ದೇಶ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಅನಿವಾರ್ಯ

| Published : Apr 26 2024, 12:47 AM IST

ಸಾರಾಂಶ

ದೇಶದ ಆಂತರಿಕ ಭದ್ರತೆ ಹಾಗೂ ಸರ್ವಾಂಗೀಣ ಅಭಿವೃದ್ದಿಗಾಗಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ । ಬಿಜೆಪಿ-ಜೆಡಿಎಸ್‌ ರೋಡ್ ಶೋ - - - ಕನ್ನಡಪ್ರಭ ವಾರ್ತೆ ಹರಿಹರ

ದೇಶದ ಆಂತರಿಕ ಭದ್ರತೆ ಹಾಗೂ ಸರ್ವಾಂಗೀಣ ಅಭಿವೃದ್ದಿಗಾಗಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಗುರುವಾರ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ನಡೆಸಿ ಮಾತನಾಡಿದ ಅವರು, ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ನೇತೃತ್ವದಲ್ಲಿ 10 ವರ್ಷ ಯಾವುದೇ ಕಪ್ಪು ಚುಕ್ಕೆಯಿಲ್ಲದೆ, ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಬಿಜೆಪಿ ಸರ್ಕಾರ ಭಾರತವನ್ನು ಜಗತ್ತಿನಲ್ಲೇ ಶಕ್ತಿಶಾಲಿ ರಾಷ್ಟ್ರವನ್ನಾಗಿಸಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಪರಿಣಾಮ ಕಾಂಗ್ರೆಸ್‌ಗೆ ಭಯ ಶುರುವಾಗಿದೆ. ದೇಶದ ಮುಂದಿನ ಭವಿಷ್ಯ ಉಜ್ವಲವಾಗಲಿ ಎನ್ನುವ ದೃಷ್ಠಿಯಿಂದ ಮಾಜಿ ಪ್ರದಾನ ಮಂತ್ರಿ ದೇವೆಗೌಡರು ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡಿದ್ದಾರೆ. ಎನ್‌ಡಿಎ ರಾಜ್ಯದ ಎಲ್ಲ ೨೮ ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಗ್ಯಾರಂಟಿ ಎಂದ ಅವರು ಒಬ್ಬರಿಂದ ಕ್ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡಲು ಇವರೇ ಬೇಕಾ? ಇವರ ಗ್ಯಾರಂಟಿ ಯೋಜನೆಗಳಿಗೆ ₹೫೬ ಸಾವಿರ ಕೋಟಿ ಹಣ ಬೇಕು. ಇದೇನು ಅವರಪ್ಪನ ಮನೆಯಿಂದ ತರಲ್ಲ. ನಿಮ್ಮಿಂದಲೇ ತೆಗೆದುಕೊಂಡು, ನಿಮಗೆ ಕೊಡುತ್ತಾರೆ ಎಂದು ಆರೋಪ ಮಾಡಿದರು.

ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮೇ ೭ರಂದು ನಡೆಯುವ ಮತದಾನ ದಿನದಂದು ತಾಲೂಕಿನ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ೧೧ ಗಂಟೆಯೊಳಗೆ ನಮ್ಮ ಪರವಾದ ಮತದಾರರು ಮತ ಚಲಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಆಗ ಅತಿ ಹೆಚ್ಚು ಮತ ಗಳಿಸಿಲು ಸಾಧ್ಯ ಎಂದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ದೇವೇಗೌಡರು ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ಘೋಷಣೆ ಮಾಡಿದ ಮರು ಕ್ಷಣದಿಂದಲೇ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ದಾವಣಗೆರೆ ಸೇರಿದಂತೆ ರಾಜ್ಯ ೨೮ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

ನಗರದ ಪಕ್ಕಿರಸ್ವಾಮಿ ಮಠದಿಂದ ಆರಂಭವಾದ ರೋಡ್ ಶೋ ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತದ ಮೂಲಕ ಗಾಂದಿ ವೃತ್ತದಲ್ಲಿ ಅಂತ್ಯಗೊಂಡಿತು. ಸಂಸದ ಜಿ.ಎಂ.ಸೀದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಡಾ.ಬಸವರಾಜ್ ಕೇಲಗರ್, ಐರಣಿ ಅಣ್ಣಪ್ಪ, ಎಚ್.ಶಿವಾನಂದಪ್ಪ, ದನಂಜಯ ಕಡ್ಲೆಬಾಳು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.

- - - -೨೫ ಎಚ್‌ಆರ್‌ಆರ್೨:

ಹರಿಹರದಲ್ಲಿ ಗುರುವಾರ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿ ಮಾತನಾಡಿದರು.-೨೫ ಎಚ್‌ಆರ್‌ಆರ್ ೨ಎ:

ಹರಿಹರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿದ್ದ ರೋಡ್ ಶೋ ನಲ್ಲಿ ಭಾಗವಹಿಸಿದ ಜನಸ್ತೋಮ.