ಬಿಜೆಪಿ ಮೈತ್ರಿಕೂಟಕ್ಕೆ ಮತ ನೀಡಬೇಡಿ: ವೀರಸಂಗಯ್ಯ

| Published : Apr 27 2024, 01:23 AM IST

ಬಿಜೆಪಿ ಮೈತ್ರಿಕೂಟಕ್ಕೆ ಮತ ನೀಡಬೇಡಿ: ವೀರಸಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯನ್ನೊಳಗೊಂಡು ಎನ್‌ಡಿಎ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಿ, ಯಾವುದಾದರೂ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ ಹೇಳಿದ್ದಾರೆ.

ಕೊಪ್ಪಳ: ರೈತ ವಿರೋಧಿಯಾಗಿರುವ ಬಿಜೆಪಿ ಮೈತ್ರಿಕೂಟದ ಎನ್‌ಡಿಎ ಅಭ್ಯರ್ಥಿಗಳಿಗೆ ನಮ್ಮ ಮತ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ ಹೇಳಿದ್ದಾರೆ.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ರೈತ ಹೋರಾಟದ ವೇಳೆ ಅತ್ಯಂತ ಅವಮಾನೀಯವಾಗಿ ನಡೆದುಕೊಂಡ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರೈತ ಸಂಘಟನೆಗಳು ಒಗ್ಗೂಡಿ ಪ್ರಚಾರ ಮಾಡುತ್ತಿವೆ ಎಂದರು.

ಬಿಜೆಪಿಯನ್ನೊಳಗೊಂಡು ಎನ್‌ಡಿಎ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಿ, ಯಾವುದಾದರೂ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮೂರು ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಮಾರಕವಾಗುವಂತೆ ಮಾಡಿತ್ತು. ಇದರ ವಿರುದ್ದ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಸಭೆ ನಡೆಸಿದ್ದ ವೇಳೆ ದೇಶದ 540 ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ದೆಹಲಿಯಲ್ಲಿ ನಿರಂತರವಾಗಿ ಹೋರಾಟ ಮಾಡಿ ನೂರಾರು ರೈತರು ಪ್ರಾಣ ಕಳೆದುಕೊಂಡರೂ ಸರ್ಕಾರ ಸ್ಪಂದಿಸಲಿಲ್ಲ. 10 ಲಾರಿಯಷ್ಟು ಮನವಿ ಪತ್ರ ಸಲ್ಲಿಸಿದರೂ ಸರ್ಕಾರ ಸ್ಪಂದಿಸಲಿಲ್ಲ. ಕೃಷಿ ಕಾಯ್ದೆ ನಾಶ ಮಾಡಿ ಭೂ ಗುತ್ತಿಗೆ ಕಾಯ್ದೆ ಜಾರಿ ಮಾಡಿತು. ಇದು ರೈತರಿಗೆ ಮಾರಕವಾಯಿತು. ಕೇಂದ್ರ ಸರ್ಕಾರದ ನಡೆಯಿಂದ ದೇಶದ ತುಂಬೆಲ್ಲ ರೈತರು ಹೋರಾಟಕ್ಕೆ ಇಳಿದು ದೆಹಲಿಗೆ ತೆರಳಿ ಹೋರಾಟ ಮಾಡಲು ಮುಂದಾದರೆ ರಸ್ತೆಗಳಿಗೆ ಮೊಳೆ ಬಡಿದು ರೈತರನ್ನು ದೆಹಲಿ ತಲುಪದಂತೆ ಮಾಡಿದರು. ಜಲಫಿರಂಗಿ ಪ್ರಯೋಗಿಸಿದರು. ಇದಲ್ಲದೇ, ದೆಹಲಿ ಪಕ್ಕದ ಪಂಜಾಬ್, ಹರಿಯಾಣದ ರೈತರು ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದರೆ ಅವರನ್ನು ಭಯೋತ್ಪಾದಕರ ರೀತಿ ಬಿಂಬಿಸಿದರು.

ದೇಶದಲ್ಲಿ ಕೃಷಿ ಮೂಲವನ್ನೇ ನಂಬಿರುವ ರೈತರಿಗೆ ಮೋದಿ ಸರ್ಕಾರವು ದೊಡ್ಡ ಪೆಟ್ಟು ನೀಡಿತು. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಗೆ ಸಂಯುಕ್ತ ಮೋರ್ಚಾವು ಮತ ಹಾಕದಿರಲು ನಿರ್ಧಾರ ಮಾಡಿದೆ ಎಂದರು.

ರೈತ ಮುಖಂಡ ಡಿ. ಗೋಣಿಬಸಪ್ಪ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಮುಖಂಡರಾದ ಯಂಕಪ್ಪ ಕಾಸನಕಂಡಿ, ಬಸವರಾಜ ಹೂಗಾರ ಉಪಸ್ಥಿತರಿದ್ದರು.