ನಂಜನಗೂಡು, ವರುಣ ವಿಧಾನಸಭಾ ಕ್ಷೇತ್ರಗಳ ಮತದಾನಕ್ಕಾಗಿ ಸಕಲ ಸಿದ್ಧತೆ

| Published : Apr 26 2024, 12:47 AM IST

ನಂಜನಗೂಡು, ವರುಣ ವಿಧಾನಸಭಾ ಕ್ಷೇತ್ರಗಳ ಮತದಾನಕ್ಕಾಗಿ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, ಇದರಲ್ಲಿ 42 ಸೂಕ್ಷ್ಮ, 1 ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಒಟ್ಟು 2,22,757 ಮತದಾರರಿದ್ದು, ಇದರಲ್ಲಿ 1,12,381 ಮಹಿಳೆಯರು, 1,10,369 ಪುರುಷರು ಹಾಗೂ 7 ತೃತೀಯ ಲಿಂಗಿಗಳು ಒಳಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಲೋಕಸಭಾ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ನಂಜನಗೂಡು ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳ ಮತದಾನಕ್ಕಾಗಿ ಗುರುವಾರ ಸಕಲ ಸಿದ್ಧತೆ ನಡೆಯಿತು.

ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣ ಹಾಗೂ ವರುಣ ವಿಧಾನಸಭಾ ಕ್ಷೇತ್ರಕ್ಕೆ ದೇವೀರಮ್ಮನಹಳ್ಳಿಯಲ್ಲಿರುವ ಜೆಎಸ್ಎಸ್ ಪದವಿ ಕಾಲೇಜಿನ ಆವರಣದಲ್ಲಿ ಮತದಾನಕ್ಕೆ ಇವಿಎಂ ಹಾಗೂ ವಿವಿ ಪ್ಯಾಟ್ ಗಳೊಂದಿಗೆ ಅಗತ್ಯ ಸಿಬ್ಬಂದಿಯನ್ನು ಕೆಎಸ್.ಆರ್.ಟಿಸಿ ಬಸ್ ಗಳ ಮೂಲಕ ಮತಗಟ್ಟೆಗಳಿಗೆ ಕಳುಹಿಸಲಾಯಿತು.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, ಇದರಲ್ಲಿ 42 ಸೂಕ್ಷ್ಮ, 1 ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಒಟ್ಟು 2,22,757 ಮತದಾರರಿದ್ದು, ಇದರಲ್ಲಿ 1,12,381 ಮಹಿಳೆಯರು, 1,10,369 ಪುರುಷರು ಹಾಗೂ 7 ತೃತೀಯ ಲಿಂಗಿಗಳು ಒಳಗೊಂಡಿದ್ದಾರೆ.

ಇನ್ನು ಮತಗಟ್ಟೆಗೆ ನಾಲ್ವರು ಅಧಿಕಾರಿ ವರ್ಗ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಿದೆ. ಕಸುವಿನಹಳ್ಳಿ, ಮಲ್ಕುಂಡಿ, ಶಿರಮಳ್ಳಿ, ಕುರಹಟ್ಟಿ, ನೇರಳೆ ಗ್ರಾಮಗಳಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಚಿನ್ನದಗುಡಿಹುಂಡಿಯಲ್ಲಿ ವಿಶೇಷ ಚೇತನರ ಮತಗಟ್ಟೆ, ಬಂಕಹಳ್ಳಿಯಲ್ಲಿ ಹಾಡಿ ಜನಾಂಗದ ಮತಗಟ್ಟೆ, ಹೆಮ್ಮರಗಾಲದಲ್ಲಿ ರೈತ ಮತಗಟ್ಟೆ, ದೇವೀರಮ್ಮನಹಳ್ಳಿಯಲ್ಲಿ ಯುವ ಮತದಾರರ ಮತಗಟ್ಟೆ, ಹುಲ್ಲಹಳ್ಳಿಯಲ್ಲಿ ಯತ್ನಿಕ್ ಮತಗಟ್ಟೆ ತೆರೆಯಲಾಗಿದೆ. 69 ಅಧಿಕಾರಿಗಳು ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸನೂರು ಮಾಹಿತಿ ನೀಡಿದ್ದಾರೆ.

ವರುಣ ಕ್ಷೇತ್ರದಲ್ಲಿ

ಇನ್ನು ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ 261 ಮತಗಟ್ಟೆಗಳಿವೆ. ಇದರಲ್ಲಿ 32 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 2,40,949 ಮತದಾರರಿದ್ದು, ಇದರಲ್ಲಿ 1,19,545 ಮಹಿಳೆಯರು, 1,21,391 ಪುರುಷರು ಹಾಗೂ 13 ತೃತೀಯ ಲಿಂಗಿಗಳಿದ್ದಾರೆ. ಕುಪ್ಪರವಳ್ಳಿ ಹಾಗೂ ಹೊಸಕೋಟೆ ಗ್ರಾಮಗಳಲ್ಲಿ ಸಖಿ ಮತಗಟ್ಟೆ ತೆರೆಯಲಾಗಿದೆ. ಕೆಂಪಿಸಿದ್ದನಹುಂಡಿಯಲ್ಲಿವಿಶೇಷ ಚೇತನ ಮತಗಟ್ಟೆ, ಮಲ್ಲೂಪುರದಲ್ಲಿ ರೈತರ ಮತಗಟ್ಟೆ, ತಾಂಡವಪುರದಲ್ಲಿ ಯತ್ನಿಕ್ ಮತಗಟ್ಟೆ ತೆರೆಯಲಾಗಿದೆ.