ಮೇ 1ರಿಂದ ಧಾರವಾಡ ಆಪೂಸ್‌ ಮಾವು ಮೇಳ

| Published : Apr 28 2024, 01:23 AM IST / Updated: Apr 28 2024, 01:05 PM IST

ಸಾರಾಂಶ

ಮೇ 1ರಿಂದ ಜೂನ್ 1ರ ವರೆಗೆ ನಡೆಯುವ ಮೇಳದಲ್ಲಿ ಗುಣಮಟ್ಟದ ಮಾವು ಮಾರಾಟ ಇರಲಿದೆ. ನಗರ ಹಾಗೂ ಸುತ್ತಲಿನ ‌ಭಾಗಗಳ ಮಾವು ಪ್ರಿಯರು ಈ ಮೇಳದ ಪ್ರಯೋಜನ ಪಡೆಯಬೇಕು.

ಧಾರವಾಡ:  ಧಾರವಾಡ ಭಾಗದ ಮಾವು ಬೆಳೆಗಾರರು ಕೂಡಿಕೊಂಡು ಧಾರವಾಡ ಆಪೂಸ್‌ ಎಂದು ಬ್ರ್ಯಾಂಡ್‌ ಮಾಡಿದ್ದು, ರುಚಿಕರ ಮತ್ತು ಗುಣಮಟ್ಟದ ಆಪೂಸ್‌ ಮಾವು ಹಣ್ಣುಗಳ ಮೇಳವನ್ನು ನಗರದ ಗಾಂಧಿ‌ ಶಾಂತಿ ಪ್ರತಿಷ್ಠಾನದಲ್ಲಿ ಆರಂಭಿಸಲಾಗಿದೆ ಎಂದು ಮಾವು ಬೆಳೆಗಾರರ ಬಳಗದ ಮುಖಂಡ ಸುಭಾಸ ಆಕಳವಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 1ರಿಂದ ಜೂನ್ 1ರ ವರೆಗೆ ನಡೆಯುವ ಮೇಳದಲ್ಲಿ ಗುಣಮಟ್ಟದ ಮಾವು ಮಾರಾಟ ಇರಲಿದೆ. ನಗರ ಹಾಗೂ ಸುತ್ತಲಿನ ‌ಭಾಗಗಳ ಮಾವು ಪ್ರಿಯರು ಈ ಮೇಳದ ಪ್ರಯೋಜನ ಪಡೆಯಬೇಕು ಎಂದರು.

ಧಾರವಾಡ ಭಾಗದಲ್ಲಿ‌ ಅನೇಕರು ಮಾವು ಬೆಳೆಯುತ್ತಾರೆ. ಈ‌ ಬೆಳೆಗಾರರ ಮತ್ತು ಮಾವು ಬೆಳೆಯ ಸಮಸ್ಯೆಗಳೂ ಅನೇಕವಾಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾವು ಬೆಳೆಗಾರರ ಬಳಗ ಕಟ್ಟಲಾಗಿದೆ. ಮಾವಿನ ಅಭಿವೃದ್ಧಿ, ಗುಣಮಟ್ಟದ ಮಾವು ಉತ್ಪಾದನೆ, ಬೆಳೆಗಾರರ ಆದಾಯ ಹೆಚ್ಚಿಸುವುದು, ಬೆಳೆಗಾರರು ಮತ್ತು ಬಳಕೆದಾರರ ಸಹಭಾಗಿತ್ವ ವೃದ್ಧಿಸುವ ಗುರಿ ಇದೆ ಎಂದು ಹೇಳಿದರು.

ಇದಕ್ಕಾಗಿ ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ವಿಜ್ಞಾನಿಗಳ ಸಲಹೆ‌ ಪಡೆಯಲಾಗುತ್ತಿದೆ. ಜತೆಗೆ ಬೆಳೆಗಾರರಿಂದ ನೇರವಾಗಿ ಬಳಕೆದಾರರಿಗೆ ತಲುಪಿಸುವುದು ಬಳಗದ ಉದ್ದೇಶವಾಗಿದೆ. ಧಾರವಾಡ ಆಪೂಸ್‌ ಮಾವು‌‌ ಬೆಳೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಪ್ರಯತ್ನವೂ ಇದಾಗಿದೆ. ಆಪೂಸ್‌ ಹಣ್ಣಿಗೆ ಜಿಐ ಟ್ಯಾಗ್ ಪಡೆಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಳೆಗಾರರಾದ ಸುರೇಶ ಕುಲಕರ್ಣಿ, ಶಿವನಗೌಡ ಪಾಟೀಲ, ಪ್ರಮೋದ ಗಾಂವಕರ, ಗಂಗಾಧರ ಹೊಸಮನಿ, ಅನುರಾಧ, ಡಾ.ರಾಜೇಂದ್ರ ಪೋದ್ದಾರ ಇದ್ದರು.