ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಮತದಾರ

| Published : May 09 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಾಗಲಕೋಟೆ ಲೋಕಸಭೆಯ ಮತದಾನದಲ್ಲಿ ಶತಾಯುಷಿ ಮತಚಲಾಯಿಸಿ ಗಮನ ಸೆಳೆದರೆ, ವಿಕಲಚೇತನರು, ವೃದ್ಧರು, ಲಂಬಾಣಿ ಜನಾಂಗದ ಮಹಿಳೆಯರು ತಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಉಡುಗೆ ತೊಡುಗೆಯಲ್ಲಿ ಬಂದು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭೆಯ ಮತದಾನದಲ್ಲಿ ಶತಾಯುಷಿ ಮತಚಲಾಯಿಸಿ ಗಮನ ಸೆಳೆದರೆ, ವಿಕಲಚೇತನರು, ವೃದ್ಧರು, ಲಂಬಾಣಿ ಜನಾಂಗದ ಮಹಿಳೆಯರು ತಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಉಡುಗೆ ತೊಡುಗೆಯಲ್ಲಿ ಬಂದು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಲೋಕಸಭೆಗೆ ಮಂಗಳವಾರ ನಡೆದ ಮತದಾನದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಸ್ವಯಂ ಸೇವಕರ ನೆರವು, ಗಾಲಿ ಕುರ್ಚಿ ನೀಡಿ ಸಹಕರಿಸಿದರು.

18 ವರ್ಷದೊಳಗಿನ ಸ್ವಯಂ ಸೇವಕರು ಉತ್ಸಾಹದಿಂದ ವಯೋ ವೃದ್ಧರನ್ನು, ವಿಕಲಚೇತನರನ್ನು ಕರೆತಂದು ಮತ ಚಲಾಯಿಸಲು ನೆರವಾಗುತ್ತಿದ್ದುದು ಮೆಚ್ಚುಗೆಗೆ ಕಾರಣವಾಯಿತು. ಜಿಲ್ಲೆಯಲ್ಲಿ ವಿವಿಧ ಪ್ರಕಾರಗಳ ವಿಕಲಚೇತನರು ಮತಗಟ್ಟೆಗೆ ಬಂದು ಮತ ಚಲಾಯಿಸಿ ಹರ್ಷ ವ್ಯಕ್ತಪಡಿಸಿದರು.

ಬೆಳಗ್ಗೆ 7 ಗಂಟೆಯಿಂದಲೇ ಹಲವಾರು ಮತಕೇತ್ರದಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಹಜವಾಗಿ ಕಂಡು ಬಂದಿತು. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಕೆಲವೆಡೆ ಮತಗಟ್ಟೆಗಳಲ್ಲಿ ನೀರಸ ಪ್ರಕ್ರಿಯೆ ಕಂಡುಬಂದಿತು. ಬೆಳಗ್ಗೆ ಹಾಗೂ ಸಂಜೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.

ಜಮಖಂಡಿ ತಾಲೂಕಿನ ಮತಗಟ್ಟೆಯೊಂದರಲ್ಲಿ 103 ವರ್ಷದ ವೃದ್ಧೆ ಮತದಾನ ಮಾಡಿದರೆ, ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ 96 ವರ್ಷದ ತುಳಸಿಗೇರಪ್ಪ ಮೊಕಾಶಿ ಅವರು ಮತದಾನದ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಸ್ವೀಪ್ ಸಮಿತಿ ರಾಯಬಾರಿಯಾಗಿರುವ ವಿಕಲಚೇತನ ಕ್ರೀಡಾಪಟು ಸಿದ್ಧಾರೂಢ ಕೊಪ್ಪದ ಅವರು ಬಾದಾಮಿ ತಾಲೂಕಿನ ಕೆಂದೂರಿನ 124 ನಂ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಾಗಲಕೋಟೆಯ ಅಂತಾರಾಷ್ಟ್ರೀಯ ಕ್ರೀಡಾಪಟು ವಿಕಲಚೇತನ ಘನಶಾಮ್ ಭಾಂಡಗೆಗೆ ನವನಗರದ ಮತಗಟ್ಟೆಯಲ್ಲಿ ಮತಚಲಾಯಿಸಿ ಗಮನ ಸೆಳೆದರು.

ಸಿಇಒ ದಂಪತಿಗಳಿಂದ ಮತ:

ನವನಗರದ ಅಂಬೇಡ್ಕರ ಭವನದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ ಅವರು ಪತ್ನಿ ಸಮೇತ ತೆರಳಿ ಮತದಾನ ಮಾಡಿದರು.