ ನಗದು ಒಳಗೊಂಡ ಡಾ. ಬಿ.ಆರ್. ಹಿರೇಮಠ ಸಂಶೋಧನಾ ಪ್ರಶಸ್ತಿಯನ್ನು ಡಾ. ದೇವರಕೊಂಡಾರೆಡ್ಡಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಮಧ್ಯಾಹ್ನದ ನಂತರ ಡಾ. ಶಾಂತಿನಾಥ ದಿಬ್ಬದ ಅಧ್ಯಕ್ಷತೆಯಲ್ಲಿ ''''''''ಶಾಸನಗಳ ಉಗಮ-ವಿಕಾಸದ ಬಗ್ಗೆ ವಿದ್ವಾಂಸ ಡಾ. ಬಿ. ರಾಜಶೇಖರಪ್ಪ, ಕನ್ನಡ ಶಾಸನ ಬಗ್ಗೆ ವಿದ್ವಾಂಸ ಡಾ. ಎಸ್.ಕೆ. ಕೊಪ್ಪಾ ಉಪನ್ಯಾಸ ನೀಡುವರು. ಏ. 30ರ ಬೆಳಗ್ಗೆ 9.30ಕ್ಕೆ ಡಾ. ಎಂ. ಕೊಟ್ರೇಶ ಅಧ್ಯಕ್ಷತೆಯಲ್ಲಿ ಶಾಸನಗಳ ಪ್ರಕಾರಗಳ ಬಗ್ಗೆ ವಿದ್ವಾಂಸ ಡಾ. ಜೆ.ಎಂ. ನಾಗಯ್ಯ ಹಾಗೂ ಶಾಸನಗಳ ಮಹತ್ವದ ಬಗ್ಗೆ ಪ್ರೊ. ಅಮರೇಶ ಯತಗಲ್ ಉಪನ್ಯಾಸ ನೀಡುವರು. ಏ. 30ರ ಸಂಜೆ 4ಕ್ಕೆ ಜಾನಪದ ವಿವಿ ಕುಲಪತಿ ಡಾ. ಟಿ.ಎಂ. ಬಾಸ್ಕರ್ ಸಮಾರೋಪ ನುಡಿಗಳನ್ನಾಡಲಿದ್ದು, ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸುವರು. ಡಾ. ಡಿ.ವಿ. ಪರಮಶಿವಮೂರ್ತಿ ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.

ಗಣ್ಯರಾದ ಪ್ರೊ. ಎಸ್.ಸಿ. ಪಾಟೀಲ, ಮಂಜುಳಾ ಯಲಿಗಾರ, ಡಾ. ಅನಿಲಕುಮಾರ ಆರ್.ವಿ, ಡಾ. ರು.ಮ. ಷಡಕ್ಷರಯ್ಯ, ಡಾ. ಈರಣ್ಣ ಕೆ. ಪತ್ತಾರ, ಡಾ. ಎಸ್.ವೈ. ಮುಗಳಿ, ಡಾ. ಲೋಕೇಶ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಸಿ.ಎಸ್. ಪಾಟೀಲ, ಡಾ. ಮಹಾದೇವಿ ಹಿರೇಮಠ, ಪ್ರೊ. ಎಸ್.ಬಿ. ಹಿರೇಮಠ, ಡಾ. ಚಿದಾನಂದ ಮಾಸನಕಟ್ಟಿ, ಬಿ.ಎಸ್. ಗೌಡರ ಇದ್ದರು.

ಶಾಸನಶಾಸ್ತ್ರ ಓದುಗರು ಕಡಿಮೆ ಇರುವ ಕಾರಣದಿಂದ ಬಾಗಲಕೋಟೆ, ಬೆಳಗಾವಿ, ಬೀದರ, ಕಲಬುರ್ಗಿ, ವಿಜಯಪುರ, ಉತ್ತರ ಕನ್ನಡ ಸೇರಿ ವಿವಿಧ ಜಿಲ್ಲೆಗಳ ಶಾಸನಗಳ ಬಗ್ಗೆ ಪರಿವೀಕ್ಷಣೆಯೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶಾಸನಶಾಸ್ತ್ರವನ್ನು ಕಡೆಗಣಿಸುವಂತಿಲ್ಲ ಎಂದು ಹನುಮಾಕ್ಷಿ ಗೋಗಿ ಹೇಳಿದರು.