ತೇಜಸ್ವಿ ಸೂರ್ಯ ಪರ ವಿಜಯೇಂದ್ರ ಮತಬೇಟೆ

| Published : Apr 20 2024, 01:30 AM IST / Updated: Apr 20 2024, 11:32 AM IST

ಸಾರಾಂಶ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಬೇಟೆಗಿಳಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡು ಅಂತಾರಾಷ್ಟ್ರೀಯ ಸಂಬಂಧ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಹೆಚ್ಚು ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

 ಬೆಂಗಳೂರು :  ಭಾರತ ಮತ್ತೆ ವಿಶ್ವಗುರುವಿನ ಪ್ರಧಾನ ಪಾತ್ರ ವಹಿಸುವತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡ ನೀತಿಗಳು ಮತ್ತು ಕ್ರಮಗಳು ಕಾರಣವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಅವರು ರೋಡ್ ಶೋ ಮೂಲಕ ಸಂಚರಿಸಿ ಮತಯಾಚಿಸಿದರು.

ಭಾರತ ಮೊದಲು ಎಂಬುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ. ದೇಶದ ಕಾರ್ಯತಂತ್ರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಹೆಚ್ಚಿನ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಸಂಬಂಧಗಳ ನಿರ್ವಹಣೆಯಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಮೋದಿ ಸರ್ಕಾರ ಹೆಚ್ಚು ಯಶಸ್ವಿಯಾಗಿದೆ. ಪ್ರಪಂಚದ ಯಾವುದೇ ಭಾಗದಲ್ಲಿರುವ ಭಾರತೀಯರ ಸುರಕ್ಷತೆಗೆ ಮೋದಿ ಸರ್ಕಾರ ಪ್ರಾಮುಖ್ಯತೆ ನೀಡಿದೆ ಎಂದು ಪ್ರತಿಪಾದಿಸಿದರು.

ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗಾಗಿ ಬದುಕಬೇಕೆಂಬ ಕನಸು ಹೊತ್ತು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸಲು, ದೇಶದ ಭವಿಷ್ಯಕ್ಕೆ ಹಗಲಿರಳು ದುಡಿಯುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೋಸ್ಕರ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಗೆ, ಮೋದಿಯವರಿಗೆ ದೇಶ ಮೊದಲು ಆಗಿದ್ದರೆ, ಕಾಂಗ್ರೆಸ್ಸಿಗರಿಗೆ ಕುಟುಂಬ ಮೊದಲು ಆಗಿದೆ. ವಂಶಾಡಳಿತ ಪಕ್ಷಗಳಿಗೆ ಸ್ವಜನಪಕ್ಷಪಾತ, ಭ್ರಷ್ಟಾಚಾರವೇ ಮುಖ್ಯವಾಗಿರುತ್ತದೆ. ದೇಶದ ಭವಿಷ್ಯ, ಜನರ ಕಲ್ಯಾಣ ಗೌಣವಾಗುತ್ತದೆ ಎಂದು ಹೇಳಿದರು.

ವಸುಧೈವ ಕುಟುಂಬಕಂ ತತ್ವದಡಿ ಭಾರತ ಇತರ ದೇಶಗಳಿಗೆ ಸಂಕಷ್ಟ ಸಮಯದಲ್ಲಿ ಸಹಾಯ ಹಸ್ತ ನೀಡುತ್ತಲೇ ಬಂದಿದೆ. ಕೋವಿಡ್‌ ಸಮಯದಲ್ಲಿ ಔಷಧಕ್ಕೆ ಹಾಹಾಕಾರ ಎದ್ದ ಸಮಯದಲ್ಲಿ ವಿಶ್ವದ 100 ರಾಷ್ಟ್ರಗಳಿಗೆ ಭಾರತ 30 ಕೋಟಿಗೂ ಅಧಿಕ ಉಚಿತ ಕೋವಿಡ್ ಲಸಿಕೆ ಪೂರೈಸಿದ್ದು, ಭೂಕಂಪ ಪೀಡಿತ ಸಿರಿಯಾ ಮತ್ತು ಟರ್ಕಿ ದೇಶಗಳಿಗೆ 5,945 ಟನ್ ತುರ್ತು ಪರಿಹಾರ ಸಾಮಗ್ರಿ ರವಾನಿಸಲಾಗಿದೆ. ಇದು ನವಭಾರತದ ತಾಕತ್ತು ಎಂದು ತಿಳಿಸಿದರು.

ಹತ್ತು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ದೇಶದಲ್ಲಿ ಎಲ್ಲರಿಗೂ ಒಂದೇ ಸಂವಿಧಾನ ಅನ್ವಯಿಸಬೇಕು ಎಂಬ ಉದ್ದೇಶದಿಂದ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲಾಗಿದೆ. ಇದರಿಂದ ಜಮ್ಮು-ಕಾಶ್ಮೀರ ದೇಶದ ಮುಖ್ಯವಾಹಿನಿಗೆ ಬಂದಿದ್ದು, ಇದೀಗ ಆ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕಾಭಿವೃದ್ಧಿಯಾಗುತ್ತಿದ್ದು, ಶಾಂತಿ-ಸಮೃದ್ಧಿ ನೆಲೆಸುತ್ತಿದೆ ಎಂದು ಮಾಹಿತಿ ನೀಡಿದರು.

ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ವಹಿಸಿರುವ ಸರ್ಕಾರ, ದೇಶದ ಹೊರಗೂ ನುಗ್ಗಿ ಭಯೋತ್ಪಾದಕರನ್ನು ನಿರ್ಣಾಮ ಮಾಡುವ ಸಾಹಸ ತೋರಿದೆ. ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಏರ್‌ ಸ್ಟ್ರೈಕ್‌ ಗಳಿಂದ ಭಯೋತ್ಪಾದಕ ಗುಂಪುಗಳು ಮತ್ತು ಶತ್ರು ರಾಷ್ಟ್ರಗಳು ಹೆದರಿವೆ. ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ದೇಶದಲ್ಲಿ ನಕ್ಸಲೀಯ ಚಟುವಟಿಕೆಗಳಲ್ಲೂ ಶೇ.75 ರಷ್ಟು ಕಡಿಮೆಯಾಗಿದ್ದು, ಈ ಹಾವಳಿಯ ಸಂಪೂರ್ಣ ನಿಗ್ರಹ ದೂರವಿಲ್ಲ ಎಂದು ಹೇಳಿದರು.

ಪಕ್ಷದ ಮುಖಂಡರಾದ ಎಚ್‌.ರವೀಂದ್ರ, ಡಾ। ಅರುಣ್ ಸೋಮಣ್ಣ, ಟಿ.ವಿ.ಕೃಷ್ಣ ಉಪಸ್ಥಿತರಿದ್ದರು.