ಪ್ರಜಾಪ್ರಭುತ್ವದ ಉತ್ಸವದಲ್ಲಿ ಪಾಲ್ಗೊಳ್ಳಿ

| Published : Apr 26 2024, 12:47 AM IST

ಸಾರಾಂಶ

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಧಾರವಾಡ:

ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ನಿಮ್ಮ ಹಕ್ಕು ಚಲಾಯಿಸಬೇಕು. ಮತದಾನ ಮಾಡುವುದು ಎಲ್ಲರ ಹಕ್ಕು ಎಂದು ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು. ಕರ್ನಾಟಕ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಯೋಜಿಸಿದ ‘ಮತದಾನ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಮತದಾನ ಮಾಡಲು ಅರ್ಹ ಪುರುಷ ಮತ್ತು ಮಹಿಳಾ ಮತದಾರರು ಚುನಾವಣೆಯಲ್ಲಿ ಭಾಗವಹಿಸಿ ಎಂದರು.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಇದೇ ವೇಳೆ ವಿದ್ಯಾರ್ಥಿನಿಯರಿಗಾಗಿ ‘ಮತದಾನದ ಮಹತ್ವ’ ವಿಷಯದ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಕವಿವಿ ಎನ್‌ಎಸ್‌ಎಸ್‌ ಸಂಯೋಜಕ ಡಾ. ಎಂ.ಬಿ. ದಳಪತಿ, ಪ್ರಾಚಾರ್ಯ ಡಾ. ಎಂ.ಎಸ್. ಸಾಳುಂಕೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಎಸ್.ಕೆ. ಪವಾರ, ಪ್ರಸ್ತುತ ನಗರ ಪ್ರದೇಶಗಳಲ್ಲಿ ಶೇಕಡಾವಾರು ಮತದಾನ ಕಡಿಮೆ ಆಗುತ್ತಿರುವುದು ಆತಂಕದ ಸಂಗತಿ. ಆದ್ದರಿಂದ ಸುಶಿಕ್ಷಿತರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.

ಡಾ. ಈರಣ್ಣ ಮುಳಗುಂದ, ವಿದ್ಯಾರ್ಥಿನಿಲಯದ ಕ್ಷೇಮ ಪಾಲಕರಾದ ಡಾ. ಎಸ್. ಅನ್ನಪೂರ್ಣಾ, ಡಾ. ವಿಜಯಲಕ್ಷ್ಮಿ ಕೆ., ಅಂಜಲಿ, ಪುಷ್ಪಿತಾರಾಣಿ ಇದ್ದರು.