ಕರ್ನಾಟಕದಲ್ಲಿ ಐದೂವರೆ ಸಿಎಂ ಸರ್ಕಾರ: ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ

| Published : Apr 20 2024, 01:15 AM IST / Updated: Apr 20 2024, 02:20 PM IST

ಸಾರಾಂಶ

  ರಾಜ್ಯದಲ್ಲಿ ಬಿಜೆಪಿ ಎಲ್ಲ 28 ಲೋಕಸಭಾ ಸ್ಥಾನಗಳಲ್ಲಿ ಜಯಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಕೇಂದ್ರ ಸರ್ಕಾರದ ದಿಟ್ಟ ನಿಲುವುಗಳು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನಕ್ಕೇರಿಸಲು ನೆರವಾಗಲಿದೆ ಎಂದರು.

 ಮಂಗಳೂರು :  ಕರ್ನಾಟಕದಲ್ಲಿ ಐದೂವರೆ ಸಿಎಂ ಸರ್ಕಾರ ಆಡಳಿತ ನಡೆಸುತ್ತಿದೆ. ಅವರಿಗೆ ಜನತೆಯ ಅಭಿವೃದ್ಧಿಗಿಂತ ಮುಖ್ಯಮಂತ್ರಿ ಕುರ್ಚಿಯ ಕನಸೇ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಪರಮೇಶ್ವರ್‌ ಇವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸೂಪರ್‌ ಸಿಎಂ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಕೂಡ ಸಿಎಂನಂತೆ ವರ್ತಿಸುತ್ತಿದ್ದಾರೆ. ಹಾಗಿರುವಾಗ ಈ ಐವರ ಬಳಿಕ ಸಿದ್ದರಾಮಯ್ಯ ಅರ್ಧ ಸಿಎಂ ಆಗಿದ್ದಾರೆ.

 ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣ್‌ದೀಪ್‌ ಸುರ್ಜೇವಾಲಾ ಅವರು ಸಿಎಂನ ಕಮಿಷನ್‌ ಏಜೆಂಟ್‌ ಆಗಿದ್ದು, ಕಾಂಗ್ರೆಸ್‌ನ ಗಾಂಧಿ ಪರಿವಾರ ಕರ್ನಾಟಕದಲ್ಲಿ ಎಟಿಎಂ ಮಷಿನ್‌ ಆಪರೇಟ್‌ ಮಾಡುತ್ತಿದೆ. ಅಭಿವೃದ್ಧಿ ಬದಲು ಜನತೆಯನ್ನು ದೋಚುವ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ಯಾರಂಟಿ ಎಕ್ಸ್‌ಪೇರ್‌: ಕರ್ನಾಟಕದಲ್ಲಿ ಸರ್ಕಾರದ ಗ್ಯಾರಂಟಿ ಎಕ್ಸ್‌ಪೇರ್‌ ಆಗಿದೆ. ಐದು ಗ್ಯಾರಂಟಿಗಳಲ್ಲಿ ಮೊದಲು 200 ಯುನಿಟ್‌ ವಿದ್ಯುತ್ ಉಚಿತ ನೀಡುತ್ತೇವೆ ಎಂದರು.

ನಂತರ ಟ್ಯಾರಿಫ್‌ನಲ್ಲಿ 3 ರು. ಹೆಚ್ಚಳ ಮಾಡಿದರು. ಬಿಪಿಎಲ್‌ಗೆ 10 ಕೇಜಿ ಅಕ್ಕಿ ಭರವಸೆ ನೀಡಿದ್ದಾರೆ, ಅದರಲ್ಲಿ 5 ಕೇಜಿ ಅಕ್ಕಿ ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ತಾನೇ ನೀಡುವುದು ಎಂದು ಸುಳ್ಳು ಹೇಳುತ್ತಿದೆ ಎಂದರು. ಎಸ್‌ಡಿಪಿಐ ಸಖ್ಯ ನಿಲುವು ಸ್ಪಷ್ಟಪಡಿಸಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಬೆಂಬಲಿಸುವುದಾಗಿ ಎಸ್‌ಡಿಪಿಐ ಹೇಳಿದೆ. ಆದರೆ ಕಾಂಗ್ರೆಸ್‌ ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದನ್ನು ಮತದಾರರಿಗೆ ಕಾಂಗ್ರೆಸ್‌ ಸ್ಪಷ್ಟಪಡಿಸಲಿ ಎಂದು ಗೌರವ್‌ ಭಾಟಿಯಾ ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರ ಎಂದರೆ ಕರಪ್ಶನ್‌, ಕಮ್ಯೂನಲ್‌ ಮತ್ತು ಕ್ರಿಮಿನಲ್‌ ಎಂದು ಕರೆಯುವಂತಾಗಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಹುಬ್ಬಳ್ಳಿ ಸೇರಿದಂತೆ ಎಲ್ಲೆಡೆ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಘಟನೆ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಗಳು ರಾಜ್ಯದಲ್ಲಿ ಕ್ರಿಮಿನಲ್‌ ಚಟುವಟಿಕೆ ಗರಿಗೆದರಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಉಗ್ರವಾದಿಗಳಿಗೆ ಸುರಕ್ಷಿತ ತಾಣವಾಗುತ್ತಿದೆ. ದೇಶವಿರೋಧಿ ಶಕ್ತಿಗಳ ವಿರುದ್ಧ ಕಾಂಗ್ರೆಸ್‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ಭರಪೂರ ಅನುದಾನ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಎಲ್ಲ 28 ಲೋಕಸಭಾ ಸ್ಥಾನಗಳಲ್ಲಿ ಜಯಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಕೇಂದ್ರ ಸರ್ಕಾರದ ದಿಟ್ಟ ನಿಲುವುಗಳು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನಕ್ಕೇರಿಸಲು ನೆರವಾಗಲಿದೆ ಎಂದರು.

ಮುಖಂಡರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ರಾಜಗೋಪಾಲ ರೈ, ಜಗದೀಶ್ ಶೇಣವ ಇದ್ದರು.