ಮಳೆಯಿಂದ ಪ್ರಾಣ ಹಾನಿಯಾಗದಂತೆ ಎಚ್ಚರಿಕೆ ವಹಿಸಿ: ಡೀಸಿ ಡಾ.ಕುಮಾರ್

| Published : May 09 2024, 01:01 AM IST

ಮಳೆಯಿಂದ ಪ್ರಾಣ ಹಾನಿಯಾಗದಂತೆ ಎಚ್ಚರಿಕೆ ವಹಿಸಿ: ಡೀಸಿ ಡಾ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಪಂಚಾಯತ್ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿ, ಚೆಸ್ಕಾಂ ಕಚೇರಿ, ಅರಣ್ಯ ಇಲಾಖೆಗಳಲ್ಲಿ ಎರಡು ದಿನದೊಳಗಾಗಿ ಕಂಟ್ರೋಲ್ ರೂಂ ತೆರೆದು ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳ ವಿವರವನ್ನು ಮಾಹಿತಿಗಾಗಿ ಅನಾವರಣಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆ ಹಾಗೂ ಗಾಳಿಯಿಂದ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲಾಖೆಗಳು ಮುನ್ನಚ್ಚರಿಕೆ ಕ್ರಮಗಳನ್ನು ವಹಿಸದೇ ಸಣ್ಣ ಪುಟ್ಟ ಕಾರಣಗಳಿಂದ ಮಳೆ ಅಥವಾ ಬಿರುಗಾಳಿಯಿಂದ ಪ್ರಾಣ ಹಾನಿಯಾದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಈ ಬಾರಿ ಸಾಮಾನ್ಯ ಮಳೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆ ಹೆಚ್ಚಿನ ಗಾಳಿಯೂ ಸಂಭವಿಸಲಿದ್ದು, ಕೂಡಲೇ ಎಲ್ಲಾ ಇಲಾಖೆಯವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಿ ಮರದ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ಮಳೆ ಬಂದ ಸಂದರ್ಭದಲ್ಲಿ ಮರಗಳು, ವಿದ್ಯುತ್ ಕಂಬಗಳು ಗಾಳಿಯಿಂದ ಬಿದ್ದು ಹೋದಲ್ಲಿ ಅವುಗಳನ್ನು ತಕ್ಷಣ ತೆರವುಗೊಳಿಸಲು ಇಲಾಖೆ ಸಜ್ಜಾಗಿರಬೇಕು. ಮಳೆಯಾಗುವಾಗ ಕ್ಷಿಪ್ರವಾಗಿ ಕೆಲಸ ನಿರ್ವಹಿಸಲು ತಂಡಗಳನ್ನು ರಚಿಸಿ. ಸಾರ್ವಜನಿಕರಿಂದ ದೂರು ಬಾರದಂತೆ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ತಾಲೂಕು ಪಂಚಾಯತ್ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿ, ಚೆಸ್ಕಾಂ ಕಚೇರಿ, ಅರಣ್ಯ ಇಲಾಖೆಗಳಲ್ಲಿ ಎರಡು ದಿನದೊಳಗಾಗಿ ಕಂಟ್ರೋಲ್ ರೂಂ ತೆರೆದು ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳ ವಿವರವನ್ನು ಮಾಹಿತಿಗಾಗಿ ಅನಾವರಣಗೊಳಿಸಬೇಕು ಎಂದರು.

ಒಳಚರಂಡಿಗಳ ಕಸ ಹಾಗೂ ಇನ್ನಿತರೆ ವಸ್ತುಗಳು ಸೇರಿಕೊಂಡು ಮಳೆ ನೀರು ಹರಿಯುವಿಕೆಗೆ ತೊಂದರೆಯಾಗುತ್ತದೆ. ಒಳಚರಂಡಿಯಲ್ಲಿರುವ ಕಸವನ್ನು ತೆರವುಗೊಳಿಸಬೇಕು. ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮರಗಳ ಕೆಳಗಡೆ ವಾಹನಗಳ ನಿಲುಗಡೆ ಮಾಡದಂತೆ ಹಾಗೂ ಇನ್ನಿತರೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಈ ಹಿಂದೆ ಮಳೆಯಿಂದ ಮುಳುಗಡೆ ಅಥವಾ ತೊಂದರೆಯಾದ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು. ನುರಿತ ಈಜುಗಾರರು, ಜೆಸಿಬಿ, ಹಿಟ್ಯಾಚಿ ಮಾಲೀಕರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಿಟ್ಟಿಕೊಳ್ಳುವುದು ಉತ್ತಮ. ಮಳೆಯಿಂದ ಮನೆ ಹಾನಿ ಅಥವಾ ಬೆಳೆ ಹಾನಿಯಾದಲ್ಲಿ ತಕ್ಷಣ ಪರಿಶೀಲಿಸಿ ತಹಸೀಲ್ದಾರ್ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದರು.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಳೆ ನೀರು ನಿಂತಲ್ಲಿ ತೆರವುಗೊಳಿಸಲು ತಂಡಗಳನ್ನು ರಚಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ವಿದ್ಯುತ್ ಕಂಬಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್. ಎಲ್ ನಾಗರಾಜು ಅವರು ಮಾತನಾಡಿ, ಈ ಹಿಂದೆ ಮಳೆಯಾದಾಗ ನಾಗಮಂಗಲ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡು ತೊಂದರೆಯಾಗಿತ್ತು, ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ವ್ಯವಸ್ಥಿತವಾಗಿ ನಡೆಯಲಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ಚೆಸ್ಕಾಂ ಅಧೀಕ್ಷಕ ಅಭಿಯಂತರ ಸೋಮಶೇಖರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.