ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವು

| Published : Apr 27 2024, 01:02 AM IST

ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಹಠಾತಾಗಿ ಕುಸಿದು ಬಿದ್ದು ಮಹಿಳಾ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಹಠಾತಾಗಿ ಕುಸಿದು ಬಿದ್ದು ಮಹಿಳಾ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಚಳ್ಳಕೆರೆ ಇತಿಹಾಸದಲ್ಲಿ ಹಲವಾರು ಚುನಾವಣೆಗಳು ನಡೆದಿದ್ದು, ಮತದಾನದ ಸಂದರ್ಭದಲ್ಲಿ ಮತಗಟ್ಟೆಯಲ್ಲೇ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ. ಶಿಕ್ಷಕಿ ಯಶೋಧಮ್ಮ(೫೧) ಮೃತಪಟ್ಟ ಮತಗಟ್ಟೆ ಅಧಿಕಾರಿಯಾಗಿದ್ದಾರೆ.

ಬೆಳಗ್ಗೆ ಮತಗಟ್ಟೆ ಕೇಂದ್ರಲ್ಲಿ ಮತದಾನ ನಡೆಯುವ ಸಂದರ್ಭದಲ್ಲಿ ಚುರುಕಿನಿಂದ ಕಾರ್ಯನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದರು. ಸೆಕ್ಟರ್ ಅಧಿಕಾರಿ, ಪ್ರಾಧ್ಯಾಪಕ ರಘುನಾಥ ಸಹ ಅವರನ್ನು ಭೇಟಿ ಮಾಡಿ ಕರ್ತವ್ಯದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಇವರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ನಾಗರತ್ನಮ್ಮ ಹಾಗೂ ಇನ್ನಿತರರು ಸಹ ಮತಗಟ್ಟೆಯಲ್ಲಿರುತ್ತಾರೆ. ಆದರೆ, ಶಿಕ್ಷಕಿ ಯಶೋಧಮ್ಮ ೧೦.೩೦ರ ಸಮಯದಲ್ಲಿ ಕುಸಿದು ಬಿದಿದ್ದು, ಕೂಡಲೇ ಆಕೆಯನ್ನು ಖಾಸಗಿ ವಾಹನದಲ್ಲಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮೃತಕುಟುಂಬಕ್ಕೆ ಸಾಂತ್ವನ ತಿಳಿಸಿದರಲ್ಲದೆ, ಚುನಾವಣಾ ಕರ್ತವ್ಯ ಸಂದರ್ಭದಲ್ಲಿ ಮೃತಪಟ್ಟ ಶಿಕ್ಷಕಿ ಕುಟುಂಬಕ್ಕೆ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲೇ ತರಿಸಿಕೊಡುವ ಭರವಸೆ ನೀಡಿದರು. ಮೃತಳಾ ಸಂಬಂಧಿಕರು ಸಹ ಆಸ್ಪತ್ರೆಯಲ್ಲಿ ರೋಧಿಸುತ್ತಿದ್ದರು.

ಸುದ್ದಿ ತಿಳಿದ ಕೂಡಲೇ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಆರ್.ಮಾರುತೇಶ್, ಜಿಲ್ಲಾ ಮಾದಿಗ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಡಿ.ದಯಾನಂದ, ಆನಂದಮೂರ್ತಿ ಮುಂತಾದವರು ಇದ್ದರು.