ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ಬಿಜೆಪಿ ಧರಣಿ

| Published : Apr 19 2024, 01:31 AM IST / Updated: Apr 19 2024, 07:23 AM IST

ಸಾರಾಂಶ

ಜೈ ಶ್ರೀರಾಮ್‌ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಘಟನೆ ಖಂಡಿಸಿ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ವಿದ್ಯಾರಣ್ಯಪುರ ಪೊಲೀಸ್‌ ಠಾಣೆ ಬಳಿ ಪ್ರತಿಭಟನೆ ನಡೆಸಿದರು.

  ಬೆಂಗಳೂರು :  ಜೈ ಶ್ರೀರಾಮ್‌ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಘಟನೆ ಖಂಡಿಸಿ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ವಿದ್ಯಾರಣ್ಯಪುರ ಪೊಲೀಸ್‌ ಠಾಣೆ ಬಳಿ ಪ್ರತಿಭಟನೆ ನಡೆಸಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ತಮ್ಮೇಶ್‌ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ 150ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಮ್ಮೇಶ್‌ಗೌಡ, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿದೆ, ಸಾರಾಯಿಪಾಳ್ಯ, ಜಕ್ಕೂರು, ಎಂ.ಎಸ್‌.ಪಾಳ್ಯ ಭಯೋತ್ಪಾದಕ ಕೇಂದ್ರವಾಗುತ್ತಿವೆ. ಜೈ ಶ್ರೀರಾಮ್‌ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರಾದ ಪವನ್‌ ಮತ್ತು ರಾಹುಲ್‌ ಮೇಲಿನ ಹಲ್ಲೆ ಖಂಡನೀಯ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಹಲ್ಲೆಗೊಳಗಾದ ಪವನ್‌ ಮತ್ತು ರಾಹುಲ್‌ ನಮ್ಮೊಂದಿಗೆ ಬಂದಿದ್ದಾರೆ. ಘಟನೆ ಸಂಬಂಧ ಎಫ್‌ಐಆರ್‌ ದಾಖಲಾದ ಕೂಡಲೇ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ದೂರುದಾರ ಯುವಕರಿಗೆ ಭದ್ರತೆ ನೀಡುವುದಾಗಿ ಹೇಳಿದ್ದಾರೆ ಎಂದರು.

ಬಿಜೆಪಿ ಮುಖಂಡ ಎ.ರವಿ ಮಾತನಾಡಿ, ಬುಧವಾರ ಶ್ರೀರಾಮನ ಹಬ್ಬ ಮಾಡಲಾಗಿದೆ. ಹಲವು ವರ್ಷಗಳ ಹೋರಾಟದ ಫಲವಾಗಿ ದೇಶದಲ್ಲಿ ರಾಮಂದಿರ ನಿರ್ಮಾಣವಾಗಿದೆ. ಹಿಂದೂಗಳಿಗೆ ಪವಿತ್ರ ದೇವರು ರಾಮ. ಆದರೆ, ಅದಕ್ಕೆ ಅವಹೇಳನ ಮಾಡಿದ್ದಾರೆ. ಈ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ವಿರೋಧಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಇದೇ ಜಾಗದಲ್ಲಿ ಫಣೀಂದ್ರ ಆರ್‌ಎಸ್‌ಎಸ್‌ ಶಾಖೆಗೆ ಹೋಗುವಾಗ ಕಿಡಿಗೇಡಿಗಳು ಹಲ್ಲೆ ಮಾಡಿದ್ದರು. ಆತನಿಗೆ 32 ಹೊಲಿಗೆ ಹಾಕಲಾಗಿತ್ತು. ಆ ಪ್ರಕರಣ ಇವತ್ತಿನವರೆಗೂ ತನಿಖೆ ಆಗಲಿಲ್ಲ. ಅಂತೆಯೇ ದೊಡ್ಡಬೊಮ್ಮಸಂದ್ರದ ನರಸಿಂಹಯ್ಯ ಎಂಬುವವರಿಗೆ ತಲೆಗೆ ಹೊಡೆದಿದ್ದರು. ಅವರು ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ನಾವು ಹಿಂದೂಗಳು ನಾಮರ್ಧರಲ್ಲ. ಕೈ ಕಟ್ಟಿ ಕೂರುವುದಿಲ್ಲ. ಇದು ಎಚ್ಚರಿಕೆ ಗಂಟೆ. ಶಾಂತಿ ಕದಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಎಂದು ಹೇಳಿದರು.

ಕಿಡಿಗೇಡಿಗಳು ನಮ್ಮ ಮನೆಗಳ ಎದುರು ನಿಲ್ಲಿಸುವ ಕಾರಿಗೆ ಕಲ್ಲು ಹೊಡೆಯುತ್ತಾರೆ. ಇದು ಎಂ.ಎಸ್‌.ಪಾಳ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಗಂಗಮ್ಮನಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಚಾಲೆಂಜ್‌ ಕಟ್ಟಿ ಹುಡುಗಿಗೆ ಮುತ್ತು ಕೊಟ್ಟಿದ್ದರು. ಹಿಂದೂಗಳ ವಿರೋಧವಾಗಿ ಮಾಡಬಾರದು ಎಂದು ಬಹುಸಂಖ್ಯಾತರಾದ ನಾವು ಎಲ್ಲರೊಂದಿಗೆ ಒಗ್ಗಟ್ಟಿನಿಂದ ಹೋಗೋಣ ಎಂದುಕೊಂಡಿದ್ದೇವೆ. ಆದರೆ, ಇದಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.