ಮತದಾನ ಮಾಡಿದರೆ ಹೋಟೆಲಲ್ಲಿ ಉಚಿತ, ರಿಯಾಯಿತಿ ತಿಂಡಿ ವ್ಯವಸ್ಥೆ

| Published : Apr 19 2024, 01:30 AM IST / Updated: Apr 19 2024, 07:25 AM IST

ಮತದಾನ ಮಾಡಿದರೆ ಹೋಟೆಲಲ್ಲಿ ಉಚಿತ, ರಿಯಾಯಿತಿ ತಿಂಡಿ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಮತದಾನ ಪ್ರೋತ್ಸಾಹಿಸಲು ಮುಂದಾಗಿರುವ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘವು ಮತದಾನ ಮಾಡಿ ಬಂದವರಿಗೆ ಕೆಲ ಹೋಟೆಲ್‌ಗಳಲ್ಲಿ ಉಚಿತ, ರಿಯಾಯಿತಿ ದರದಲ್ಲಿ ತಿಂಡಿ ತಿನಿಸು, ಪಾನೀಯ ನೀಡುವುದಾಗಿ ತಿಳಿಸಿದೆ.

 ಬೆಂಗಳೂರು :  ನಗರದಲ್ಲಿ ಮತದಾನ ಪ್ರೋತ್ಸಾಹಿಸಲು ಮುಂದಾಗಿರುವ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘವು ಮತದಾನ ಮಾಡಿ ಬಂದವರಿಗೆ ಕೆಲ ಹೋಟೆಲ್‌ಗಳಲ್ಲಿ ಉಚಿತ, ರಿಯಾಯಿತಿ ದರದಲ್ಲಿ ತಿಂಡಿ ತಿನಿಸು, ಪಾನೀಯ ನೀಡುವುದಾಗಿ ತಿಳಿಸಿದೆ.

ನಗರದಲ್ಲಿ ಯಾವಾಗಲೂ ಮತದಾನ ಪ್ರಮಾಣ ಕಡಿಮೆ ಆಗುತ್ತಿರುತ್ತದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗಿರುವ ಬಹುಮುಖ್ಯವಾದ ಹಕ್ಕು ಮತದಾನ. ಏ.26ರಂದು ನಡೆಯಲಿರುವ ಮೊದಲ ಹಂತದ ಮತದಾನ ಪ್ರೋತ್ಸಾಹಿಸಲು ಸಂಘದಿಂದ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಪಿ.ಸಿ.ರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಕೇವಲ ಶೇ.54 ಮತದಾನವಾಗಿದೆ. ಹೆಚ್ಚು ಯುವಕರು, ವಿದ್ಯಾವಂತರನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರುವುದು ಸಮಂಜಸವಲ್ಲ. ಈ ಬಾರಿ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕರು ಸೇರಿದಂತೆ ಎಲ್ಲ ನಾಗರಿಕರೂ ಕೂಡ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು.

ಈ ಸಂಬಂಧ ಹೋಟೆಲ್‌ ಮಾಲೀಕರು ಹೋಟೆಲ್‌ಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಪೋಸ್ಟರ್‌ ಹಾಕುವುದು ಸೇರಿ ಇತರೆ ಜಾಗೃತಿ ಕಾರ್ಯಗಳನ್ನು ಮಾಡಲಿದ್ದೇವೆ. ಮತದಾನದ ದಿನದಂದು ಗ್ರಾಹಕರಲ್ಲಿ ಮತದಾನ ಮಾಡಿ ಎಂದು ಕೇಳಲಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯ ದಿನದಂದು ಮತದಾನ ಮಾಡಿ ಬಂದವರು ಕೈ ಬೆರಳಿಗೆ ಹಾಕಿದ ಶಾಯಿ ತೋರಿಸಿದರೆ ಹೋಟೆಲುಗಳಲ್ಲಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ತಿಂಡಿ-ತಿನಿಸು, ಪಾನೀಯಗಳನ್ನು ನೀಡಿ ಪ್ರೋತ್ಸಾಹಿಸಲಾಗಿತ್ತು. ಅದರಂತೆ ಈ ಬಾರಿಯೂ ಕೆಲವು ಹೋಟೆಲ್‌ಗಳಲ್ಲಿ ಅದೇ ರೀತಿಯ ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.