ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರ ಸಹಕಾರಿ: ಬಿಜು ನಾಯರ್

| Published : Apr 20 2024, 01:17 AM IST

ಸಾರಾಂಶ

ಎಳೆಯ ಮಕ್ಕಳ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಉತ್ತಮ ಮತ್ತು ಸಹಕಾರಿ ಎಂದು ಉದ್ಯಮಿ ಬಿಜು ನಾಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಟ

ಎಳೆಯ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಬಹಳ ಸಹಕಾರಿಯಾಗುತ್ತದೆ ಎಂದು ಉದ್ಯಮಿ ಬಿಜು ನಾಯರ್ ಹೇಳಿದರು.

ಅವರು ಇಲ್ಲಿನ ಕೋಟದ ಗ್ರಾಪಂ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲಗಳ ನೇತೃತ್ವದಲ್ಲಿ ನಡೆದ ಬೇಸಿಗೆ ಶಿಬಿರದ ಚಿತ್ತಾರ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಗ್ಧ ಮನಸ್ಸಿನ ಮಕ್ಕಳಿಗೆ ಆರಂಭದಲ್ಲಿಯೇ ಉಪಯುಕ್ತ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ. ಮೊಬೈಲ್ ಗೀಳು ಇರುವ ಈ ಕಾಲಘಟ್ಟದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಮನಸ್ಥಿತಿಯನ್ನು ಸಕರಾತ್ಮಕವಾಗಿ ಬದಲಾಯಿಸುತ್ತದೆ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಬೇಸಿಗೆ ಶಿಬಿರ ಆಯೋಜಿಸಿ ಸಮಾಜಕ್ಕೆ ಪೂರಕವಾದ ಮೌಲ್ಯಗಳನ್ನು ನೀಡಬೇಕು ಎಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿ ರೋಹಿತ್ ಬೈಕಾಡಿ ಇವರನ್ನು ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರದಾನ ಕಾರ್ಯದರ್ಶಿ ದಿನೇಶ್ ಗಾಣಿಗ, ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಪನ್ಮೂಲ ವ್ಯಕ್ತಿ ಜಯಕ್ಷ್ಮೀ ಟೀಚರ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಇಂಡಿಕಾ ಕಲಾ ಬಳಗದ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಶಕೀಲ ಎನ್. ಪೂಜಾರಿ ಸ್ವಾಗತಿಸಿದರು. ಪಂಚವರ್ಣದ ಸಂಚಾಲಕಿ ಸುಜಾತ ಬಾಯರಿ ವಂದಿಸಿದರು.