ಸಚಿವ ಸಂಪುಟದಿಂದ ಡಿ.ಕೆ.ಶಿವಕುಮಾರ್‌ ವಜಾಗೆ ಜೆಡಿಎಸ್‌ ಆಗ್ರಹ

| Published : May 09 2024, 12:45 AM IST / Updated: May 09 2024, 12:46 AM IST

ಸಾರಾಂಶ

ಅಶ್ಲೀಲ ವೀಡಿಯೋ ಮೂಲಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿತ್ರದುರ್ಗದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್‌ಗಳಿಗೆ ತುಂಬಿ ರಾಜ್ಯದಾದ್ಯಂತ ವಿತರಿಸುವ ಮೂಲಕ ಮಹಿಳೆಯರ ಮಾನ ಹರಾಜು ಹಾಕುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಸಂಪುಟದಿಂದ ವಜಾಗೆ ಆಗ್ರಹಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ , ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ, ಪೆನ್‍ಡ್ರೈವ್ ವಿತರಣೆ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡವಿದೆ. ಹಗರಣಕ್ಕೆ ಸಂಬಂಧಿಸಿ ದಂತೆ ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆ ನೀಡಲು ಕಾನೂನಿದೆ. ಅದನ್ನು ಬಿಟ್ಟು ಸಂತ್ರಸ್ಥ ಮಹಿಳೆಯರ ಮಾನ ಹರಾಜು ಹಾಕುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಸಚಿವ ಸಂಪುಟದಿಂದ ಕೈಬಿಟ್ಟು ತಕ್ಕ ಶಿಕ್ಷೆ ವಿಧಿಸಬೇಕು. ನಾಲ್ಕು ಗೋಡೆಗಳ ನಡುವೆ ನಡೆದಿರುವ ಕೃತ್ಯವನ್ನು ಇಡಿ ದೇಶವೇ ನೋಡುವಂತೆ ಮಾಡಿರುವುದು ಅತ್ಯಂತ ನೀಚ ಕೃತ್ಯ ಎಂದರು. ಮಾಜಿ ಅಧ್ಯಕ್ಷ ಕಂದಿಕೆರೆ ಡಿ.ಯಶೋಧರ ಮಾತನಾಡಿ, ಕೋರ್ ಕಮಿಟಿ ಈಗಾಗಲೇ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಚಾಟಿಸಿದೆ. ಹೆಣ್ಣು ಮಕ್ಕಳ ಮಾನ ಸಂರಕ್ಷಣೆ ಮಾಡ ಬೇಕಾಗಿರುವ ಕಾಂಗ್ರೆಸ್ ಸರ್ಕಾರವೇ ಬೀದಿ ಪಾಲು ಮಾಡಿದೆ. ಈ ನೆಲದ ಕಾನೂನನ್ನು ಜೆಡಿಎಸ್. ಗೌರವಿಸುತ್ತದೆ. ಕಾಂಗ್ರೆಸ್ ಕೃಪಾ ಪೋಷಿತ ನಾಟಕ ಮಂಡಳಿ ಆಸಕ್ತಿ ವಹಿಸಿ ಪೆನ್ ಡ್ರೈವ್ ಬಿಡುಗಡೆಗೊಳಿಸಿದೆ. ಈ ಕಳಂಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳಿಗೆ ಮೆತ್ತಿಕೊಂಡಿದೆ. ರಾಜಕೀಯ ಲಾಭಕ್ಕಾಗಿ ಮತ್ತೊಬ್ಬರ ಮಾನ ಹರಣವಾಗಬಾರದು. ಮತ ಪಡೆಯುವ ಭ್ರಮೆಯಲ್ಲಿ ಕಾಂಗ್ರೆಸ್ ತೇಲುತ್ತಿರುವುದು ಮೂರ್ಖತನ ಎಂದು ಲೇವಡಿ ಮಾಡಿದರು.ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲದಿರುವುದರಿಂದ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಇನ್ನು ಯಾರ್ಯಾರ ಸಿಡಿ, ಪೆನ್ ಡ್ರೈವ್ ಗಳಿವೆಯೋ ಗೊತ್ತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಡಿ ಬಿಡುಗಡೆಗೊಳಿಸಿ ಹೆಣ್ಣು ಮಕ್ಕಳ ಮಾನ ಬೀದಿಗೆಳೆದಿರುವುದು ನೀಚತನದ ಪರಮಾವಧಿ. ಪ್ರಜ್ವಲ್ ರೇವಣ್ಣನನ್ನು ನಾವುಗಳ್ಯಾರು ಸಮರ್ಥಿಸಿಕೊಳ್ಳುವುದಿಲ್ಲ. ತಪ್ಪು ಮಾಡಿದವರು ನೀರು ಕುಡಿಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್‌ನನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದರಿಂದ ಸಂತ್ರಸ್ಥರಿಗೆ ನ್ಯಾಯ ಸಿಗುವುದು ಅನುಮಾನ. ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ರಾಜ್ಯ ಕಾರ್ಯದರ್ಶಿ ಮಠದಟ್ಟಿ ವೀರಣ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ತಾಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ, ಗುರುಸಿದ್ದಪ್ಪ, ರವೀಂದ್ರಪ್ಪ, ಶಂಕರಮೂರ್ತಿ, ಮಂಜುನಾಥ್, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯರುಗಳಾದ ವಿಜಯಕುಮಾರ್, ತಿಪ್ಪೇಸ್ವಾಮಿ, ಅಲ್ಪಸಂಖ್ಯಾತ ಘಟಕದ ಅಬ್ಬು ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.